ETV Bharat / state

ಇಷ್ಟಾರ್ಥ ಸಿದ್ಧಿಸುವ ರತಿ - ಕಾಮನಿಗಿದೆ ಬಂಗಾರ ದುಪ್ಪಟ್ಟು ಮಾಡೋ ಶಕ್ತಿ!

author img

By

Published : Apr 2, 2021, 7:31 AM IST

155 ವರ್ಷಗಳಿಂದ ಕಾಮ - ರತಿಯರನ್ನು ಗದಗ ಜಿಲ್ಲೆಯ ಕಿಲ್ಲಾ ಓಣಿಯಲ್ಲಿ ವಿಶೇಷ ಹಾಗೂ ವಿಭಿನ್ನವಾಗಿ ಪೂಜಿಸಲಾಗುತ್ತಿದೆ. ಈ ದೇವರಿಗೆ ಮನೆಯಲ್ಲಿರುವ ಬಂಗಾರದ ವಸ್ತುಗಳನ್ನು ದುಪ್ಪಟ್ಟು ಮಾಡುವ ಶಕ್ತಿಯಿದೆ.

gadag
ಇಷ್ಟಾರ್ಥ ಸಿದ್ಧಿಸುವ ರತಿ-ಕಾಮ

ಗದಗ: ನಗರದ ಕಿಲ್ಲಾ ಓಣಿಯಲ್ಲಿ ವಿಶೇಷ ಹಾಗೂ ವಿಭಿನ್ನವಾದ ರತಿ - ಕಾಮರಿದ್ದಾರೆ. ಅವರು ಮದುವೆ ಆಗದವರಿಗೆ ಕಂಕಣ ಭಾಗ್ಯ, ಮಕ್ಕಳು ಆಗದವರಿಗೆ ಸಂತಾನ ಭಾಗ್ಯ, ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ, ಬಡವರಿಗೆ ಸಿರಿತನ ಭಾಗ್ಯ ಕರುಣಿಸುತ್ತಿದ್ದಾರೆ. ಅಷ್ಟೇ ಅಲ್ಲ ನಿಮ್ಮ ಮನೆಯಲ್ಲಿ ಚಿನ್ನ ಇದ್ದರೆ ಮುಂದಿನ ವರ್ಷ ಡಬಲ್ ಮಾಡುತ್ತೆ. ಇದು ಜನರ ಇಷ್ಟಾರ್ಥ ಸಿದ್ಧಿಸುವ ರತಿ - ಕಾಮರ ಕಥೆಯಿದು.

ನಗರದಲ್ಲಿ 155 ವರ್ಷಗಳಿಂದ ಈ ಕಾಮ - ರತಿಯರನ್ನು ಪ್ರತಿಷ್ಠಾಪಿಸುತ್ತಾ ಬಂದಿದ್ದಾರೆ. ಇದಕ್ಕೆ ಸರ್ಕಾರಿ ರತಿ - ಕಾಮರು ಎಂತೆಲ್ಲಾ ಕರೆಯುತ್ತಾರೆ. ಇಲ್ಲಿಯ ರತಿಗೆ ಪ್ರತಿವರ್ಷ ಸುಮಾರು 25 ರಿಂದ 30 ಕೆಜಿ ವರೆಗೆ ಬಂಗಾರದ ವಿವಿಧ ಲೇಖನಗಳನ್ನು ಹಾಕಲಾಗುತ್ತದೆ. ಮನ್ಮಥನಿಗೆ ಅಪ್ಪಟ ಚಿನ್ನದ ಕಂಠಹಾರ, ರತಿಗೆ ಕಿಲೋ ಗಟ್ಟಲೆ ಚಿನ್ನದ ಸರಗಳಿಂದ ಅಲಂಕಾರ ಮಾಡುತ್ತಾರೆ. ತಮ್ಮ ಮನೆಯಲ್ಲಿರುವ ಬಂಗಾರದ ವಸ್ತುಗಳನ್ನು ಈ ರತಿಗೆ ನೀಡಿದರೆ ಬರುವ ವರ್ಷದಲ್ಲಿ ಮತ್ತಷ್ಟು ಬಂಗಾರ ಹೆಚ್ಚಾಗುತ್ತೆ ಎಂಬ ನಂಬಿಕೆಯಿದೆ.

ಇಷ್ಟಾರ್ಥ ಸಿದ್ಧಿಸುವ ರತಿ-ಕಾಮ

ಭಕ್ತರು ಕೊಡುವ ಆಭರಣಗಳನ್ನು ಈ ರತಿ - ಕಾಮರ ಕಮಿಟಿಯವರು ಅವುಗಳಿಗೆ ಅವರ ಹೆಸರು ಬರೆದು ನೋಂದಾಯಿಸಿಕೊಂಡು ಒಂದು ಚೀಟಿ ಕೊಡ್ತಾರೆ. ಆ ಬಂಗಾರಕ್ಕೆ ಭಕ್ತರ ಹೆಸರಿನ ಒಂದು ಸಣ್ಣ ಚೀಟಿ ಸಹ ಬರೆದು ಹಾಕಲಾಗುತ್ತೆ. ಜೊತೆಗೆ ಭದ್ರತೆ ಕೂಡಾ ಇರುವುದರಿಂದ ಒಂದು ಗುಂಜಿ ಬಂಗಾರ ಸಹ ಕದಲುವುದಿಲ್ಲ. ಭಕ್ತರಿಗೆ ಒಳ್ಳೆಯದಾಗುತ್ತೆ ಎಂಬ ನಂಬಿಕೆಯಿಂದ ಇದು ಹಿಂದಿನಿಂದ ನಡೆದು ಬಂದ ಸಂಪ್ರದಾಯ ಅಂತಿದ್ದಾರೆ ಸ್ಥಳೀಯರು.

ಕೊರೊನಾ 2ನೇ ಅಲೆಯ ಮಧ್ಯೆಯೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. 155 ವರ್ಷಗಳ ಇತಿಹಾಸವಿರುವ ನಗರದ ರತಿ - ಕಾಮರ ಹೋಳಿ ಆಚರಣೆಗೆ ತನ್ನದೇ ಆದ ವೈಶಿಷ್ಠ್ಯವಿದೆ. 5 ದಿನಗಳವರೆಗೆ ರತಿ ಮನ್ಮಥರನ್ನ ಪ್ರತಿಷ್ಠಾಪಿಸುತ್ತಾರೆ. ನಿತ್ಯ ಎರಡು ಬಾರಿ ಸಿಹಿ ಅಡುಗೆ ಎಡೆಮಾಡುವ ಮೂಲಕ ಪೂಜೆ ಮಾಡುತ್ತಾರೆ. ಈ ಬಂಗಾರದ ರತಿ - ಕಾಮರ ದರ್ಶನಕ್ಕೆ ಬೇರೆ ಬೇರೆ ಜಿಲ್ಲೆಯಿಂದಲೂ ಭಕ್ತರು ಬರುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.