ETV Bharat / state

ಶ್ರವಣಬೆಳಗೊಳ: ಅಪ್ರಕಟಿತ ಮತ್ತೊಂದು ದತ್ತಿ ಶಾಸನ ಪತ್ತೆ

author img

By

Published : Aug 12, 2021, 9:57 PM IST

ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಮತ್ತೊಂದು ಅಪ್ರಕಟಿತ ಶಾಸನ ಪತ್ತೆಯಾಗಿದೆ. ಸ್ಥಳೀಯ ಸಂಶೋಧಕರಾದ ದಿನೇಶ್ ಹೇಳುವ ಪ್ರಕಾರ ಇದೊಂದು 'ದಾನ ಶಾಸನ ಅಥವಾ ದತ್ತಿ ಶಾಸನ' ಎನ್ನಲಾಗುತ್ತದೆ.

inscription
ಅಪ್ರಕಟಿತ ಮತ್ತೊಂದು ದತ್ತಿ ಶಾಸನ ಪತ್ತೆ

ಹಾಸನ/ಶ್ರವಣಬೆಳಗೊಳ: ಗೊಮ್ಮಟನ ಬೀಡು ಶ್ರವಣಬೆಳಗೊಳದಲ್ಲಿ ಮತ್ತೊಂದು ಅಪ್ರಕಟಿತ ಶಾಸನ ಪತ್ತೆಯಾಗಿದೆ. ಆದರೆ ಈ ಶಾಸನ ಯಾವುದು ಎಂಬುದರ ಬಗ್ಗೆ ಸಂಶೋಧನೆಯಿಂದ ತಿಳಿದು ಬರಬೇಕಿದೆ.

ವಿಶ್ವದಲ್ಲಿ ಅತಿ ಹೆಚ್ಚು ಎಫಿಗ್ರಾಫಿಯಾ ಕರ್ನಾಟಿಕ-2ರಲ್ಲಿ ಇರುವ ಅತಿ ದೊಡ್ಡ ಶಾಸನಗಳನ್ನು ಹೊಂದಿರುವುದು ಹಾಸನ. ಜೊತೆಗೆ ಸಾವಿರಾರು ಶಿಲಾ-ಶಾಸನಗಳು ಉತ್ಖನನಗೊಂಡಿರೋ ಜಿಲ್ಲೆಯು ಇದಾಗಿದ್ದು, ಈಗ ಅದಕ್ಕೆ ಮತ್ತೊಂದು ಬಂಡೆ ಶಾಸನ ಸೇರ್ಪಡೆಯಾಗಿದೆ. ಮೇಲ್ನೋಟಕ್ಕೆ ಅಲ್ಲಿನ ಸ್ಥಳೀಯ ಸಂಶೋಧಕರಾದ ದಿನೇಶ್ ಹೇಳುವ ಪ್ರಕಾರ ಇದೊಂದು 'ದಾನ ಶಾಸನ ಅಥವಾ ದತ್ತಿ ಶಾಸನ' ಎನ್ನಲಾಗುತ್ತದೆ.

inscription
ಶ್ರವಣಬೆಳಗೊಳದಲ್ಲಿ ಅಪ್ರಕಟಿತ ಶಾಸನ ಪತ್ತೆ

7 ಸಾಲುಗಳ ಹಳಗನ್ನಡ ಲಿಪಿ: ಶ್ರವಣಬೆಳಗೊಳ-ಕೆ.ಆರ್ ಪೇಟೆ ಮತ್ತು ನಾಗಮಂಗಲ ಸಂಪರ್ಕಿಸುವ ರಸ್ತೆಗೆ ಹೊಂದಿಕೊಂಡಿರುವ ವಿಂದ್ಯಗಿರಿ ಬೆಟ್ಟದ ತಪ್ಪಲಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ಈ ಶಾಸನ ಪತ್ತೆಯಾಗಿದೆ. ಸುಕುಮಾರ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಪಶ್ಚಿಮಾಭಿಮುಖವಾಗಿ ಬರೆದಿರುವ ಬಂಡೆಕಲ್ಲಿನ ಮೇಲೆ ಕೆತ್ತಿರುವ ಸುಮಾರು 7 ಸಾಲುಗಳ ಹಳಗನ್ನಡ ಲಿಪಿಯಲ್ಲಿರುವ ಶಿಲಾಲೇಖ ಕುತೂಹಲ ಮೂಡಿಸಿದೆ.

