ETV Bharat / state

ಡ್ರಗ್ಸ್ ಮಾಫಿಯಾ ಯಾರ ಕೈಲಿದೆ ಅನ್ನೋದು ಸರ್ಕಾರಕ್ಕೆ ಗೊತ್ತಿಲ್ಲವೇ?: ಶಾಸಕ ಶಿವಲಿಂಗೇಗೌಡ ಪ್ರಶ್ನೆ

author img

By

Published : Sep 6, 2020, 7:06 AM IST

ಡ್ರಗ್ಸ್ ಮಾಫಿಯಾ ಬಗ್ಗೆ ನನಗೆ ಸಂಪೂರ್ಣವಾಗಿ ಗೊತ್ತಿದೆ. ಅದರ ಹಿಂದಿರುವವರ ಬಗ್ಗೆ ಕೂಡಾ ನನಗೆ ಗೊತ್ತು. ಸರ್ಕಾರ ಏಕೆ ಸುಮ್ಮನೆ ಇದೆಯೋ ನನಗೆ ಗೊತ್ತಿಲ್ಲ ಎಂದು ಶಾಸಕ ಶಿವಲಿಂಗೇಗೌಡ ಪರೋಕ್ಷವಾಗಿ ಡ್ರಗ್ಸ್ ಜಾಲದ ಬಗ್ಗೆ ಹರಿಹಾಯ್ದರು.

MLA Shivalingegowda outrage on drugs issue
ಡ್ರಗ್ಸ್ ಮಾಫಿಯಾ ಯಾರ ಕೈಲಿದೆ ಅನ್ನೋದು ಸರ್ಕಾರಕ್ಕೆ ಗೊತ್ತಿಲ್ಲವೇ?: ಶಾಸಕ ಶಿವಲಿಂಗೇಗೌಡ

ಹಾಸನ: ಡ್ರಗ್ಸ್ ಮಾಫಿಯಾ ಅನ್ನೋದು ಯಾರ ಕೈಯಲಿದೆ ಎಂಬ ವಿಚಾರ ಸರ್ಕಾರಕ್ಕೆ ಗೊತ್ತಿಲ್ಲವೇ? ಅವರನ್ನು ಮಟ್ಟ ಹಾಕುವುದು ಸರ್ಕಾರಕ್ಕೆ ಎಷ್ಟೊತ್ತಿನ ಕೆಲಸ. ಸರ್ಕಾರ ಏಕೆ ಸುಮ್ಮನೆ ಇದೆಯೋ ನನಗೆ ಗೊತ್ತಿಲ್ಲ ಅಂತಾ ಶಾಸಕ ಶಿವಲಿಂಗೇಗೌಡ ಡ್ರಗ್ಸ್ ಜಾಲದ ಬಗ್ಗೆ ಹರಿಹಾಯ್ದರು.

ಶಾಸಕ ಶಿವಲಿಂಗೇಗೌಡ

ಜಿಲ್ಲೆಯ ಅರಸೀಕೆರೆ ತಾಲೂಕು ಆಡಳಿತದಿಂದ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕರು ತಮ್ಮ ಭಾಷಣದ ನಡುವೆ ಡ್ರಗ್ಸ್ ವಿಚಾರ ತೆಗೆದು ಖಾರವಾಗಿಯೇ ಮಾತನಾಡಿದರು. ಡ್ರಗ್ಸ್ ಮಾಫಿಯಾ ಬಗ್ಗೆ ನನಗೆ ಸಂಪೂರ್ಣವಾಗಿ ಗೊತ್ತಿದೆ. ಅದರ ಹಿಂದಿರುವವರ ಬಗ್ಗೆ ಕೂಡಾ ನನಗೆ ಗೊತ್ತು. ಆದರೆ, ಈ ಸಂದರ್ಭದಲ್ಲಿ ನಾನು ಮಾತನಾಡುವುದಿಲ್ಲ. ಇದರ ಹಿಂದಿರುವ ಹೆಸರುಗಳನ್ನು ಬಹಿರಂಗಪಡಿಸಿದರೆ ಕೆಲವರಿಗೆ ಬೇಸರವಾಗುತ್ತದೆ, ಯಾರ ಹೆಸರನ್ನು ಸಹ ಹೇಳುವುದಿಲ್ಲ. ಈಗ ಹೇಳಿದರೆ ವಿಷಯ ಎಲ್ಲೆಲ್ಲೋ ಹೋಗುತ್ತೆ. ಸರ್ಕಾರ ಇದರ ಬಗ್ಗೆ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು.

ಈ ಹಿಂದೆ ಶಾಸಕರೊಬ್ಬರು ನನ್ನ ಬಳಿ ಬಂದು ನನ್ನ ಪುತ್ರ ಡ್ರಗ್ಸ್​ಗೆ ಅಡಿಕ್ಟ್​​ ಆಗಿದ್ದಾನೆ. ದಯಮಾಡಿ ಇಂತಹ ದಂಧೆಯನ್ನು ಮಟ್ಟಹಾಕಿ ನನ್ನ ಮಗನನ್ನು ನನಗೆ ಉಳಿಸಿಕೊಡಿ ಅಂತಾ ಅಂಗಲಾಚಿದ್ದರು. ಇದೀಗ ಡ್ರಗ್ಸ್ ಮಾಫಿಯಾ ಕೇವಲ ಹೊರರಾಜ್ಯದಲ್ಲಿ ಮಾತ್ರವಲ್ಲ, ನಮ್ಮ ರಾಜ್ಯದಲ್ಲೂ ಆವರಿಸಿಕೊಂಡು ಬಿಟ್ಟಿದೆ. ಅದನ್ನು ಬೇರು ಸಮೇತ ಕಿತ್ತು ಹಾಕದೆ ಹೋದರೆ ಈ ಡ್ರಗ್ಸ್ ಮಾಫಿಯಾ ಯುವಜನರ ಬಲಿ ತೆಗೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.