ETV Bharat / state

ಸರ್ಕಾರಕ್ಕೆ ಸೆಡ್ಡು ಹೊಡೆದು ರೈತರು ತೋಡಿದ್ದ ಖೆಡ್ಡಾಗೆ ಬಿದ್ದ ಮರಿಯಾನೆ!

author img

By

Published : Jan 2, 2023, 1:40 PM IST

ಸರ್ಕಾರಕ್ಕೆ ಸೆಡ್ಡು ಹೊಡೆದು ರೈತರು ತೋಡಿದ್ದ ಖೆಡ್ಡಾಗೆ ಮರಿಯಾನೆಯೊಂದು ಬಿದ್ದಿರುವ ಘಟನೆ ಸಕಲೇಶಪುರದಲ್ಲಿ ನಡೆದಿದೆ.

wild elephant
ಮರಿಯಾನೆ

ರೈತರು ತೋಡಿದ್ದ ಖೆಡ್ಡಾಗೆ ಬಿದ್ದ ಮರಿಯಾನೆ

ಹಾಸನ: ಮಲೆನಾಡು ಭಾಗದಲ್ಲಿ ಹೆಚ್ಚಾಗುತ್ತಿರುವ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ದೊರಕಿಸಿ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಡಿಸೆಂಬರ್ 29ರಂದು ಸಕಲೇಶಪುರದ ಹೊಸಕೊಪ್ಪಲಿನಲ್ಲಿ ಸರ್ಕಾರಕ್ಕೆ ಸೆಡ್ಡು ಹೊಡೆದು ಗ್ರಾಮಸ್ಥರು ತೋಡಿದ್ದ ಖೆಡ್ಡಾಕ್ಕೆ ಇದೀಗ ಮರಿಯಾನೆ ಬಿದ್ದಿದೆ.

ನಿನ್ನೆ ರಾತ್ರಿ ಹೊಸಕೊಪ್ಪಲು ಗ್ರಾಮದ ಮಹಿಂದ್ರ ಎಂಬುವರ ತೋಟ ಪ್ರವೇಶಿಸಿದ ಕಾಡಾನೆಗಳ ಹಿಂಡು ದಾಳಿ ನಡೆಸಿ, ಬೆಳೆ ಹಾಳು ಮಾಡಿದ್ದವು. ಇಂದು ಬೆಳಗ್ಗೆ ವಾಪಸ್ ಕಾಡಿಗೆ ತೆರಳುವಾಗ ರೈತರು ತೋಡಿದ್ದ ಗುಂಡಿಗೆ ಮರಿಯಾನೆ ಬಿದ್ದಿದ್ದು, ಸಿಕ್ಕಿಹಾಕಿಕೊಂಡಿದೆ.

'ಕಾಡಾನೆಗಳು ಪ್ರತಿನಿತ್ಯ ನಾವು ಬೆಳೆದ ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ. ಅವುಗಳು ಓಡಾಡಿದರೂ ಬೆಳೆ ಹಾಳಾಗುತ್ತಿದೆ. ಕಾಫಿ ತೋಟವಂತೂ ಸಂಪೂರ್ಣವಾಗಿ ಹಾಳಾಗುತ್ತಿದೆ. ಈ ಭಾಗದ ಪ್ರಾಣಿಗಳು ಮತ್ತು ಮಾನವ ಸಂಘರ್ಷವನ್ನು ತಡೆಯಲು ಶಾಶ್ವತ ಪರಿಹಾರ ಹುಡುಕಿಕೊಡಿ ಅಂತ ಕಳೆದ ಹತ್ತಾರು ವರ್ಷಗಳಿಂದ ಅರಣ್ಯ ಇಲಾಖೆ ಮತ್ತು ಸರ್ಕಾರಕ್ಕೆ ನಿರಂತರವಾಗಿ ಮನವಿ ಮಾಡಿದ್ದೇವೆ. ಜೊತೆಗೆ ಪ್ರತಿಭಟನೆಯ ಮೂಲಕವೂ ಆಗ್ರಹ ಮಾಡಿದ್ವಿ. ಆದರೆ, ಶಾಶ್ವತ ಪರಿಹಾರ ದೊರಕಿಸಿ ಕೊಡುವಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ಮುಂದಾಗಿಲ್ಲ. ಹಾಗಾಗಿ, ನಾವೇ ಈ ರೀತಿಯ ಹೊಸ ಯೋಜನೆ ಮಾಡಿದ್ದೆವು' ಎಂದು ಹೊಸಕೊಪ್ಪಲು ಗ್ರಾಮಸ್ಥ ಚರಣ್ ತಿಳಿಸಿದರು.

ಇದನ್ನೂ ಓದಿ: ಕಾಡಾನೆ ದಾಳಿಗೆ ಚಿಕ್ಕಮಗಳೂರಲ್ಲಿ ರೈತ ಬಲಿ.. ಭೈರನ ಸೆರೆಯಿಂದ ನಿಟ್ಟುಸಿರು ಬಿಟ್ಟ ಜನರಿಗೆ ಮತ್ತೆ ಆತಂಕ

'ಮೂಖಪ್ರಾಣಿಗಳು ಎಂದು ನಮಗೂ ಅರ್ಥವಾಗುತ್ತದೆ. ಗುಂಡಿಗೆ ಬಿದ್ದಿರುವ ಮರಿಯಾನೆಗೆ ಯಾವುದೇ ತೊಂದರೆಯಾಗದಂತೆ ನೀರು, ಬೈನೆ ಸೊಪ್ಪು ಸೇರಿದಂತೆ ಇತರೆ ಆಹಾರಗಳನ್ನೂ ನೀಡುತ್ತಿದ್ದೇವೆ. ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಯಲ್ಲಿ ಈ ರೀತಿಯ ಖೆಡ್ಡಾ ತೋಡಿ ಆನೆಗಳನ್ನು ಬೀಳಿಸುತ್ತೇವೆ. ದಯಮಾಡಿ ಈಗ ಬಿದ್ದಿರುವ ಮರಿಯಾನೆಯನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಿ' ಎಂದು ಇಲ್ಲಿನ ರೈತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಾಡಾನೆ ದಾಳಿಗೆ ಚಿಕ್ಕಮಗಳೂರಲ್ಲಿ ರೈತ ಬಲಿ.. ಭೈರನ ಸೆರೆಯಿಂದ ನಿಟ್ಟುಸಿರು ಬಿಟ್ಟ ಜನರಿಗೆ ಮತ್ತೆ ಆತಂಕ

ಆನೆ ತುಳಿತದಿಂದ ರೈತ ಸಾವು ಪ್ರಕರಣ: ಚಿಕ್ಕಮಗಳೂರು ಜಿಲ್ಲೆಯಲ್ಲೂ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ರೈತರು ಹೈರಾಣಾಗಿದ್ದು, ಸಾವು ನೋವುಗಳ ಸಂಖ್ಯೆ ಏರುತ್ತಲೇ ಇದೆ. ಕಳೆದ ತಿಂಗಳು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಾದಿಕೆರೆ ಗ್ರಾಮ ಸಮೀಪದ ರಾಗಿ ಬಸವನಹಳ್ಳಿಯಲ್ಲಿ ಬೆಳೆ ಕಾಯಲು ಹೋಗಿದ್ದ ರೈತರೋರ್ವರು ಆನೆ ತುಳಿತದಿಂದ ಮೃತಪಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.