ಹರಿಯುತ್ತಿದೆ ಸರ್ಕಾರದಿಂದ ಕೋಟಿ ಕೋಟಿ ಹಣದ ಹೊಳೆ : ಹರಿಯುವುದ್ಯಾವಾಗ ಎತ್ತಿನಹೊಳೆ?

author img

By

Published : Sep 8, 2021, 5:36 PM IST

Updated : Sep 8, 2021, 6:51 PM IST

project

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಮುಂದಿನ ತಿಂಗಳು ಪ್ರಾಯೋಗಿಕ ಚಾಲನೆ ದೊರೆಯಲಿದೆ ಎಂದು ಸಚಿವ ಗೋವಿಂದ ಕಾರಜೋಳ ಘೋಷಿಸಿದ್ದಾರೆ..

ಹಾಸನ : ಮುಂದಿನ ತಿಂಗಳು ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಪ್ರಾಯೋಗಿಕ ಚಾಲನೆ ಸಿಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಎತ್ತಿನಹೊಳೆ ಕಾಮಗಾರಿ ಪರಿಶೀಲನೆ ನಡೆಸಿದ ಸಚಿವರು

ಮೂರುಪಟ್ಟು ಹೆಚ್ಚಾದ ವೆಚ್ಚ : ಎತ್ತಿನಹೊಳೆ ಯೋಜನೆ ರಾಜ್ಯದ ಐದು ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆ. ಆದರೆ, ಅದು ಆರಂಭವಾದಾಗ 8,300 ಕೋಟಿ ರೂ. ಇದ್ದ ಯೋಜನೆಯ ವೆಚ್ಚ ಈಗ ಬರೊಬ್ಬರಿ 23 ಸಾವಿರ ಕೋಟಿ ರೂ. ಆಗಿದೆ. ಮೂರುಪಟ್ಟು ವೆಚ್ಚ ಹೆಚ್ಚಾದರೂ ಕಾಮಗಾರಿ ಮಾತ್ರ ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಮುಂದಿನ ತಿಂಗಳು ಪ್ರಾಯೋಗಿಕ ಚಾಲನೆ : 2012ರಲ್ಲಿ ಆರಂಭಗೊಂಡಿದ್ದ ರಾಜ್ಯದ ಹಾಸನ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವದ ನದಿ ತಿರುವು ಯೋಜನೆಯಾದ ಎತ್ತಿನಹೊಳೆ ಯೋಜನೆ ಯಾವಾಗ ಆರಂಭವಾಗುತ್ತದೆ ಎಂದು ಕಾದಿದ್ದ ಜನರಿಗೆ ಮುಂದಿನ ತಿಂಗಳು ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಪ್ರಾಯೋಗಿಕ ಚಾಲನೆ ಸಿಗುತ್ತದೆ ಎಂದು ಹೇಳಿ ಕಾಮಗಾರಿ ಪರಿಶೀಲನೆ ನಡೆಸಿದ ಜಲಸಂಪನ್ಮೂಲ ಸಚಿವರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಹಿನ್ನೆಲೆ ಉಳಿದ ಕಾಮಗಾರಿ ಬೇಗ ಮುಗಿಯುವ ಭರವಸೆ ಸಿಕ್ಕಂತಾಗಿದೆ.

project
ಎತ್ತಿನಹೊಳೆ ಕಾಮಗಾರಿ ಪರಿಶೀಲನೆ ನಡೆಸಿದ ಸಚಿವ

ಕಾಮಗಾರಿ ಸ್ಥಳಕ್ಕೆ ಸಚಿವರ ಭೇಟಿ : ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಸಚಿವರು, ಅಧಿಕಾರಿಗಳಿಂದ ಮಾಹಿತಿ ಪಡೆದರು. 2012ರಲ್ಲಿ ಆರಂಭಗೊಂಡ ಯೋಜನೆ ಕಾಮಗಾರಿ ವಿಳಂಬದಿಂದ ಇಂದು 23 ಸಾವಿರ ಕೋಟಿವರೆಗೂ ಬಂದು ನಿಂತಿದೆ.

ಇನ್ನೂ ತಡ ಆಗಬಾರದು. ಮೊದಲ ಹಂತದ ಯೋಜನೆಯಲ್ಲಿ 36 ಎಕರೆ ಭೂಸ್ವಾಧೀನ ಮಾತ್ರ ಬಾಕಿ ಇದೆ. ಮಂಗಳವಾರ ಡಿಸಿ ಜೊತೆಗೆ ಸಭೆ ಮಾಡಿದ್ದು, ವಿವಾದ ಇರುವ ಭೂಮಿಯ ಪರಿಹಾರ ನಿಧಿಯನ್ನು ಕೋರ್ಟ್​​ನಲ್ಲಿ ಡೆಪಾಸಿಟ್ ಮಾಡಿ ನಮಗೆ ಭೂಮಿ ಸ್ವಾಧೀನ ಪಡಿಸಿಕೊಡಲು ಸೂಚನೆ ನೀಡಲಾಗಿದೆ ಎಂದರು.

