ನೆಚ್ಚಿನ ಹಠವಾದಿ ಹೋರಿಗೆ ಕಣ್ಣೀರ ವಿದಾಯ ಹೇಳಿದ ಗ್ರಾಮಸ್ಥರು

author img

By

Published : Sep 22, 2022, 4:16 PM IST

a-tearful-farewell-to-a-favorite-bull-at-haveri

ಹಲವು ಸ್ಪರ್ಧೆಗಳಲ್ಲಿ ಗೆದ್ದು ಅಖಾಡದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ 22ವರ್ಷದ ಹಠವಾದಿ ಹೋರಿ ಅಸುನೀಗಿದ್ದು, ಗ್ರಾಮಸ್ಥರು ಅಲಂಕೃತ ವಾಹನದಲ್ಲಿ ಮೆರವಣಿಗೆ ಮಾಡಿ ಕಣ್ಣೀರ ವಿದಾಯ ಹೇಳಿದರು.

ಹಾವೇರಿ: ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದಲ್ಲಿ ಬುಧವಾರ ನೀರವ ಮೌನ ಆವರಿಸಿತ್ತು. ಗ್ರಾಮಸ್ಥರಿಗೆ ತಮ್ಮ ನೆಚ್ಚಿನ ವ್ಯಕ್ತಿಯನ್ನೇ ಕಳೆದುಕೊಂಡ ಬೇಸರವಾಗಿತ್ತು. ಅಲ್ಲದೇ ಸುರೇಶ ಯಲ್ಲಪ್ಪ ಸೋಮನಕಟ್ಟಿ ಅವರ ಮನೆಯವರಿಗಂತೂ ತಮ್ಮ ಮನೆಯ ಸದಸ್ಯನ ಕಳೆದುಕೊಂಡ ದುಃಖವಾಗಿತ್ತು. ಇದಕ್ಕೆಲ್ಲ ಕಾರಣವಾಗಿದ್ದು ಸುರೇಶ್​ ಅವರು ಕಳೆದ ಹಲವು ವರ್ಷಗಳಿಂದ ಸಾಕಿಕೊಂಡು ಬಂದಿದ್ದ ನೆಚ್ಚಿನ ಕೊಬ್ಬರಿ ಹೋರಿ ಹಠವಾದಿ ಸಾವನ್ನಪ್ಪಿದ್ದು.

22 ವರ್ಷದ ಹಠವಾದಿ ಹೋರಿ : ಸುರೇಶ್​ ಅವರ ಮನೆಯ ಸದಸ್ಯನಂತಿದ್ದ ಕೊಬ್ಬರಿ ಹೋರಿ ಹಠವಾದಿ ಮಂಗಳವಾರ ಅಸುನೀಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲ ಸೇರಿ ಅದ್ಧೂರಿಯಾಗಿ ಮೆರವಣಿಗೆ ಮಾಡಿ ಹಠವಾದಿಗೆ ಬೀಳ್ಕೋಡುಗೆ ನೀಡಿದ್ದಾರೆ.

ನೆಚ್ಚಿನ ಹಠವಾದಿ ಹೋರಿಗೆ ಕಣ್ಣೀರ ವಿದಾಯ ಹೇಳಿದ ಗ್ರಾಮಸ್ಥರು

ದನಬೆದರಿಸುವ ಸ್ಪರ್ಧೆಯಲ್ಲಿ ಹಠವಾದಿ ಫೀಫಿ ಹೋರಿ ವಿಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು. ಹಾವೇರಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು. ತನ್ನ ಸಲಹಿದ್ದ ಸುರೇಶ ಕುಟುಂಬಕ್ಕೆ ಬೈಕ್, ಟಿವಿ, ಚಿನ್ನದ ಉಂಗುರ, ಸೈಕಲ್ ಸೇರಿದಂತೆ ವಿವಿಧ ಬಹುಮಾನಗಳನ್ನ ಗೆದ್ದುಕೊಟ್ಟಿತ್ತು.

