ETV Bharat / state

ಸಕಲೇಶಪುರದಲ್ಲಿ ರೈಲು ಡಿಕ್ಕಿ ಹೊಡೆದು ಕಾಡಾನೆ ಸಾವು.. ಅರಣ್ಯ ಇಲಾಖೆಯಿಂದ ಅಂತ್ಯಕ್ರಿಯೆ

author img

By

Published : May 19, 2021, 10:45 PM IST

ರಾತ್ರಿಯಿಡೀ ಅರಣ್ಯ ಇಲಾಖೆಯವರು ಹಾಗೂ ರೈಲ್ವೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರೈಲು ಹಳಿಯಿಂದ ಕ್ರೇನ್ ಮೂಲಕ ತಾತ್ಕಾಲಿಕವಾಗಿ ಪಕ್ಕಕ್ಕೆ ಸರಿಸುವಲ್ಲಿ ಯಶಸ್ವಿಯಾಗಿದ್ದು, ನಂತರ ಬುಧವಾರ ಬೆಳಗ್ಗೆ 5 ಗಂಟೆಯ ವೇಳೆ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Sakleshpur Train collision kills one elephant news
ರೈಲು ಡಿಕ್ಕಿಯೊಡೆದು ಕಾಡಾನೆ ಸಾವು

ಸಕಲೇಶಪುರ: ಚಲಿಸುತ್ತಿದ್ದ ರೈಲಿಗೆ ಕಾಡಾನೆಯೊಂದು ಅಡ್ಡ ಸಿಕ್ಕಿ ಮೃತಪಟ್ಟಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

ರೈಲು ಡಿಕ್ಕಿ ಹೊಡೆದು ಕಾಡಾನೆ ಸಾವು

ಓದಿ: ರಾಜ್ಯದಲ್ಲಿಂದು 34,281 ಮಂದಿಗೆ ವೈರಸ್​ ದೃಢ: 468 ಸೋಂಕಿತರು ಬಲಿ

ತಾಲೂಕಿನ ಹಲಸುಲಿಗೆ ಗ್ರಾ.ಪಂ ವ್ಯಾಪ್ತಿಯ ಹಸಿಡೆ ಗ್ರಾಮದ ಸಮೀಪ ಮಂಗಳವಾರ ರಾತ್ರಿ ಸುಮಾರು 11 ಗಂಟೆಯ ವೇಳೆಯಲ್ಲಿ ಬೆಂಗಳೂರಿನಿಂದ ಕಾರವಾರಕ್ಕೆ ಸಂಚರಿಸುತ್ತಿದ್ದ ಕಾರವಾರ ಎಕ್ಸ್ ಪ್ರೆಕ್ಸ್ ರೈಲಿಗೆ ಕಾಡಾನೆಯೊಂದು ರೈಲು ಹಳಿ ದಾಟುವ ವೇಳೆ ಅಡ್ಡ ಸಿಲುಕಿ ಮೃತಪಟ್ಟಿದೆ. ಹಸಿಡೆ ಬಳಿಯ ರೈಲು ಕ್ರಾಸಿಂಗ್ ಗೇಟ್ ಬಳಿ ಈ ಘಟನೆ ನಡೆದಿದ್ದು, ಗೇಟ್ ಕಾವಲುಗಾರ ರೈಲು ಬರುವ 10 ನಿಮಿಷದ ಮೊದಲು ಗೇಟ್ ಮುಚ್ಚುವಾಗ ಕಾಡಾನೆ ಕಂಡು ಬಂದಿಲ್ಲ. ಆದರೆ ರೈಲು ಬರುವ ಸಂಧರ್ಭದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ರೈಲಿನ ಶಬ್ದಕ್ಕೆ ಆತಂಕಗೊಂಡ ಕಾಡಾನೆ ರೈಲು ಹಳಿಯ ನಡುವೆ ಸಿಲುಕಿದೆ.

ರೈಲು ಡಿಕ್ಕಿ ಹೊಡೆದ ರಭಸಕ್ಕೆ ಸುಮಾರು 300 ಮೀಟರ್ ನಷ್ಟು ದೂರಕ್ಕೆ ಕಾಡಾನೆಯ ಮೃತದೇಹ ಮುಂದೆ ಬಂದಿರುತ್ತದೆ. ರಾತ್ರಿಯಿಡೀ ಅರಣ್ಯ ಇಲಾಖೆಯವರು ಹಾಗೂ ರೈಲ್ವೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರೈಲು ಹಳಿಯಿಂದ ಕ್ರೇನ್ ಮೂಲಕ ತಾತ್ಕಾಲಿಕವಾಗಿ ಪಕ್ಕಕ್ಕೆ ಸರಿಸುವಲ್ಲಿ ಯಶಸ್ವಿಯಾಗಿದ್ದು, ನಂತರ ಬೆಳಗ್ಗೆ 5 ಗಂಟೆಯ ವೇಳೆ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ನಂತರ ಬುಧವಾರ ಮುಂಜಾನೆಯಿಂದಲೇ ಕಾರ್ಯಾಚರಣೆ ನಡೆಸಿ ಮಧ್ಯಾಹ್ನದ ವೇಳೆಗೆ ಕಾಡಾನೆಯ ಅಂತಿಮ ಸಂಸ್ಕಾರ ನಡೆಸಲಾಯಿತು.

ಕೋವಿಡ್ ಆತಂಕದ ನಡುವೆ ಮೃತ ಕಾಡಾನೆ ನೋಡಲು ಆಗಮಿಸಿದ ಜನ:

ಕೋವಿಡ್ ಆತಂಕದ ನಡುವೆ ಮೃತ ಕಾಡಾನೆಯನ್ನು ನೋಡಲು ನೂರಾರು ಮಂದಿ ಗ್ರಾಮಸ್ಥರು ಬಂದಿದ್ದು ಕಂಡುಬಂತು. ಇವರನ್ನು ಚದುರಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹೈರಣಾಗಿ ಹೋದರು.

ಮೃತ ಕಾಡಾನೆಗೆ ಪೂಜೆ ಮಾಡಿದ ಮಹಿಳೆಯರು:

ಹಸು, ಎಮ್ಮೆಗಳು ಸತ್ತಾಗ ನಾವು ಪೂಜೆ ಮಾಡಿ ಅಂತಿಮ ಸಂಸ್ಕಾರ ನಡೆಸುತ್ತೇವೆ. ಕಾಡಾನೆ ಸಹ ದೇವರ ರೂಪ ಈ ಹಿನ್ನೆಲೆಯಲ್ಲಿ ನಾವು ಮೃತ ಆನೆಗೆ ಪೂಜೆ ಮಾಡುತ್ತಿದ್ದೇವೆ ಎಂದು ಇಬ್ಬರು ಸ್ಥಳೀಯ ಮಹಿಳೆಯರು ಹೇಳಿದರು. ಒಟ್ಟಾರೆಯಾಗಿ ತಾಲೂಕಿನಲ್ಲಿ ಕಾಡಾನೆ ಸಮಸ್ಯೆ ಮಿತಿ ಮೀರಿದ್ದು, ಕಾಡಾನೆ ಹಾಗೂ ಮಾನವನ ಸಂಘರ್ಷ ಮಿತಿ ಮೀರಿ, ಸರ್ಕಾರ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಮುಂದಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.