ETV Bharat / state

ಸಿಎಂ ಬೊಮ್ಮಾಯಿ ಹೆಸರಲ್ಲಿ 5 ಕೋಟಿ ರೂ. ಸಾಲ.. ಸ್ವಂತ ಕಾರು ಇಲ್ವಂತೆ!

author img

By

Published : Apr 15, 2023, 6:52 PM IST

ಸಿಎಂ ಬಸವರಾಜ ಬೊಮ್ಮಾಯಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. 5.98 ಕೋಟಿ ರೂ. ಚರಾಸ್ತಿ ಮತ್ತು 22.95 ಕೋಟಿ ರೂ. ಸ್ಥಿರಾಸ್ತಿ ಘೋಷಣೆ ಮಾಡಿರುವ ಬೊಮ್ಮಾಯಿ ಒಟ್ಟು 5.79 ಕೋಟಿ ರೂ. ಸಾಲ ಹೊಂದಿರುವುದಾಗಿ ಹೇಳಿದ್ದಾರೆ.

cm-basavaraj-bommai-announced-property-details
ಸಿಎಂ ಬೊಮ್ಮಾಯಿ ಹೆಸರಲ್ಲಿದೆ 5 ಕೋಟಿ ಸಾಲ.. ಸ್ವಂತ ಕಾರೂ ಇಲ್ಲ

ಹಾವೇರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶಿಗ್ಗಾವಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಚುನಾವಣಾ ಅಫಿಡವಿಟ್​​ ಸಲ್ಲಿಸಿರುವ ಬೊಮ್ಮಾಯಿ ಒಟ್ಟು 5.98 ಕೋಟಿ ರೂ. ಚರಾಸ್ತಿ ಮತ್ತು 22.95 ಕೋಟಿ ರೂ. ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಸ್ವಂತ ವಾಹನ ಹೊಂದಿಲ್ಲ, ಅಲ್ಲದೆ ಒಟ್ಟು 5.79 ಕೋಟಿ ರೂ. ಸಾಲವನ್ನು ಹೊಂದಿರುವುದಾಗಿ ಬೊಮ್ಮಾಯಿ ಹೇಳಿದ್ದಾರೆ.

ಇನ್ನು, ತಮ್ಮ ಪತ್ನಿ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ. 1.14 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. ತಮ್ಮ ಹಿಂದೂ ಅವಿಭಜಿತ ಕುಟುಂಬದಲ್ಲಿ 1.57 ಕೋಟಿ ರೂ. ಚರಾಸ್ತಿ, 19.20 ಕೋಟಿ ರೂ. ಸ್ಥಿರಾಸ್ತಿ ಇದೆ. ಪುತ್ರಿ ಹೆಸರಲ್ಲಿ 1.28 ಕೋಟಿ ರೂ. ಚರಾಸ್ತಿ ಹೊಂದಿರುವುದಾಗಿ ಸಿಎಂ ಹೇಳಿದ್ದಾರೆ. ತಮ್ಮ ಕೈಯಲ್ಲಿ 3 ಲಕ್ಷ ರೂ. ನಗದು, ಪತ್ನಿ ಕೈಯಲ್ಲಿ 50,000 ರೂ. ನಗದು, ಪುತ್ರಿ ಅದಿತಿ ಬೊಮ್ಮಾಯಿ ಕೈಯಲ್ಲಿ 25,000ರೂ. ನಗದು ಇದೆ. ಬೊಮ್ಮಾಯಿ ಬಳಿ ವಿವಿಧ ಬ್ಯಾಂಕ್‌ಗಳಲ್ಲಿ 40 ಲಕ್ಷ ರೂ. ಹೆಚ್ಚು ಠೇವಣಿ ಇದ್ದರೆ, ಪತ್ನಿ ಬಳಿ 27.6 ಲಕ್ಷ ರೂ. ಠೇವಣಿ ಇದೆ ಎಂಬ ಮಾಹಿತಿಯನ್ನು ಸಿಎಂ ಬೊಮ್ಮಾಯಿ ನೀಡಿದ್ದಾರೆ.

ಬಸವರಾಜ ಬೊಮ್ಮಾಯಿ ವಿವಿಧ ಕಂಪನಿಗಳಲ್ಲಿ 3.23 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಪತ್ನಿ ಸುಮಾರು 7 ಲಕ್ಷ ರೂ ಮತ್ತು ಪುತ್ರಿ 23 ಲಕ್ಷ ರೂ.ಗೂ ಅಧಿಕ ಹೂಡಿಕೆ ಮಾಡಿದ್ದಾರೆ. ಪುತ್ರ ಭರತ್‌ ಬೊಮ್ಮಾಯಿ ಹಾಗೂ ಪುತ್ರಿ ಸುಗುಣ ಎಂಬವರಿಗೆ ಬೊಮ್ಮಾಯಿ ಅವರು ಕ್ರಮವಾಗಿ 14.74 ಲಕ್ಷ ರೂ. ಹಾಗೂ 2 ಲಕ್ಷ ರೂ. ಸಾಲ ನೀಡಿದ್ದಾರೆ. ಅವಿಭಕ್ತ ಕುಟುಂಬದಿಂದ ಬಸವರಾಜ ಬೊಮ್ಮಾಯಿ 1.42 ಕೋಟಿ ರೂ. ಸಾಲವಾಗಿ ಪಡೆದಿದ್ದಾರೆ.

