ETV Bharat / state

ಹಾವೇರಿಯಲ್ಲಿ ನಿಲ್ಲದ ಕೋವಿಡ್ ಸಾವು ಪ್ರಮಾಣ: 'ಜನರ ನಿರ್ಲಕ್ಷ್ಯವೇ ಕಾರಣ'

author img

By

Published : Jun 20, 2021, 7:17 AM IST

Haveri Covid case
ಹಾವೇರಿ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪರಮೇಶ ಹಾವನೂರು

ಹಾವೇರಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ಕಡಿಮೆಯಾದರೂ, ಸಾವಿನ ಪ್ರಮಾಣ ಕಡಿಮೆಯಾಗಿಲ್ಲ. ಜನರು ಸರಿಯಾದ ಸಮಯದಲ್ಲಿ ಪರೀಕ್ಷೆ ಮಾಡಿಕೊಳ್ಳದೆ ನಿರ್ಲಕ್ಷ್ಯ ತೋರುವುದೇ ಇದಕ್ಕೆ ಕಾರಣ ಎಂದು ವೈದ್ಯರು ಹೇಳಿದ್ದಾರೆ.

ಹಾವೇರಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಪೀಡಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಮೂರಂಕಿ ಇದ್ದ ಸೋಂಕಿತರ ಸಂಖ್ಯೆ ಇದೀಗ ಎರಡಂಕಿಗೆ ಇಳಿದಿದೆ. ಪಾಸಿಟಿವಿಟಿ ದರ ಶೇ. 2ಕ್ಕೆ ಕುಸಿದಿದೆ.

ಆದರೆ, ಮರಣ ಪ್ರಮಾಣ ಮಾತ್ರ ಕಡಿಮೆಯಾಗುತ್ತಿಲ್ಲ. ಜಿಲ್ಲೆಯಲ್ಲಿ ಇನ್ನೂ ಕೋವಿಡ್ ಸೋಂಕಿತರ ಮರಣ ಪ್ರಮಾಣ ಶೇ. 3ರಷ್ಟಿದೆ. ಇದು ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ವೈದ್ಯರ ತಂಡ ಶ್ರಮಿಸುತ್ತಿದೆ. ಆದರೆ, ರೋಗಿಗಳ ನಿರ್ಲಕ್ಷ್ಯ ಮತ್ತು ಭಯವೇ ಹೆಚ್ಚಿನ ಸಾವು ಸಂಭವಿಸಲು ಕಾರಣ ಎಂದು ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪರಮೇಶ ಹಾವನೂರು ಹೇಳಿದ್ದಾರೆ.

ಹಾವೇರಿ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪರಮೇಶ ಹಾವನೂರು

ಕೊರೊನಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಜಿಲ್ಲಾಸ್ಪತ್ರೆ ಅಥವಾ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ತೋರಿಸಬೇಕು. ಆದರೆ, ಜನ ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಾರೆ. ಉಸಿರಾಟದ ಸಮಸ್ಯೆ ಅಧಿಕವಾಗಿ ಆಮ್ಲಜನಕದ ಕೊರತೆ ಕಾಣಿಸಿಕೊಳ್ಳುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಬರುತ್ತಾರೆ, ಅಷ್ಟರಲ್ಲಿ ಪರಿಸ್ಥಿತಿ ಕೈಮೀರಿರುತ್ತದೆ. ಸಕ್ಕರೆ ಖಾಯಿಲೆ ಅಧಿಕ ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ ಇರುವವರು ಅಧಿಕ ಸಂಖ್ಯೆಯಲ್ಲಿ ತೊಂದರೆಗೆ ಒಳಗಾಗುತ್ತಿದ್ದಾರೆ.

ಈ ರೀತಿಯ ಖಾಯಿಲೆ ಇರುವವರು ಕೊರೊನಾ ಹರಡುವ ಪ್ರದೇಶಗಳಿಂದ ದೂರ ಇರುವುದು ಒಳಿತು. 60 ವರ್ಷ ಮೇಲ್ಪಟ್ಟವರ ಮರಣ ಸಂಖ್ಯೆ ಸಹ ಅಧಿಕವಾಗಿದೆ. ಈ ವಯಸ್ಸಿನವರು ಕೊರೊನಾ ಹರಡುವ ಪ್ರದೇಶಗಳಿಂದ ದೂರವಿರಬೇಕು ಮತ್ತು ಮನೆಯಲ್ಲಿ ಆದಷ್ಟು ಪ್ರತ್ಯೇಕವಾಗಿದ್ದರೆ ಉತ್ತಮ ಎಂದು ವೈದ್ಯರು ಹೇಳಿದ್ದಾರೆ.

ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಸರ್ಕಾರಿ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಪಡಬೇಕು. ವೈದ್ಯರು ಇದು ಸಾಮಾನ್ಯ ನೆಗಡಿ, ಜ್ವರವೇ ಅಥವಾ ಕೊರೊನವೇ ಎನ್ನುವುದನ್ನು ಪರೀಕ್ಷಿಸಿ ನೋಡುತ್ತಾರೆ. ಅಗತ್ಯೆ ಬಿದ್ದರೆ ಕೊರೊನಾ ಟೆಸ್ಟ್ ಮಾಡಲಾಗುತ್ತದೆ. ಕೊರೊನಾ ದೃಢಪಟ್ಟರೆ ಮಾತ್ರ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ.

ರೋಗ ಲಕ್ಷಣಗಳಿಲ್ಲದವರು ಮನೆಯಲ್ಲಿ ಸೌಲಭ್ಯಗಳಿದ್ದರೆ ಅಲ್ಲಿಯೇ ಇದ್ದು ಚಿಕಿತ್ಸೆ ಪಡೆಯಬಹುದು. ರೋಗ ಲಕ್ಷಣ ಇದ್ದವರನ್ನು ಕೋವಿಡ್ ಕೇರ್ ಸೆಂಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತದೆ. ಆಮ್ಲಜನಕದ ಅಗತ್ಯ ಇರುವವರು ಮತ್ತು ಇತರ ರೋಗಗಳಿಂದ ಬಳಲುತ್ತಿರುವವರನ್ನು ಮಾತ್ರ ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಗ್ರಾಮೀಣ ಭಾಗದವರಾಗಲಿ ನಗರದವರಾಗಲಿ ಭಯಪಡುವ ಅಗತ್ಯವಿಲ್ಲ. ಕೋವಿಡ್ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ನಿಗಧಿತ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ ಎಂದು ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪರಮೇಶ ಹಾವನೂರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಜಲ ಮಂಡಳಿಗೂ ಸವಾಲಾದ ಕೋವಿಡ್ ಎರಡನೇ ಅಲೆ: 6 ಮಂದಿ ಅಧಿಕಾರಿ - ನೌಕರರು ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.