ETV Bharat / state

ಗದಗ: ಇಂಗ್ಲಿಷ್ ಶಿಕ್ಷಕರನ್ನು ನಿಯೋಜಿಸಿ ಎಂದು ಅಧಿಕಾರಿಗಳ ಕಾಲು ಹಿಡಿದ ಮಕ್ಕಳು

author img

By

Published : Sep 25, 2021, 9:28 AM IST

ಗದಗ ತಾಲೂಕಿನ ಕದಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 6 ವರ್ಷದಿಂದ ಇಂಗ್ಲಿಷ್ ಶಿಕ್ಷಕರ ಕೊರತೆ ಇದೆ. ಹೀಗಾಗಿ ಶಿಕ್ಷಕರ ನೇಮಕ ಮಾಡಿ ಎಂದು ಗದಗ ಬಿಇಒ ಎಂ.ಎ.ರಡ್ಡೇರ್‌ ಮತ್ತು ಡಿಡಿಪಿಐ ಜಿ.ಎಂ.ಬಸವಲಿಂಗಪ್ಪ ಅವರನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ತರಾಟೆಗೆ ತೆಗೆದುಕೊಂಡರು.

English teacher
ಇಂಗ್ಲಿಷ್ ಶಿಕ್ಷಕರ ಕೊರತೆ

ಗದಗ : ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 6 ವರ್ಷದಿಂದ ಇಂಗ್ಲಿಷ್ ಶಿಕ್ಷಕರಿಲ್ಲ. ಸರ್ ನಮ್ಮ ಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ನಿಯೋಜನೆ ಮಾಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾಲು ಹಿಡಿದು ವಿದ್ಯಾರ್ಥಿಗಳು ಗೋಳಾಡಿದ ಘಟನೆ ಜಿಲ್ಲೆಯ ಕದಡಿ ಗ್ರಾಮದಲ್ಲಿ ನಡೆದಿದೆ.

ಗದಗ ತಾಲೂಕಿನ ಕದಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 6 ವರ್ಷಗಳಿಂದ ಇಂಗ್ಲಿಷ್ ಶಿಕ್ಷಕರ ಕೊರತೆ ಇದೆ. ಈ ಹಿಂದೆ ಇದ್ದ ಇಂಗ್ಲಿಷ್ ಶಿಕ್ಷಕಿ ಪಲ್ಲವಿ ಯಲಿಗಾರ್ ಎಂಬುವರನ್ನು ಅಧಿಕಾರಿಗಳು ಬೆಳಗಾವಿ ಜಿಲ್ಲೆಗೆ ನಿಯೋಜನೆಗೊಳಿಸಿದ್ದಾರೆ. ಇದರಿಂದ ಹೈಸ್ಕೂಲ್​ಗೆ ಇಂಗ್ಲಿಷ್ ಟೀಚರ್ ಕೊರತೆ ಇತ್ತು. ಪರಿಣಾಮ 8ನೇ ತರಗತಿಯಿಂದ 10ನೇ ತರಗತಿ ಮಕ್ಕಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆಯಾಗಿತ್ತು. ಹೀಗಾಗಿ ಪೋಷಕರು, ವಿದ್ಯಾರ್ಥಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಶಿಕ್ಷಕರನ್ನು ನೇಮಿಸುವಂತೆ ಮನವಿ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿಗಳು ಹಾಗೂ ಪೋಷಕರು

ಹಿಗ್ಗಾಮುಗ್ಗಾ ತರಾಟೆ:

