ETV Bharat / state

ಮೊಬೈಲ್ ಬೈಗುಳ ಪ್ರಾಣ ತೆಗೀತು: ಹಾಸನದಲ್ಲಿ ತಮ್ಮನ ಮಗನ ಕೊಂದ ದೊಡ್ಡಪ್ಪ

author img

By

Published : Jun 6, 2023, 5:23 PM IST

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ದುಮ್ಮೇನಹಳ್ಳಿಯಲ್ಲಿ ವ್ಯಕ್ತಿಯೋರ್ವ ಕ್ಷುಲ್ಲಕ ಕಾರಣಕ್ಕೆ ತಮ್ಮನ ಮಗನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ.

man-killed-over-mobile-talk-in-hassan
ಮೊಬೈಲ್​ನಲ್ಲಿ ಬೈದಿದ್ದನ್ನು ತನಗೆ ಎಂದು ತಪ್ಪಾಗಿ ಭಾವಿಸಿ ತಮ್ಮನ ಮಗನನ್ನು ಕೊಂದ ದೊಡ್ಡಪ್ಪ

ಅರಸೀಕೆರೆ (ಹಾಸನ) : ಮೊಬೈಲ್​ನಲ್ಲಿ ಮಾತನಾಡುವಾಗ ಪತ್ನಿಗೆ ಬೈದದ್ದನ್ನು ತನಗೇ ಬೈದಿದ್ದೆಂದು ತಪ್ಪಾಗಿ ಭಾವಿಸಿ ವೃದ್ಧನೋರ್ವ ತನ್ನ ಸಹೋದರನ ಮಗನನ್ನೇ ಚೂರಿಯಿಂದ ಇರಿದು ಕೊಲೆಗೈದಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ದುಮ್ಮೇನಹಳ್ಳಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಯತೀಶ್ ​​(37) ಎಂದು ಗುರುತಿಸಲಾಗಿದೆ. ಹನುಮಂತಯ್ಯ ಆರೋಪಿ.

ಘಟನೆಯ ವಿವರ: ಕಳೆದ ಜೂನ್​​ 4ರ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಯತೀಶ್​ ತನ್ನ ಮಡದಿಗೆ ಕರೆ ಮಾಡಿ, ಶಾಲೆ ಪ್ರಾರಂಭವಾದರೂ ಮಕ್ಕಳನ್ನು ಕರೆದುಕೊಂಡು ತವರಿಗೆ ಹೋದ ಮಡದಿ ಇನ್ನೂ ಬರಲಿಲ್ಲವಲ್ಲ ಎಂದು ಕರೆ ಮಾಡಿ ಬೈಯುತ್ತಿದ್ದ. ಮನೆ ಒಳಗಿದ್ದ ದೊಡ್ಡಪ್ಪ ಹನುಮಂತಯ್ಯ ಈತ ನನಗೇ ಬೈಯುತ್ತಿರುವುದಾಗಿ ತಪ್ಪಾಗಿ ಭಾವಿಸಿ ಏಕಾಏಕಿ ಚೂರಿಯಿಂದ ಯತೀಶನ ಎದೆಗೆ ಚುಚ್ಚಿದ್ದಾನೆ. ಗಂಭೀರ ಗಾಯಗೊಂಡ ಯತೀಶ್​ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ತಕ್ಷಣ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ಸೂಚಿಸಿದ್ದು, ಅಲ್ಲಿಗೆ ಸಾಗಿಸುವ ದಾರಿ ಮಧ್ಯೆ ಯತೀಶ್​ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿ ಹನುಮಂತಯ್ಯನ ಮಡದಿ ಕಳೆದ ಒಂದು ವರ್ಷದ ಹಿಂದೆ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಆರೋಪಿ ಕುಡಿತಕ್ಕೆ ದಾಸನಾಗಿದ್ದ. ಅಲ್ಲದೆ ಪ್ರತಿದಿನ ಕುಡಿದು ಅಕ್ಕ ಪಕ್ಕದ ಮನೆಯವರೊಂದಿಗೆ ಕಿರಿಕ್​ ಮಾಡುತ್ತಿದ್ದ. ಇದನ್ನು ತಮ್ಮನ ಮಗನಾದ ಯತೀಶ್​ ಪ್ರಶ್ನೆ ಮಾಡಿದ್ದ. ಅಷ್ಟೇ ಅಲ್ಲದೆ, ಪ್ರತಿನಿತ್ಯ ಈ ರೀತಿ ಕುಡಿದು ಗಲಾಟೆ ಮಾಡ್ಬೇಡಿ, ಈಗಾಗಲೇ ನಿಮಗೆ ವಯಸ್ಸಾಗಿದೆ. ಯಾಕೆ ಈತರ ಎಲ್ಲರಿಗೂ ತೊಂದರೆ ಕೊಡುತ್ತೀರಿ ಎಂದು ಬುದ್ಧಿವಾದ ಹೇಳಿದ್ದ.

