ETV Bharat / state

ಹಾಸನ: ಕೆಡಿಪಿ ಸಭೆಯಲ್ಲಿ ಸರ್ಕಾರದ ವಿರುದ್ಧ ಶಾಸಕ ಶಿವಲಿಂಗೇಗೌಡ ಆಕ್ರೋಶ

author img

By

Published : Nov 26, 2020, 8:50 PM IST

ಹಾಸನ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆ ನಡೆದಿದ್ದು, ಶಾಸಕ ಶಿವಲಿಂಗೇಗೌಡ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಶಾಸಕ ಶಿವಲಿಂಗೇಗೌಡ
ಶಾಸಕ ಶಿವಲಿಂಗೇಗೌಡ

ಹಾಸನ: ಅರಸೀಕೆರೆಗೆ ಭದ್ರಾ ಮೇಲ್ಡಂಡೆ ಯೋಜನೆಯಿಂದ ಯಾವುದೇ ಕೆರೆಗೆ ನೀರು ಕೊಟ್ಟಿಲ್ಲ. ಕೃಷ್ಣಾ ಬೇಸಿನ್​ನಲ್ಲಿ ನಮಗೂ ಹಕ್ಕಿದೆ. ನಮ್ಮ ಎರಡು ಹೋಬಳಿಗಳು ಕೃಷ್ಣಾ ಬೇಸಿನ್​ಗೆ ಸೇರಿದೆ ಎಂದು ಶಾಸಕ ಶಿವಲಿಂಗೇಗೌಡ ಕಿಡಿಕಾರಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಮಗೆ ನೀರು ಕೊಡ್ತೀವಿ ಅಂತಾ ಕ್ಯಾಬಿನೆಟ್​ನಲ್ಲಿ ಹೇಳಿದ್ದರು. ಆದರೆ ನಮ್ಮ ಅರಸೀಕೆರೆ ತಾಲೂಕಿನ 28 ಕೆರೆಗಳಿಗೆ ನೀರು ಹರಿಸಬೇಕು. ಕ್ಯಾಬಿನೆಟ್ ಮುಗಿಸಿಕೊಂಡು ಬಂದರೆ ಸಂಜೆಗೆ ವೇಳೆಗೆ ಒಂದು ಕೆರೆಗೆ ನೀರು ಹರಿಸಿದ್ದಾರೆ ಆರೋಪ ಮಾಡಿದರು.

ಇನ್ನು ಕೆಲ ಆಸ್ಪತ್ರೆ, ಹಾಸ್ಟೆಲ್​ಗಳಲ್ಲಿ ಕೊರೊನಾ ರೋಗಿಗಳು ಬಳಸಿದ ಬೆಡ್​ಗಳಿವೆ. ಅದನ್ನು ಹೊರಹಾಕಿ. ಈ ಬಗ್ಗೆ ಕ್ಯಾಬಿನೆಟ್​ನಲ್ಲಿ ಮಾತನಾಡಿ ಎಂದು ಸಚಿವ ಗೋಪಾಲಯ್ಯನವರನ್ನು ಒತ್ತಾಯಿಸಿದರು. ಈ ಬಗ್ಗೆ ಮಾತಾಡ್ತೀನಿ ಈಗ ಸದ್ಯಕ್ಕೆ ಶಾಲೆಗಳನ್ನ ತೆರೆಯಲ್ಲ. ಕೊರೊನಾನೂ ಕಡಿಮೆಯಾಗುತ್ತಿದೆ. ಒಂದುವೇಳೆ ಹೆಚ್ಚಾದರೆ ನೋಡೋಣ ಎಂದರು.

ಈ ಹಿಂದೆ ಅಕ್ಷರ ದಾಸೋಹ ಯೋಜನೆಯಡಿ ಬಂದ ತೊಗರಿ ಬೇಳೆ ಕಳಪೆ ಎಂದು ಮಾಹಿತಿ ನೀಡಿದ್ದೀರಿ. ನೀವು ಸುಳ್ಳು ಮಾಹಿತಿ ನೀಡಿದ್ದೀರಿ. ಅದನ್ನು ಸರಿಯಾಗಿ ಪರಿಶೀಲಿಸದೆ ಕಳಪೆ ಎಂದು ಹೇಳಿದ್ದೀರಿ ಎಂದು ದಾಸೋಹ ಇಒ ಲತಾ ವಿರುದ್ಧ ಸಚಿವ ಗೋಪಾಲಯ್ಯ ಮತ್ತು ಮಾಜಿ ಸಚಿವ ರೇವಣ್ಣ ಆರೋಪ ಮಾಡಿದರು.

