ETV Bharat / state

ನಿಗೂಢವಾಗಿ ಸಾವಿಗೀಡಾಗಿದ್ದ ಕಾಡಾನೆಗಳು: ನಿಖರ ಕಾರಣ ನೀಡಿದ ಡಿಸಿಎಫ್

author img

By

Published : Mar 15, 2021, 8:54 PM IST

ಇದೀಗ ಕಾಡಾನೆಗಳ ಸಾವಿಗೆ ಏನು ಕಾರಣ ಎಂಬುದು ಬಯಲಾಗಿದೆ. ಜ.2 ರಂದು ಸಕಲೇಶಪುರ ತಾಲ್ಲೂಕಿನ ‌ಪಟ್ಲಬೆಟ್ಟ ಸಮೀಪ ಹೆಣ್ಣಾನೆಯ ಶವ ಪತ್ತೆಯಾಗಿತ್ತು. ಯಾರೋ ಕಿಡಿಗೇಡಿಗಳು ಗುಂಡು ಹೊಡೆದಿದ್ದಾರೆ. ಆನೆಯ ದೇಹದೊಳಗೆ ಗುಂಡು ಹೊಕ್ಕಿದ್ದು, ಎಂಟು ದಿನಗಳ ಕಾಡಿನಲ್ಲಿ ಓಡಾಡಿ ನರಳಿ ಸಾವನ್ನಪ್ಪಿದೆ. ಆನೆ ದೇಹದಲ್ಲಿ 12 ಎಂ.ಎಂ. ಗುಂಡು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

hassan-dcf-gave-clarification-for-death-of-wild-elephant
ಡಿಸಿಎಫ್

ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಕಳೆದ ಎರಡೂವರೆ ತಿಂಗಳಿನಲ್ಲಿ ಮೂರು ಕಾಡಾನೆಗಳು ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇದೀಗ ಕಾಡಾನೆಗಳ‌ ಸಾವಿಗೆ ನಿಖರ ಕಾರಣ ತಿಳಿದು ಬಂದಿದೆ.

ಒಂದು ಹೆಣ್ಣಾನೆಯನ್ನು ಕಿಡಿಗೇಡಿಗಳು ಗುಂಡಿಕ್ಕಿ ಕೊಂದಿದ್ದರೆ, ಉಳಿದ ಎರಡು ಆನೆಗಳ ಪೈಕಿ ಒಂದು ಕಾಡಾನೆಯದ್ದು ವಯೋಸಹಜ ಸಾವಾಗಿದೆ. ಇನ್ನೊಂದು ಕಾಡಾನೆಗೆ ಮದಬಂದ ಆನೆಯೊಂದು ದಂತದಿಂದ ತಿವಿದ ಪರಿಣಾಮ‌ ಗಾಯಗೊಂಡು ಸಾವನ್ನಪ್ಪಿದೆ ಎಂದು ಡಿಎಫ್ಓ ಸ್ಪಷ್ಟಪಡಿಸಿದ್ದಾರೆ.

ನಿಗೂಢವಾಗಿ ಸಾವಿಗೀಡಾಗಿದ್ದ ಕಾಡಾನೆಗಳು ನಿಖರ ಕಾರಣ ನೀಡಿದ ಡಿಸಿಎಫ್..!

ಜಿಲ್ಲೆಯ ಸಕಲೇಶಪುರ-ಆಲೂರು ತಾಲ್ಲೂಕಿನಲ್ಲಿ ಹೆಚ್ಚು ಕಾಡಾನೆಗಳಿವೆ. ಪ್ರತಿ ವರ್ಷವೂ ಕಾಡಾನೆಗಳ ಸಂತತಿ ಹೆಚ್ಚುತ್ತಲೇ ಇದೆ. ಇದರ ಜೊತೆಗೆ ಕೊಡಗು ಭಾಗದಿಂದ‌ ಕಾಡಾನೆಗಳು ಜಿಲ್ಲೆಗೆ ಎಂಟ್ರಿ ಕೊಡುತ್ತಿವೆ. ಇದರಿಂದಾಗಿ ಸುಮಾರು 70 ಕ್ಕೂ ಹೆಚ್ಚು ಆನೆಗಳು ಜಿಲ್ಲೆಯಲ್ಲಿವೆ. ಕಳೆದ ಎರಡೂವರೆ ತಿಂಗಳಿನಲ್ಲಿ ಮೂರು ಕಾಡಾನೆಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದವು. ಅದರಲ್ಲಿ ಒಂದು ಆನೆಯ ಎರಡು ದಂತಗಳು ಕಳುವಾಗಿದ್ದು ದಂತಕ್ಕಾಗಿಯೇ ಕಾಡಾನೆಗಳನ್ನು ಕೊಲ್ಲಲಾಗುತ್ತಿದೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದರು.

ಕಾಡಾನೆಗಳ ಸಾವಿಗೆ ಕಾರಣ ಏನು ?