ನೀರು ಸಿಗುತ್ತದೆ : ಹಾಸನ ಜಿಲ್ಲೆಯ ಪಶ್ಚಿಮಘಟ್ಟದಲ್ಲಿ ಸುರಿಯುವ ಮಳೆಯಿಂದ ಹಲವು ನದಿ ತೊರೆಗಳು ತುಂಬಿ ಹರಿಯುತ್ತವೆ. ಈ ನೀರೆಲ್ಲಾ ವ್ಯರ್ಥವಾಗಿ ಸಮುದ್ರ ಸೇರುವುದು ಅಧ್ಯಯನದಿಂದ ತಿಳಿಯಿತು.

project
ಎತ್ತಿನಹೊಳೆ ಕಾಮಗಾರಿ ಪರಿಶೀಲನೆ

ಹೀಗಾಗಿ, ಮಳೆಗಾಲದಲ್ಲಿ ಇಲ್ಲಿ ಸಿಗುವ 24 ಟಿಎಂಸಿ ನೀರನ್ನು ಮೊದಲನೆ ಹಂತದಲ್ಲಿ ಪೈಪ್‌ಲೈನ್ ಮೂಲಕ ಹೆಬ್ಬನಹಳ್ಳಿವರೆಗೆ ನೀರು ಹರಿಸುವುದು ಅಲ್ಲಿಂದ ದೊಡ್ಡ ಕಾಲುವೆಗಳ ಮೂಲಕ ತುಮಕೂರಿಗೆ ನೀರು ಹರಿಸಿ ಅಲ್ಲಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರಿಗೆ ಕುಡಿಯುವ ನೀರು ಕೊಡುವುದು ಈ ಯೋಜನೆಯ ಪ್ರಮುಖ ಉದ್ದೇಶ.

ಆದರೆ, ಇಷ್ಟು ಪ್ರಮಾಣದ ನೀರು ಸಿಗುತ್ತಾ ಎನ್ನುವುದು ಹಲವರ ಪ್ರಶ್ನೆಯಾಗಿದೆ. ಈ ಬಗ್ಗೆ ಉತ್ತರಿಸಿದ ಸಚಿವರಾದ ಗೋವಿಂದ ಕಾರಜೋಳ, ಈ ಬಗ್ಗೆ ಗೊಂದಲ ಬೇಡ, ನೀರು ಸಿಗುತ್ತದೆ ಎನ್ನುವ ಮಾಹಿತಿ ಇದೆ. ಅದನ್ನೇ ನಾನು ಹೇಳಿದ್ದೇನೆ ಎಂದು ತಿಳಿಸಿದ್ರು.

ಭೂ ಪರಿಹಾರ ನೀಡುವುದಕ್ಕೆ ನಮಗೆ ಅನುದಾನದ ಕೊರತೆ ಇಲ್ಲ. ಡಿಸಿ ಖಾತೆಯಲ್ಲಿ 200 ಕೋಟಿ ರೂ. ಹಣ ಇದೆ. ಇನ್ನು, ಮೊದಲ ಹಂತದ ಕಾಮಗಾರಿಗೆ ವಿದ್ಯುತ್ ಸಂಪರ್ಕವೂ ಈ ತಿಂಗಳ ಅಂತ್ಯಕ್ಕೆ ಮುಗಿಯಲಿದೆ. ಈ ಯೋಜನೆ ಖಂಡಿತಾ ಈ ಭಾಗದ ಜನರಿಗೆ ಅನುಕೂಲ ಆಗಲಿದೆ ಎಂದು ಕಾರಜೋಳ ತಿಳಿಸಿದ್ರು.

project
ಎತ್ತಿನಹೊಳೆ ಕಾಮಗಾರಿ ಪರಿಶೀಲನೆ

ನೀರು ಹರಿಯದಿದ್ದರೆ ಇದೊಂದು ನಿರರ್ಥಕ ಯೋಜನೆ : ಮೊದಲ ಹಂತದ ಕಾಮಗಾರಿಗೆ ಚಾಲನೆ ಅಂದರೆ ಎಲ್ಲಾ ಸಿದ್ಧಗೊಂಡಿರುವ ಈ ಸ್ಥಳದಲ್ಲಿ ಮೋಟರ್ ಚಾಲನೆ ಮಾಡಿ ನೀರೆತ್ತುವ ಕಾರ್ಯಕ್ಕೆ ಚಾಲನೆ ಕೊಡಬಹುದು. ಆದರೆ, ನೀರು ಹರಿಸಲು ಬೇಕಾದ ಕೆಲಸ ಇನ್ನೂ ಆಗಬೇಕಿದೆ.

ಇನ್ನೂ ಮೊದಲನೇ ಹಂತದಲ್ಲೇ 9 ಕಿ.ಮೀ ಪೈಪ್‌ಲೈನ್ ಅಳವಡಿಕೆ ಆಗಬೇಕಿದೆ. ಯೋಜನೆ ಆಗುತ್ತದೆ ಎನ್ನುವ ಭರವಸೆ ನಮಗಿದೆ. ಮುಂದಿನ ವರ್ಷದೊಳಗೆ ಮೊದಲ ಹಂತದಲ್ಲಿ ನೀರು ಹರಿಯದಿದ್ದರೆ ಇದೊಂದು ನಿರರ್ಥಕ ಯೋಜನೆ ಆಗಲಿದೆ ಎಂದು ಶಾಸಕ ಶಿವಲಿಂಗೇಗೌಡ ಮತ್ತು ಬೇಲೂರು ಶಾಸಕ ಕೆ ಎಸ್ ಲಿಂಗೇಶ್ ಅಭಿಪ್ರಾಯಪಟ್ಟಿದ್ದಾರೆ.

Last Updated :Sep 8, 2021, 6:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.