ಸಿಎಂ ಬೊಮ್ಮಾಯಿ ಅವರು 1.50 ಕೋಟಿ ರೂ. ಅಧಿಕ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಪತ್ನಿ ಬಳಿ 78.83 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು ಪುತ್ರಿ ಬಳಿ 53.84 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕುಟುಂಬದ ಬಳಿ 13.78 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಬೊಮ್ಮಾಯಿ ಬಳಿ ಒಂದು ಕೃಷಿ ಜಮೀನಿದ್ದು, ಕುಟುಂಬದ ಬಳಿ ಒಂದು ಜಮೀನಿದೆ. ಬೆಂಗಳೂರಿನ ಯಲಹಂಕ ಹಾಗೂ ಹುಬ್ಬಳ್ಳಿಯಲ್ಲಿ ಬೊಮ್ಮಾಯಿ ಅವರಿಗೆ ತಲಾ ಒಂದು ಎಕರೆ ಕೃಷಿಯೇತರ ಭೂಮಿಯೂ ಇದೆ. ಕುಟುಂಬದ ಹೆಸರಲ್ಲಿ ಹುಬ್ಬಳ್ಳಿಯಲ್ಲಿ ನಾಲ್ಕು ಎಕರೆ ಕೃಷಿಯೇತರ ಭೂಮಿ ಇದೆ. ಧಾರವಾಡದ ಇಂಡಸ್ಟ್ರಿಯಲ್‌ ಏರಿಯಾದಲ್ಲಿ, ದೊಡ್ಡಬಳ್ಳಾಪುರ ಮತ್ತು ಕಾರವಾರದಲ್ಲಿ ಬೊಮ್ಮಾಯಿ ಅವರ ವಾಣಿಜ್ಯ ಕಟ್ಟಡಗಳಿವೆ.

ಶಿಗ್ಗಾವಿಯಲ್ಲಿ ಮನೆ ಹೊಂದಿರುವ ಬಸವರಾಜ ಬೊಮ್ಮಾಯಿ ಅವರು, ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ಫ್ಲ್ಯಾಟ್‌ ಹೊಂದಿದ್ದಾರೆ. ಕುಟುಂಬದ ಹೆಸರಿನಲ್ಲಿ ಹುಬ್ಬಳ್ಳಿಯಲ್ಲಿ ಹಾಗೂ ಬೆಂಗಳೂರಿನ ಆರ್‌ಟಿ ನಗರದಲ್ಲಿ ಮನೆಗಳಿವೆ. ಬೊಮ್ಮಾಯಿ ಅವರ ಬಳಿ 22.95 ಕೋಟಿ ರೂ.ನ ಸ್ಥಿರಾಸ್ತಿ ಹಾಗೂ ಕುಟುಂಬದ ಬಳಿ 19.20 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ.

ಅತಿ ಹೆಚ್ಚು ಸಾಲ ಹೊಂದಿರುವ ಮುಖ್ಯಮಂತ್ರಿಗಳಲ್ಲಿ ಬೊಮ್ಮಾಯಿಗೆ 2ನೇ ಸ್ಥಾನ : ಬೊಮ್ಮಾಯಿ ಅವರಿಗೆ ಹತ್ತಾರು ಕಡೆಗಳಲ್ಲಿ ಕೈ ಸಾಲ ಹೊಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಐಸಿಐಸಿಐ ಬ್ಯಾಂಕ್‌ನಲ್ಲಿ 47.35 ಲಕ್ಷ ರೂ, ಎಸ್‌ಬಿಐನಲ್ಲಿ 37.47 ಲಕ್ಷ ರೂ. ಗೃಹ ಸಾಲವಿದೆ. 79 ಸಾವಿರದ ಇನ್ನೊಂದು ಗೃಹ ಸಾಲವೂ ಎಸ್‌ಬಿಐನಲ್ಲಿದೆ.

ಕುಟುಂಬದಿಂದ 1.42 ಕೋಟಿ ರೂ. ಸಾಲವನ್ನು ಬೊಮ್ಮಾಯಿ ಪಡೆದುಕೊಂಡಿದ್ದು, 9 ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದಲೂ ಅಪಾರ ಪ್ರಮಾಣದ ಸಾಲ ಪಡೆದುಕೊಂಡಿದ್ದಾರೆ. ಒಟ್ಟು 5.79 ಕೋಟಿ ರೂ. ಸಾಲ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು, 2021-22ರಲ್ಲಿ 41.09 ಲಕ್ಷ ರೂ. ಆದಾಯ ಗಳಿಸಿರುವುದಾಗಿ ಬೊಮ್ಮಾಯಿ ಹೇಳಿದ್ದು, ಪತ್ನಿ ಆದಾಯ 2.69 ಲಕ್ಷ ರೂ. ಎಂದು ಘೋಷಿಸಿಕೊಂಡಿದ್ದಾರೆ. ವಿಶೇಷವೆಂದರೆ ತಾವಾಗಲಿ, ತಮ್ಮ ಕುಟುಂಬದವರ ಬಳಿಯಾಗಲಿ ಯಾವುದೇ ವಾಹನಗಳಿಲ್ಲ ಎಂದು ಬೊಮ್ಮಾಯಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಸೋಮಣ್ಣ ಮತಬೇಟೆ ಶುರು; ವಸತಿ ಸಚಿವರಿಗೆ ಬೆನ್ನೆಲುಬಾಗಿ ನಿಂತ ರಾಜ್ಯ ನಾಯಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.