ಈ ಬಗ್ಗೆ ಸ್ಪಷ್ಟನೆ ನೀಡಿ ಅಕ್ಷರ ದಾಸೋಹ ಇಒ ಲತಾ, ನಾನು ರಿಜೆಕ್ಟ್ ಮಾಡಿಲ್ಲ. ಗೋಡೌನ್ ಮ್ಯಾನೇಜರ್ ರಿಜೆಕ್ಟ್ ಮಾಡಿದ್ದಾರೆ. ದಯವಿಟ್ಟು ನನಗೂ ಮಾತನಾಡಲು ಅವಕಾಶ ಕೊಡಿ. ನಾನು ಯಾವುದೇ ಸುಳ್ಳು ಮಾಹಿತಿ ನೀಡಿಲ್ಲ ಎಂದರು.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆಗಳಿಗೆ ನೀಡಲಾಗಿರುವ ವಿಮೆ ಕುರಿತು ಮೂರು ದಿನಗಳಲ್ಲಿ ಸಮಗ್ರ ವರದಿ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸೂಚಿಸಿದರು. ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಬೇಕು. ಹಿಂದಿನ ಸಭೆಯಲ್ಲಿ ನಡೆದ ತೀರ್ಮಾನಗಳ ಬಗ್ಗೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ ಯಾವ ಅಧಿಕಾರಿಗಳು ಆ ನಿಟ್ಟಿನಲ್ಲಿ ಕೆಲಸ ಮಾಡಿಲ್ಲ. ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಲಾಭ ಕಂಪನಿಗಳಿಗೆ ಆಗಿದೆ ಹೊರತು ರೈತರಿಗೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 2018-19ನೇ ಸಾಲಿನಲ್ಲಿ ಅರಸೀಕೆರೆಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದೆ. ಹೀಗಿದ್ದ ಮೇಲೆ ಎಲ್ಲ ರೈತರಿಗೂ ಬೆಳೆ ವಿಮೆ ಸುಮಾರು 125 ಕೋಟಿ ರೂ. ಬಿಡುಗಡೆಯಾಗಬೇಕು. ಆದರೆ 25 ಸಾವಿರ ರೈತರನ್ನು ಮಾತ್ರ ಆಯ್ಕೆ ಮಾಡಿದ್ದಾರೆ. ದೆಹಲಿ ಮೂಲದ ವಿಮಾ ಕಂಪನಿ ಅಧಿಕಾರಿಗಳು ದೇವಲೋಕದಿಂದ ಬಂದವರಂತೆ ವರ್ತಿಸುತ್ತಾರೆ. ಜಿಲ್ಲಾ ಪಂಚಾಯಿತಿ ಸಭೆಗಳಿಗೆ ಅವರನ್ನು ಕರೆಸುವುದಿಲ್ಲ. ದಿನ ಬೆಳಗಾದರೆ ಪರಿಹಾರಕ್ಕಾಗಿ ರೈತರು ನಮ್ಮ ಮನೆ ಮುಂದೆ ನಿಲ್ಲುತ್ತಾರೆ. ಶೇ. 75ರಷ್ಟು ಬಿತ್ತನೆಯಾಗಿಲ್ಲ ಎಂದಾದ ಮೇಲೆ ಎಲ್ಲರಿಗೂ ವಿಮೆ ಸಿಗಬೇಕು. ಕಾನೂನು ಅರಿಯದೆ ಅಧಿಕಾರಿಗಳು ನಮ್ಮ ಮೇಲೆ ಸವಾರಿ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಕೆ. ರವಿ ಮಾತನಾಡಿ, 2018-19ನೇ ಸಾಲಿನಲ್ಲಿ ಅರಸೀಕೆರೆಯ 25 ಸಾವಿರ ರೈತರಿಗೆ 37 ಕೋಟಿ ರೂ. ಬಿಡುಗಡೆಯಾಗಿದೆ. ವಿಮೆ ಪಾವತಿಸಿದ ರೈತರು ಮಾತ್ರ ಯೋಜನೆಗೆ ಅರ್ಹರಾಗುತ್ತಾರೆ ಎಂದರು. ಈ ವರ್ಷ ಮುಂಗಾರು ಹಂಗಾಮಿಗೆ 18128 ಹಾಗೂ ಹಿಂಗಾರಿಗೆ 24061 ರೈತರು ನೋಂದಾಯಿಸಿಕೊಂಡಿದ್ದಾರೆ. 12 ಸಾವಿರ ಟಾರ್ಪಲ್ ದೊರೆತಿದ್ದು ಹಂತ ಹಂತವಾಗಿ ರೈತರಿಗೆ ವಿತರಿಸಲಾಗುವುದು. 4436 ಮೆ. ಟನ್ ರಸಗೊಬ್ಬರ ದಾಸ್ತಾನಿದ್ದು, 16 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಪೂರೈಕೆ ಇದೆ. ಹಿಂಗಾರು ಬಿತ್ತನೆ ಚಟುವಟಿಕೆ ಪ್ರಾರಂಭವಾಗಿದ್ದು ಯಾವುದೇ ಸಮಸ್ಯೆ ಇಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.