ಹಾವೇರಿಯಲ್ಲಿ ಡಿಜೆ, ಪಟಾಕಿ ಗದ್ದಲ ಇಲ್ಲದೆ ಗಣೇಶ ನಿಮಜ್ಜನ ಶಾಂತಿಯುತ

author img

By

Published : Sep 11, 2022, 8:44 PM IST

Updated : Sep 11, 2022, 9:41 PM IST

ganesh-nimajjana-at-haveri

ಹಾವೇರಿಯಲ್ಲಿ ಪುರಸಿದ್ದೇಶ್ವರ ಗಜಾನನ ಸಮಿತಿಯವರು ಸ್ಥಾಪಿಸಿರುವ ಗಣೇಶ ನಿಮಜ್ಜನ ಮೆರವಣಿಗೆ ಸಾಂಸ್ಕೃತಿಕವಾಗಿ, ಯಾವುದೇ ಡಿಜೆ, ಪಟಾಕಿ ಗದ್ದಲ ಇಲ್ಲದೆ ಜರುಗಿತು.

ಹಾವೇರಿ : ಸಾಮಾನ್ಯವಾಗಿ ಗಣೇಶ ನಿಮಜ್ಜನ ಮೆರವಣಿಗೆಯಲ್ಲಿ ಡಿಜೆ, ಪಟಾಕಿ ಸದ್ದು, ಗುಲಾಲ್ ಎರಚಾಟ ಇದ್ದೇ ಇರುತ್ತದೆ. ಮೆರವಣಿಗೆಯಲ್ಲಿ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿ ಗಣೇಶನಿಗೆ ವಿದಾಯ ಹೇಳುವುದು ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಆದರೆ ನಗರದ ಪುರಸಿದ್ದೇಶ್ವರ ಓಣಿಯ ಗಜಾನನ ಸಮಿತಿ ಇದಕ್ಕೆ ಅಪವಾದ. ಕಳೆದ 36 ವರ್ಷಗಳಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿರುವ ಪುರಸಿದ್ದೇಶ್ವರ ಗಜಾನನ ಸಮಿತಿ, ಕಳೆದ ನಾಲ್ಕು ವರ್ಷಗಳಿಂದ ಗಣೇಶ ನಿಮಜ್ಜನವನ್ನು ವಿಭಿನ್ನವಾಗಿ ಆಚರಿಸಿಕೊಂಡು ಬರುತ್ತಿದೆ.

ಇಲ್ಲಿ ಹಲವು ದಿನಗಳ ಪೂಜೆಯ ಬಳಿಕ ಗಣೇಶನ ನಿಮಜ್ಜನ ಮೆರವಣಿಗೆ ಮುಂಜಾನೆಯೇ ಆರಂಭವಾಗುತ್ತದೆ. ಈ ಮೆರವಣಿಗೆಯಲ್ಲಿ ಆನೆ ಗಮನ ಸೆಳೆಯುತ್ತದೆ. ಜೊತೆಗೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸುತ್ತವೆ. ಪುರಸಿದ್ದೇಶ್ವರ ಓಣಿಯಿಂದ ಆರಂಭವಾಗುವ ಈ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತದೆ. ಸಂಜೆ ವೇಳೆ ಮೆರವಣಿಗೆ ಅಂತ್ಯಗೊಳಿಸಿ ಗಣೇಶ ಮೂರ್ತಿಯನ್ನ ನದಿಯಲ್ಲಿ ನಿಮಜ್ಜನ ಮಾಡಲಾಗುತ್ತದೆ.

ಹಾವೇರಿಯಲ್ಲಿ ಡಿಜೆ, ಪಟಾಕಿ ಗದ್ದಲ ಇಲ್ಲದೆ ಗಣೇಶ ನಿಮಜ್ಜನ ಶಾಂತಿಯುತ

ಡಿಜೆ ಪಟಾಕಿ ಗದ್ದಲ ಇಲ್ಲದೆ ಗಣೇಶ ನಿಮಜ್ಜನ : ಇಲ್ಲಿನ ಮೆರವಣಿಗೆಯಲ್ಲಿ ಪಟಾಕಿ ಗುಲಾಲ್ ಮತ್ತು ಡಿಜೆ ಬಳಸಲಾಗುವುದಿಲ್ಲ. ಇದರಿಂದ ಶಬ್ದಮಾಲಿನ್ಯ, ವಾಯುಮಾಲಿನ್ಯ ತಡೆದಂತಾಗುತ್ತದೆ. ಇಲ್ಲಿ ಹಗಲು ಮೆರವಣಿಗೆ ನಡೆಯುವುದರಿಂದ ಎಲ್ಲರೂ ಗಣೇಶನ ಮೂರ್ತಿಯನ್ನು ಕಣ್ತುಂಬಿಕೊಳ್ಳಬಹುದು. ಮೆರವಣಿಗೆ ಸಾಗುವ ದಾರಿಯಲ್ಲಿ ಹಣ್ಣುಕಾಯಿ ನೈವೇದ್ಯ ನೀಡಿ ಗಣೇಶನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಮೆರವಣಿಗೆಯಲ್ಲಿ ಕ್ಲಿಯೋನೆಟ್ ವಾದನ ಮತ್ತು ಭಕ್ತಿ ಗೀತೆಗಳನ್ನು ಹಾಡುವ ಮೂಲಕ ಅರ್ಕೆಸ್ಟ್ರಾ ತಂಡದವರು ಗಮನ ಸೆಳೆಯುತ್ತಿದ್ದರು.

ಕಳೆದ ನಾಲ್ಕು ವರ್ಷಗಳಿಂದ ನಾವು ಈ ರೀತಿಯಲ್ಲಿ ಗಣೇಶ ನಿಮಜ್ಜನವನ್ನು ಮಾಡುತ್ತಾ ಬಂದಿದ್ದೇವೆ. ಕಳೆದ ಎರಡು ವರ್ಷ ಕೊರೊನಾದಿಂದಾಗಿ ಮೆರವಣಿಗೆ ನಡೆದಿರಲಿಲ್ಲ. ಈ ವರ್ಷ ಮತ್ತೆ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಸಮಿತಿಯ ಅಧ್ಯಕ್ಷ ಶಿವಯೋಗಿ ಯರೇಶಿಮೆ ಹೇಳಿದ್ದಾರೆ.

ಇದನ್ನೂ ಓದಿ :ಚಾಮರಾಜಪೇಟೆ ಗಣೇಶೋತ್ಸವ: ಡಿಜೆ ಅಬ್ಬರದಲ್ಲಿ ಮೂರ್ತಿಯ ಮೆರವಣಿಗೆ

Last Updated :Sep 11, 2022, 9:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.