ETV Bharat / state

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರಥಮ ಬಾರಿಗೆ ವಿಶೇಷ ರಥದ ಸಿದ್ಧತೆ

author img

By

Published : Jan 4, 2023, 2:05 PM IST

Updated : Jan 4, 2023, 2:27 PM IST

86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷವಾದ ರಥ ನಿರ್ಮಾಣ - ರಥದಲ್ಲಿ ಸಮ್ಮೇಳನದ ಅಧ್ಯಕ್ಷರು ಕುಳಿತುಕೊಳ್ಳಲು ಆಸನ ವ್ಯವಸ್ಥೆ - ಮೆರವಣಿಗೆ ಸಾಗುವ ವೇಳೆ ಸಮ್ಮೇಳನಾಧ್ಯಕ್ಷರಾದ ಪ್ರೋ. ದೊಡ್ಡರಂಗೇಗೌಡರಿಗೆ ಮಾತ್ರ ರಥದಲ್ಲಿ ಅವಕಾಶ

a-special-chariot-for-86th-kannada-sahitya-sammelana
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ರಥ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ರಥದ ಸಿದ್ಧತೆ

ಹಾವೇರಿ: ನಗರದಲ್ಲಿ ನಡೆಯಲಿರುವ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಸರ್ಕಾರ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲು ತಯಾರಿಯಲ್ಲಿ ತೊಡಗಿವೆ. ವಿಶೇಷ ಎಂದರೆ ಈ ಬಾರಿ ಏಲಕ್ಕಿ ನಗರಿ ಹಾವೇರಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವು ಹಲವು ಪ್ರಥಮಗಳಿಗೆ ಸಾಕ್ಷಿಯಾಗುತ್ತಿದೆ.

ಹೌದು, ಅಂತಹ ಪ್ರಥಮಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ತಯಾರಾಗುತ್ತಿರುವ ರಥವೂ ಕೂಡ ಒಂದು. ಸಾಹಿತ್ಯ ಸಮ್ಮೇಳನದ ಪ್ರಮುಖ ಘಟ್ಟಗಳಲ್ಲಿ ಪ್ರಮುಖವಾದದ್ದು ಸಮ್ಮೇಳನಾಧ್ಯಕ್ಷರ ಮೆರವಣಿಗೆ. ಈ ಮೆರವಣಿಗೆಗಾಗಿ ವಿಶೇಷ ಕಲಾವಿದರಿಂದ ತೆರೆದ ಲಾರಿಯಲ್ಲಿ ರಥ ತಯಾರಿಸಲಾಗುತ್ತಿದೆ. ಕಲಾವಿದ ಷಹಜಹಾನ್ ಮುದಕವಿ ಪರಿಕಲ್ಪನೆಯಲ್ಲಿ ಸಿದ್ಧ ವಾಗುತ್ತಿದೆ. ಪ್ರಾಚೀನ ಕಾಲದಲ್ಲಿ ರಾಜರ ರಥಗಳ ಮಾದರಿಯಲ್ಲಿ ಈ ರಥ ತಯಾರಿಸಲಾಗುತ್ತಿದೆ ಎಂದು ಕಲಾವಿದ ಮುದಕವಿ ತಿಳಿಸಿದ್ದಾರೆ.

ರಥವು ನಾಡಧ್ವಜದ ಕೆಂಪು, ಹಳದಿ ವರ್ಣಗಳಿಂದ ರಾರಾಜಿಸುತ್ತಿದೆ. ಈ ರಥದ ಮುಂದೆ ಮತ್ತು ಹಿಂದೆ ಸಾಹಿತ್ಯ ಸಮ್ಮೇಳನದ ಲಾಂಛನ ಕಂಗೊಳಿಸುತ್ತಿದೆ. ರಥದಲ್ಲಿ ವಿಶೇಷವಾದ ಕಂಬಗಳು ಇರಲಿದ್ದು, ವೈಭವಪೂರ್ಣವಾಗಿದೆ. ಸಮ್ಮೇಳನಾಧ್ಯಕ್ಷರು ಕುಳಿತುಕೊಳ್ಳಲು ವಿಶೇಷವಾದ ಆಸನ ಸಿದ್ಧಪಡಿಸಲಾಗುತ್ತಿದೆ. ಮೆರವಣಿಗೆ ಸಾಗುವ ರಥದಲ್ಲಿ ಸಮ್ಮೇಳನಾಧ್ಯಕ್ಷರಾದ ಪ್ರೋ. ದೊಡ್ಡರಂಗೇಗೌಡರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದು ಸಮ್ಮೇಳನಾಧ್ಯಕ್ಷರಿಗೆ ಗೌರವ ಸಲ್ಲಿಸುವ ಮೂಲಕ ಕನ್ನಡ ಭಾಷೆಗೆ ಸಾಹಿತ್ಯಕ್ಕೆ ಸಲ್ಲಿಸುವ ಗೌರವ ಎನ್ನುತ್ತಾರೆ ಕಲಾವಿದ ಮುದಕವಿ.

ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನ : ಮಹಿಳೆಯರ ಸೇವೆಗೆ ಮಹಿಳಾ ಸ್ತ್ರೀ ಶಕ್ತಿ ಸಮಿತಿ

ಸಮ್ಮೇಳನಾಧ್ಯಕ್ಷರಿಗೆ ರಥದಲ್ಲಿ ವಿಶೇಷವಾದ ಛತ್ರಿ ಹಾಕಲಾಗಿದೆ. ಮೆರವಣಿಗೆ ನಡೆಯುವ ವೇಳೆ ಕಲಾವಿದರು ಛತ್ರಿ, ಚಾಮರ ಹಿಡಿದು ಸಾಗಲಿದ್ದಾರೆ. ಇದೊಂದು ಕನ್ನಡ ಭಾಷೆಯನ್ನು ಮೆರೆಸುವ ಮೆರವಣಿಗೆಯಾಗಿದ್ದು, ಸಂಪೂರ್ಣ ಕನ್ನಡಮಯವಾಗಿರಲಿದೆ. ಸುಮಾರು 15 ಕಲಾವಿದರ ತಂಡವು ಕಳೆದ 10 ದಿನಗಳಿಂದ ಈ ರಥ ತಯಾರಿಸುತ್ತಿದೆ. ಕನ್ನಡ ಅಸ್ಮಿತೆ ಸಾರುವ ಈ ರಥವನ್ನು ಇದೇ ಮೊದಲ ಬಾರಿಗೆ ವಿಶೇಷ ಮಾದರಿಯಲ್ಲಿ ಸಿದ್ಧಪಡಿಸಲಾಗುತ್ತಿದೆ.

ಇದನ್ನೂ ಓದಿ: ನಾಡು, ನುಡಿ ಜಾಗೃತಿಗಾಗಿ ಹ್ಯಾಂಡಲ್ ಇಲ್ಲದ ಬೈಕ್​ನಲ್ಲಿ ಹಾವೇರಿಗೆ ಹೊರಟ ಸಾಹಸಿ, 360 ಕಿ.ಮೀ ಪ್ರಯಾಣ!

ಈ ಹಿಂದೆ ನಡೆದ ಸಮ್ಮೇಳನಗಳಲ್ಲಿ ತೆರೆದ ಜೀಪು ಸೇರಿದಂತೆ ವಿವಿಧ ವಾಹನಗಳಲ್ಲಿ ಸಮ್ಮೇಳಾನಾಧ್ಯಕ್ಷರನ್ನು ವೇದಿಕೆಗೆ ಕರೆತರಲಾಗುತ್ತಿತ್ತು. ಆದರೆ, ಈ ಸಲ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಸಮ್ಮೇಳನದ ಅಧ್ಯಕ್ಷರಿಗೆ ಅದ್ಭುತ ರಥ ರೆಡಿಯಾಗುತ್ತಿದೆ. ಜಿಲ್ಲಾಡಳಿತದಿಂದ ವಿಶೇಷ ರಥ ಸಿದ್ದವಾಗುತ್ತಿರುವ ಬಗ್ಗೆ ಕನ್ನಡ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮ್ಮೇಳನದ ವೇದಿಕೆ ಪಕ್ಕದಲ್ಲಿ ನಿಲ್ಲಿಸಿರುವ ಅಧ್ಯಕ್ಷರ ರಥ ಈಗಾಗಲೇ ಪ್ರಮುಖ ಆಕರ್ಷಣೆಯಾಗಿ ಮಾರ್ಪಟ್ಟಿದೆ. ವೇದಿಕೆ ನೋಡಲು ಆಗಮಿಸುತ್ತಿರುವ ಕನ್ನಡದ ಅಭಿಮಾನಿಗಳು ರಥದ ಮುಂದೆ ನಿಂತು ಸೆಲ್ಪಿ, ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿಳ್ಳುತ್ತಿರುವುದು ಕಂಡು ಬರುತ್ತಿದೆ.

ಮೂರು ದಿನಗಳ ಕನ್ನಡ ಹಬ್ಬ : ಹಾವೇರಿಯಲ್ಲಿ ನಗರದಲ್ಲಿ ಇದೇ ಜನವರಿ 6, 7 ಮತ್ತು 8ರಂದು 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದೇ ಮೊದಲ ಬಾರಿಗೆ ಹಾವೇರಿ ನಗರದಲ್ಲಿ ಸಮ್ಮೇಳನ ಆಯೋಜನೆಗೊಂಡಿದೆ.

ಇದನ್ನೂ ಓದಿ: ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನ ದುರಂತ ಸಮ್ಮೇಳನ: ಕೆ ಸಿ ಅಕ್ಷತಾ ಅಪಸ್ವರ

Last Updated : Jan 4, 2023, 2:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.