ಇದನ್ನೂ ಓದಿ : ಬಾರ್ ಕ್ಯಾಷಿಯರ್ ಕೊಲೆ ಪ್ರಕರಣ: ಓರ್ವನ ಕಾಲಿಗೆ ಗುಂಡೇಟು, ಇಬ್ಬರ ಬಂಧನ

ಆದರೆ ಇದಕ್ಕೆ ಸೊಪ್ಪು ಹಾಕದ ಆರೋಪಿ ಹನುಮಂತಯ್ಯ, ನಾನ್ಯಾರು ಗೊತ್ತಾ? ನನ್ನನ್ನು ಎದುರಾಕೊಂಡರೆ ಸರಿ ಇರಲ್ಲ. ನಿನ್ನ ಕೆಲಸ ಎಷ್ಟು ಅಷ್ಟನ್ನೇ ಮಾಡು. ಇನ್ನೊಮ್ಮೆ ಈ ತರ ಮಾತಾಡಿದ್ರೆ ಗೊತ್ತಲ್ಲ. ನಾನು ರೌಡಿಯಾಗಿದ್ದವ ಎಂದು ಬೆದರಿಸುತ್ತಿದ್ದನಂತೆ. ಬಳಿಕ ಯತೀಶ್​ ಸರಿ ವಯಸ್ಸಾಗಿದೆ ಎಂದು ಸುಮ್ಮನಾಗಿದ್ದ.

ಜೂನ್​​ 4ರಂದು ಯತೀಶ್ ಮಡದಿಗೆ ಫೋನ್ ಮಾಡಿ ಬೈಯುತ್ತಿದ್ದದನ್ನು ತಪ್ಪಾಗಿ ಗ್ರಹಿಸಿ ದೊಡ್ಡಪ್ಪ ಹನುಮಂತಪ್ಪ, ಯಾಕೋ ಏನಾಗಿದೆ ನಿನಗೆ ನನ್ನನ್ನು ಯಾಕೆ ಬೈತಿದ್ದೀಯ?. ಅವತ್ತೇ ನಿಂಗೆ ಹೇಳಿದ್ದೆ. ನಾನು ರೌಡಿ ಸುಮ್ನೆ ಬಿಡಲ್ಲ ಅಂತ. ಮತ್ತೆ ನನಗೆ ಬೈತಾ ಇದ್ದೀಯ ಎಂದು ಚೂರಿಯಿಂದ ಏಕಾಏಕಿ ಯತೀಶನ ಎದೆಗೆ ಚುಚ್ಚಿದ್ದಾನೆ.

ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿ ಹನುಮಂತಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಅರಸೀಕೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮಾದಕ ವಸ್ತು ದಂಧೆ: ಜಾರ್ಖಂಡ್‌ನ ಮೂವರು ಮಹಿಳೆಯರು ಬೆಂಗಳೂರಿನಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.