ಪೈಲ್ವಾನರ ಎದೆ ನಡುಗಿಸುತ್ತಿದ್ದ ಹಠವಾದಿ : ಅಖಾಡದಲ್ಲಿ ಹಠವಾದಿ ಎಂದರೇ ಸಾಕು ಹೋರಿ ಹಿಡಿಯುವ ಪೈಲ್ವಾನರ ಎದೆಯಲ್ಲಿ ನಡುಕ ಹುಟ್ಟುತ್ತಿತ್ತು. ಹಠವಾದಿ ಗತ್ತಿಗೆ ಹಾವೇರಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾವಿರಾರು ಅಭಿಮಾನಿಗಳಿದ್ದರು. ಹಠವಾದಿ ಅಖಾಡಕ್ಕಿಳಿದರೆ ಜಯಘೋಷ ಮುಗಿಲು ಮುಟ್ಟುತ್ತಿತ್ತು. ಜೊತೆಗೆ ಅಭಿಮಾನಿಗಳು ಹಠವಾದಿ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂತಸ ಪಡುತ್ತಿದ್ದರು.

22 ವರ್ಷದ ಹಠವಾದಿ ವಯೋಸಹಜ ಖಾಯಲೆಗಳಿಂದ ಸಾವನ್ನಪ್ಪಿದ್ದು, ಸುರೇಶ್​ ಅವರು ಹಿಂದೂ ವಿಧಿವಿಧಾನಗಳಂತೆ ಅಂತ್ಯಕ್ರಿಯೆ ನಡೆಸಿದ್ದಾರೆ. ಬುಧವಾರ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಹಠವಾದಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೂರ ದೂರದ ಊರುಗಳಿಂದ ಆಗಮಿಸಿದ ಅಭಿಮಾನಿಗಳು ತಮ್ಮ ನೆಚ್ಚಿನ ಹಠವಾದಿಯ ಅಂತಿಮ ದರ್ಶನ ಪಡೆದರು. ಪುಷ್ಪಾರ್ಪಣೆ ಮಾಡಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಅಲಂಕೃತ ಟ್ರಾಕ್ಟರ್​ನಲ್ಲಿ ಅಂತಿಮ ಯಾತ್ರೆ : ನಂತರ ನಡೆದ ಅಂತಿಮ ಯಾತ್ರೆ ಸುರೇಶ ಮನೆಯಿಂದ ಆರಂಭಗೊಂಡು ಚಿಕ್ಕಲಿಂಗದಹಳ್ಳಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಿಂಗರಿಸಿದ ಟ್ರ್ಯಾಕ್ಟರ್‌ನಲ್ಲಿ ಹಠವಾದಿಯ ಶವವಿಟ್ಟು ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ಅಭಿಮಾನಿಗಳು ಗ್ರಾಮಸ್ಥರು ಹಠವಾದಿಗೆ ಅಂತಿಮ ನಮನ ಸಲ್ಲಿಸಿದರು. ಪಟಾಕಿ ಸಿಡಿಸಿ ಅರ್ಕೆಸ್ಟ್ರಾದೊಂದಿಗೆ ಹಠವಾದಿಯ ಅಂತಿಮಯಾತ್ರೆ ನಡೆಸಲಾಯಿತು. ಬಳಿಕ ಸುರೇಶ ತಮ್ಮ ಜಮೀನಿನಲ್ಲಿ ಹಠವಾದಿಯನ್ನು ಮಣ್ಣು ಮಾಡಲಾಯಿತು.

ಇದನ್ನೂ ಓದಿ :ಮೈಸೂರಿನ ಚಂದ್ರಮೌಳೇಶ್ವರ ದೇವರಿಗೆ 45 ವರ್ಷದ ನಂತರ ಆಭರಣ ಧಾರಣೆ ಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.