ಶುಕ್ರವಾರ ರೊಚ್ಚಿಗೆದ್ದ ಮಕ್ಕಳು ಮತ್ತು ಪೋಷಕರು ಹೈಸ್ಕೂಲ್ ಮುಂದೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಗದಗ ಬಿಇಒ ಎಂ.ಎ.ರೆಡ್ಡೇರ್ ಗ್ರಾಮಸ್ಥರ ಮನವೊಲಿಕೆಗೆ ಮುಂದಾದರು. ಈ ವೇಳೆ ಶಿಕ್ಷಕರನ್ನು ತಕ್ಷಣ ನೇಮಕ ಮಾಡಬೇಕು ಎಂದು ಫೋಷಕರು ಪಟ್ಟು ಹಿಡಿದಿದ್ದು, ಮಕ್ಕಳು ಬಿಇಒ ಕಾಲಿಗೆ ಬಿದ್ದು ಶಿಕ್ಷಕರನ್ನು ನೇಮಿಸುವಂತೆ ಮನವಿ ಮಾಡಿದರು. ಇಷ್ಟಾದರೂ ಬಿಇಒ ಯಾವುದೇ ಭರವಸೆ ನೀಡದಿರುವುದಕ್ಕೆ ರೊಚ್ಚಿಗೆದ್ದ ಪೋಷಕರು, ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಗಪ್‌ಚುಪ್ ಆದ ಬಿಇಒ :

ನೀವು ಸರ್ಕಾರದಿಂದ ಲಕ್ಷ ಲಕ್ಷ ಸಂಬಳ ತೆಗೆದುಕೊಳ್ಳುತ್ತೀರಿ. ನಿಮ್ಮ ಮಕ್ಕಳನ್ನು ಒಳ್ಳೆಯ ಖಾಸಗಿ ಶಾಲೆಗೆ ಸೇರಿಸಿ ಓದಿಸುತ್ತೀರಿ. ನಾವೇನು ಮಾಡುವುದು ಎಂದು ಬಿಇಒಗೆ ಮಹಿಳೆ ಪ್ರಶ್ನಿಸಿದರು. ಮಹಿಳೆ ಆಕ್ರೋಶ ಹೊರಹಾಕುತ್ತಿದ್ದಂತೆ ಬಿಇಒ ಗಪ್‌ಚುಪ್ ಆದರು. ಬಳಿಕ ಸ್ಥಳಕ್ಕೆ ಬಂದ ಗದಗ ಡಿಡಿಪಿಐ ಜಿ.ಎಂ. ಬಸವಲಿಂಗಪ್ಪಗೆ ಇದೇ ವಿಷಯವಾಗಿ ಮಕ್ಕಳು ಒತ್ತಾಯಿಸಿದರು.

ಒತ್ತಡಕ್ಕೆ ಮಣಿದ ಡಿಡಿಪಿಐ:

ಗ್ರಾಮಸ್ಥರ ಒತ್ತಡಕ್ಕೆ ಮಣಿದ ಡಿಡಿಪಿಐ, ಶಿಕ್ಷಕಿ ಪಲ್ಲವಿ ಅವರನ್ನು ಬೆಳಗಾವಿ ಜಿಲ್ಲೆಗೆ ನಿಯೋಜಿಸಿದ್ದನ್ನು ರದ್ದುಗೊಳಿಸಿ ತಕ್ಷಣವೇ ಕದಡಿ ಹೈಸ್ಕೂಲ್​ಗೆ ಬಂದು ಹಾಜರಾಗಬೇಕು ಅಂತ ನೋಟಿಸ್ ಕಳುಹಿಸಿದರು.

ಡಿಡಿಪಿಐ ಭರವಸೆಗೆ ಗ್ರಾಮಸ್ಥರು ಮತ್ತು ಮಕ್ಕಳು ಫುಲ್ ಖುಷ್ ಆಗಿದ್ದಾರೆ. ಶಾಲೆಗೆ ಆರು ವರ್ಷಗಳ ಬಳಿಕ ಇಂಗ್ಲಿಷ್ ಶಿಕ್ಷಕರ ನೇಮಕವಾಗುತ್ತಿದ್ದು, ಮಕ್ಕಳಲ್ಲಿ ಹೊಸ ಭರವಸೆ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.