ETV Bharat / state

ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಮನೆಗೆ ಭೇಟಿ ಕೊಟ್ಟ ಹೆಚ್​ಡಿಕೆ

author img

By

Published : Mar 15, 2023, 5:33 PM IST

Updated : Mar 15, 2023, 5:43 PM IST

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಬುಧವಾರ ಅರಸೀಕೆರೆಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರುಗಳ ಮನೆಗೆ ಭೇಟಿ ನೀಡಿ, ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

Former Chief Minister HD Kumaraswamy
ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಮನೆಗೆ ಭೇಟಿ ಕೊಟ್ಟ ಹೆಚ್​ಡಿಕೆ

ಅರಸೀಕೆರೆ(ಹಾಸನ): ಜೆಡಿಎಸ್ ಪಂಚರತ್ನ ರಥಯಾತ್ರೆ ಇಂದಿಗೆ 83ನೇ ದಿನಕ್ಕೆ ಕಾಲಿಟ್ಟಿದ್ದು, ಅರಸೀಕೆರೆ ಮೂಲಕ ಹೊಳೆನರಸೀಪುರ ಕ್ಷೇತ್ರಕ್ಕೆ ತಲುಪಲಿದೆ. ಇದರ ಮಧ್ಯೆ ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್ ​ಡಿ ಕುಮಾರಸ್ವಾಮಿ ಆಪರೇಷನ್ ಜೆಡಿಎಸ್​ಗೆ ಕೈ ಹಾಕಿದ್ದು, ಅರಸೀಕೆರೆಯ ಮಾಜಿ ಶಾಸಕ ಜಿ ಎಸ್ ಪರಮೇಶ್ವರಪ್ಪ ಮತ್ತು ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಜಿ ಬಿ ಶಶಿಧರ್ ಮನೆಗೆ ಭೇಟಿ ನೀಡಿ ಗೌಪ್ಯ ಚರ್ಚೆ ನಡೆಸಿದ್ದಾರೆ.

ಅರಸೀಕೆರೆ ಕ್ಷೇತ್ರದ ಹಾಲಿ ಶಾಸಕ ಕೆ ಎಂ ಶಿವಲಿಂಗೇಗೌಡ ಇತ್ತೀಚಿಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಬಹಿರಂಗ ಸಭೆಯಲ್ಲಿ ಹೇಳಿಕೆ ಕೊಟ್ಟಿದ್ದರು. ಜೆಡಿಎಸ್ ಪಕ್ಷದ ವಿರುದ್ಧ ಹಾಗೂ ದೇವೇಗೌಡರ ಕುಟುಂಬದ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಮಂಗಳವಾರ ಪಂಚರತ್ನ ರಥಯಾತ್ರೆ ಬಹಿರಂಗ ಸಭೆಯಲ್ಲಿ ಹೆಚ್​ಡಿಕೆ ಮತ್ತು ಹೆಚ್​ಡಿಆರ್ ಸಹೋದರರು ಕೆ ಎಂ ಶಿವಲಿಂಗೇಗೌಡ ವಿರುದ್ಧ ಸವಾಲೆಸೆದಿದ್ದರು.

ಕೆ ಎಂ ಶಿವಲಿಂಗೇಗೌಡ ವಿರುದ್ಧ ಹೆಚ್​ಡಿಕೆ ವಾಗ್ದಾಳಿ: ಪಕ್ಷಕ್ಕೆ ದ್ರೋಹ ಮಾಡಿದ ನಿಮ್ಮನ್ನ ಮೇಲೊಬ್ಬ ದೇವರಿದ್ದಾನೆ, ಅವನೇ ನೋಡಿಕೊಳ್ಳುತ್ತಾನೆ. ಕಳೆದ 15 ವರ್ಷಗಳಿಂದ ಕ್ಷೇತ್ರದ ಜನ ನಿಮಗೆ ವಿಶ್ವಾಸವಿಟ್ಟು ಮತ ಕೊಟ್ಟಿದ್ದರು. ಈಗ ಪಕ್ಷಕ್ಕೆ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ದ್ರೋಹ ಬಗೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೀರಿ. ಈ ಬಾರಿ ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನ ಮತ್ತೊಮ್ಮೆ ತರುವ ಮೂಲಕ ಜನರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕೆ ಎಂ ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಗಳವಾರ ಬಾಣವಾರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಬುಧವಾರ ಅರಸೀಕೆರೆಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರುಗಳ ಮನೆಗೆ ದಿಢೀರ್ ಭೇಟಿ ನೀಡಿ ಕೆಲ ಸಮಯ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ:ಗುತ್ತಿಗೆದಾರರ ಹಣ ಬಿಡುಗಡೆಗೆ ಕಮಿಷನ್ ಕೇಳುವ ಮಾನಗೇಡಿ ಬಿಜೆಪಿ ಸರ್ಕಾರ: ಜೆಡಿಎಸ್ ವಾಗ್ದಾಳಿ

ನಿಮ್ಮಂತಹ ವಂಚಕ ಶಾಸಕರನ್ನು ಜನರು ಈ ಬಾರಿ ಮನೆಗೆ ಕಳಿಸುತ್ತಾರೆ: ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ನಡೆದ 82ನೇ ದಿನದ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಾಜಿ ಸಚಿವ ಹೆಚ್.ಡಿ. ರೇವಣ್ಣ, "ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ದೊಡ್ಡದು ಅಂತ ಹೇಳ್ತೀರಲ್ಲ. ಇದನ್ನು ಮುಂಚಿತವಾಗಿಯೇ ಹೇಳಿ ಪಕ್ಷ ಬಿಡಬೇಕಾಗಿತ್ತು" ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದರು.

"ಜೆಡಿಎಸ್ ಪಕ್ಷದ ಬಂಡವಾಳವನ್ನು ಬಿಚ್ಚಿಡುತ್ತೇನೆ ಎಂದು ಶಿವಲಿಂಗೇಗೌಡರು ಹೇಳುತ್ತಾರೆ. ನಿಮ್ಮ ಬಂಡವಾಳವನ್ನು ನಾವು ಬಿಚ್ಚಿಡ್ತೀವಿ. ಕಾಂಗ್ರೆಸ್ ಪಕ್ಷವನ್ನು ಹೊಗಳುವ ನೀವು, ಮರ್ಯಾದೆ ಇದ್ದಿದ್ರೆ ಅವತ್ತೇ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ನಿಮ್ಮಂತಹ ಶಾಸಕರನ್ನು ಜನರು ಈ ಬಾರಿ ಮನೆಗೆ ಕಳಿಸುತ್ತಾರೆ" ಎಂದು ಬಹಿರಂಗಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

Last Updated : Mar 15, 2023, 5:43 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.