ಅಪ್ರಕಟಿತ ಮತ್ತೊಂದು ದತ್ತಿ ಶಾಸನ ಪತ್ತೆ

10 ರಿಂದ 11 ನೇ ಶತಮಾನದಲ್ಲಿ ರಚಿಸಿರುವ ದತ್ತಿ ಶಾಸನ: ಈ ಬಗ್ಗೆ ಅಲ್ಲಿನ ಸ್ಥಳೀಯ ಹಿರಿಯ ಸಂಶೋಧಕರಾದ ಹಾಗೂ ಶ್ರೀಮತಿ ಶ್ರೀ ಯಾಲಮ್ಮ ನೇಮಿರಾಜಯ್ಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಶಾಸನದ ಕುರಿತು ಹೀಗೆ ಹೇಳುತ್ತಾರೆ.ಈ ಶಾಸನ “ಎಪಿಗ್ರಾಫಿಯ ಕರ್ನಾಟಿಕ” ಸಂಪುಟದಲ್ಲಿ ಈವರೆಗೆ ಪ್ರಕಟವಾಗದ ಶಾಸನವಾಗಿದ್ದು, ಲಿಪಿಯ ಆಧಾರದ ಮೇಲೆ ಸುಮಾರು 10 ರಿಂದ 11 ನೇ ಶತಮಾನದಲ್ಲಿ ರಚಿಸಿರುವ ದತ್ತಿ ಶಾಸನ ಎಂದು ಕರೆಯಬಹುದಾಗಿದೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ. ಸಂಬಂಧಪಟ್ಟ ಉಪಕರಣಗಳಿಂದ ಶಾಸನದ ಅಚ್ಚನ್ನು ತೆಗೆದು ಪ್ರಕಟ ಮಾಡಿದ ನಂತರವಷ್ಟೇ ಈ ಶಾಸನದ ಸಂಪೂರ್ಣ ಮಾಹಿತಿ ತಿಳಿಯುತ್ತದೆ ಎನ್ನುತ್ತಾರೆ.

573 ಶಿಲಾ ಶಾಸನಗಳು: ಶ್ರವಣಬೆಳಗೊಳ ಹೋಬಳಿ ಶಾಸನಗಳ ನೆಲೆಬೀಡಾಗಿದ್ದು, ಇಲ್ಲಿನ ಚಂದ್ರಗಿರಿ ಚಿಕ್ಕಬೆಟ್ಟದಲ್ಲಿ 271, ವಿಂಧ್ಯಗಿರಿ ದೊಡ್ಡಬೆಟ್ಟದಲ್ಲಿ 172, ಶ್ರವಣಬೆಳಗೊಳ ಪಟ್ಟಣ ವ್ಯಾಪ್ತಿಯಲ್ಲಿ 80 ಹಾಗೂ ಅಕ್ಕ-ಪಕ್ಕದ ಗ್ರಾಮಗಳಲ್ಲಿ 50 ಶಾಸನಗಳು ಸೇರಿ ಒಟ್ಟು 573 ಶಿಲಾ ಶಾಸನಗಳು ಒಂದು ಪ್ರದೇಶದಲ್ಲಿ ದೊರಕಿವೆ. ಶ್ರೀಕ್ಷೇತ್ರದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಶಿಲಾ ಶಾಸನಗಳು, ತಾಳೆಗರಿ ಶಾಸನಗಳು ಹಾಗೂ ಇನ್ನಿತರ ಪುರಾತನ ಕುರುಹುಗಳನ್ನು ಸಂರಕ್ಷಿಸುವ ಕೈಂಕರ್ಯ ಮಾಡುತ್ತಿದ್ದಾರೆ.

ಹಲವಾರು ಶಿಲಾ ಶಾಸನಗಳು ದೊರೆಯುವ ಸಾಧ್ಯತೆ: ಇನ್ನೂ ಈ ಭಾಗದಲ್ಲಿ ಹಲವಾರು ಶಿಲಾ ಶಾಸನಗಳು ದೊರೆಯುವ ಸಾಧ್ಯತೆಯಿದ್ದು, ಎಷ್ಟೋ ಶಾಸನಗಳು ತೆರೆಮರೆಯಲ್ಲಿವೆ. ಪುರಾತತ್ವ ಇಲಾಖೆ ತಂಡಗಳನ್ನು ರಚಿಸಿ ಮಣ್ಣಿನಲ್ಲೋ, ಪೊದೆಗಳಲ್ಲೋ ಹುದುಗಿರುವ, ಬೆಳಕಿಗೆ ಬಾರದಿರುವ ಶಿಲಾಲೇಖಗಳನ್ನು ಹುಡುಕಿ ಸಂರಕ್ಷಣೆ ಮಾಡಿ, ಅದರಲ್ಲಿರುವ ಮೌಲಿಕ ವಿಷಯಗಳನ್ನು ಹೊರಜಗತ್ತಿಗೆ ತಿಳಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎನ್ನುತ್ತಾರೆ ಡಾ. ದಿನೇಶ್ .

ETV Bharat Logo

Copyright © 2024 Ushodaya Enterprises Pvt. Ltd., All Rights Reserved.