ಇದೀಗ ಕಾಡಾನೆಗಳ ಸಾವಿಗೆ ಏನು ಕಾರಣ ಎಂಬುದು ಬಯಲಾಗಿದೆ. ಜ.2 ರಂದು ಸಕಲೇಶಪುರ ತಾಲ್ಲೂಕಿನ ‌ಪಟ್ಲಬೆಟ್ಟ ಸಮೀಪ ಹೆಣ್ಣಾನೆಯ ಶವ ಪತ್ತೆಯಾಗಿತ್ತು. ಯಾರೋ ಕಿಡಿಗೇಡಿಗಳು ಗುಂಡು ಹೊಡೆದಿದ್ದಾರೆ. ಆನೆಯ ದೇಹದೊಳಗೆ ಗುಂಡು ಹೊಕ್ಕಿದ್ದು, ಎಂಟು ದಿನಗಳ ಕಾಡಿನಲ್ಲಿ ಓಡಾಡಿ ನರಳಿ ಸಾವನ್ನಪ್ಪಿದೆ. ಆನೆ ದೇಹದಲ್ಲಿ 12 ಎಂ.ಎಂ. ಗುಂಡು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆ.28 ರಂದು ಬೋರಣ್ಣನ ಮನೆ ಶನಿಕಲ್ ಗ್ರಾಮದ ಬಳಿ‌ ಕೊಳೆತ ಸ್ಥಿತಿಯಲ್ಲಿ ಮತ್ತೊಂದು ಕಾಡಾನೆ ಶವ ಪತ್ತೆಯಾಗಿತ್ತು. ಸುಮಾರು 55 ವರ್ಷದ ಕಾಡಾನೆ ವಯೋಸಹಜವಾಗಿ ಸತ್ತಿದ್ದು ದೇಹ ಕೊಳೆತ ನಂತರ ಜೋಡಿ ದಂತಗಳನ್ನು ಕದ್ದೊಯ್ದಿದ್ದರು. ಈ ಬಗ್ಗೆ ಎರಡು ಪ್ರಕರಣಗಳು ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹೇಳಿಕೆ ನೀಡಿದ್ರು.

ನಿನ್ನೆ ಸಕಲೇಶಪುರ ತಾಲ್ಲೂಕಿನ ಸುಂಡೇಕೆರೆ ಸಮೀಪ ಮತ್ತೊಂದು ಒಂಟಿಸಲಗದ ಶವ ಪತ್ತೆಯಾಗಿತ್ತು. ಸ್ಥಳದಲ್ಲಿಯೇ ಮೂರು ಹಂತದಲ್ಲಿ ಮೆಟಲ್ ಡಿಟೆಕ್ಟರ್​ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಶೂಟ್ ಮಾಡಿ ಕೊಂದಿರುವ ಬಗ್ಗೆ ಯಾವುದೇ ಕುರುಹು ಪತ್ತೆಯಾಗಲಿಲ್ಲ. ನಂತರ ಆನೆ ದೇಹದ ಸ್ಯಾಂಪಲ್ಸ್ ತೆಗೆದು ಪಶು ವೈದ್ಯಕೀಯ ಕಾಲೇಜಿನಲ್ಲಿ ಪೆಥಾಲಜಿ ವಿಭಾಗದ ಮುಖ್ಯಸ್ಥ ಡಾ.ರವಿಕುಮಾರ್ ಹಾಗೂ ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಪ್ರಾಥಮಿಕ ವರದಿ ನೀಡಿದ್ದಾರೆ. ಮದವೇರಿದ ಕಾಡಾನೆಯೊಂದು ದಂತದಿಂದ ಕುತ್ತಿಗೆ ಭಾಗಕ್ಕೆ ತಿವಿದ ಪರಿಣಾಮ ಆಳವಾದ ರಂಧ್ರವಾಗಿದ್ದು ಇದರಿಂದ ಸೋಂಕು ಹೆಚ್ಚಾಗಿ ಸತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ಮೂರು ಕಾಡಾನೆಗಳ‌ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಇದೀಗ ಎಲ್ಲಾ ಊಹಾಪೋಹಗಳಿಗೆ ಅರಣ್ಯ ಸಂರಕ್ಷಣಾಧಿಕಾರಿ ತೆರೆ ಎಳೆದಿದ್ದಾರೆ. ಅಲ್ಲದೆ ಎರಡು ಹೆಣ್ಣಾನೆಗಳಿಗೆ ರೆಡಿಯೋ ಕಾಲರ್ ಅಳವಡಿಸಿದ್ದು ಕಾಡಾನೆಗಳ ಚಲನವಲನದ ಬಗ್ಗೆ ತೀವ್ರ ನಿಗಾವಹಿಸಲಾಗಿದೆ. ಕಾಡಾನೆಗಳು ಹಿಂಡು ಹಿಂಡಾಗಿ ಇರುವುದರಿಂದ ಗುಂಡು ಹಾರಿಸಿ ಕೊಲ್ಲಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.