ETV Bharat / state

ಅರಸೀಕೆರೆಯಲ್ಲಿ ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 34 ಮಕ್ಕಳು ಅಸ್ವಸ್ಥ

author img

By

Published : Mar 24, 2022, 7:15 PM IST

Updated : Mar 24, 2022, 7:31 PM IST

ಮಧ್ಯಾಹ್ನದ ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರುವ ಆಹಾರವನ್ನು ಸೇವಿಸಿ 34 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 34 ಮಕ್ಕಳು ಅಸ್ವಸ್ಥ
ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 34 ಮಕ್ಕಳು ಅಸ್ವಸ್ಥ

ಅರಸೀಕೆರೆ(ಹಾಸನ): ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 34 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಅರಸೀಕೆರೆ ತಾಲೂಕಿನ ನಾರಾಯಣಗಟ್ಟಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮಕ್ಕಳನ್ನು ಅರಸೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಧ್ಯಾಹ್ನ ಬಿಸಿಯೂಟ ಮಾಡುವ ವೇಳೆ ವಿದ್ಯಾರ್ಥಿಯೊಬ್ಬನ ಊಟದಲ್ಲಿ ಸತ್ತ ಹಲ್ಲಿಯ ಬಾಲ ಪತ್ತೆಯಾಗಿತ್ತು.


ವಿದ್ಯಾರ್ಥಿ ತರಕಾರಿ ಇರಬಹುದೆಂದು ಇಲಿಯ ಬಾಲ ಸೇವಿಸಿದ್ದಾನೆ. ಬಳಿಕ ಆತನಿಗೆ ಅನುಮಾನ ಬಂದು ಉಗುಳಿದಾಗ ಹಲ್ಲಿಯ ಬಾಲವೆಂದು ಗೊತ್ತಾಗಿದ್ದು ಅಸ್ವಸ್ಥನಾಗಿದ್ದಾನೆ. ಈ ವಿಚಾರವನ್ನು ತಕ್ಷಣ ಅಡುಗೆ ಮಾಡುವ ಯಶೋಧಮ್ಮನಿಗೆ ತಿಳಿಸಿದಾಗ ಆಕೆ ಗಾಬರಿಗೊಂಡು ಮುಖ್ಯಶಿಕ್ಷಕರಿಗೆ ತಿಳಿಸಿದ್ದಾರೆ. ಅಸ್ವಸ್ಥಗೊಂಡ ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಶಾಸಕ ಕೆ.ಎಂ.ಶಿವಲಿಂಗೇಗೌಡ, ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

ಆತಂಕ ಬೇಡ- ವೈದ್ಯರು: ಶಾಲೆಯಲ್ಲಿರುವ ಸುಮಾರು 34 ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿದ್ದಾರೆ. ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ವರದಿ ನೀಡಲಾಗುವುದು. ಪೋಷಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಶಾಸಕರ ಪ್ರತಿಕ್ರಿಯೆ: ಶಾಸಕ ಕೆ.ಎಂ.ಶಿವಲಿಂಗೇಗೌಡ ಪ್ರತಿಕ್ರಿಯಿಸಿದ್ದು, ಶಾಲೆಯಲ್ಲಿ ಈ ರೀತಿಯ ಘಟನೆ ಸಂಭವಿಸಬಾರದು. ಬಿಸಿಯೂಟದ ಮನೆ ಪರಿಶೀಲಿಸುತ್ತೇನೆ. ಕಾರಣ ತಿಳಿದುಕೊಳ್ಳುತ್ತೇನೆ. ಯಾವ ವಿದ್ಯಾರ್ಥಿಗಳಿಗೂ ಹೆಚ್ಚಿನ ರೀತಿಯ ತೊಂದರೆಯಾಗಿಲ್ಲ. ಓರ್ವ ಮಗುವಿಗೆ ಮಾತ್ರ ಹಲ್ಲಿಯ ಬಾಲ ಸಿಕ್ಕಿದ್ದರಿಂದ ಗಾಬರಿಯಾಗಿ ಅಸ್ವಸ್ಥಗೊಂಡಿದ್ದಾನೆ. ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದಾರೆ.

ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ವರದಿ ತರಿಸಿಕೊಳ್ಳುತ್ತೇನೆ. ಬಿಸಿಯೂಟದ ಸಿಬ್ಬಂದಿಯ ತಪ್ಪಿನಿಂದಲೋ ಅಥವಾ ಆಕಸ್ಮಿಕವೋ ಎಂಬುದರ ಬಗ್ಗೆ ಮಾಹಿತಿ ಪಡೆದು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ತಾಲೂಕು ಆಡಳಿಕ್ಕೆ ಸೂಚಿಸುತ್ತೇನೆ ಎಂದು ಅವರು ತಿಳಿಸಿದರು.

ಕ್ರಮಕ್ಕೆ ಒತ್ತಾಯ: ಘಟನೆ ಬಗ್ಗೆ ಪೋಷಕರು ಆತಂಕಗೊಂಡಿದ್ದು, ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಮಾಡುವ ಸಿಬ್ಬಂದಿ ಅಡುಗೆ ಮನೆ ಸ್ವಚ್ಚವಾಗಿ ಇಟ್ಟುಕೊಳ್ಳದಿರುವುದೇ ಇದಕ್ಕೆ ಕಾರಣ. ತಾಲೂಕಿನ ಸಾಕಷ್ಟು ವಸತಿ ಶಾಲೆಗಳಲ್ಲಿ ಅಡುಗೆ ಸಹಾಯಕರ ನಿರ್ಲಕ್ಷ್ಯದಿಂದ ಈ ರೀತಿಯ ಪ್ರಮಾದಗಳು ಸಾಕಷ್ಟು ಬಾರಿ ನಡೆದಿವೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

Last Updated : Mar 24, 2022, 7:31 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.