ETV Bharat / state

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯುವಜನತೆ ಪಾತ್ರವೇ ನಿರ್ಣಾಯಕ: ಸಂಸದ ತೇಜಸ್ವಿ ಸೂರ್ಯ..

author img

By

Published : Jan 13, 2023, 6:00 PM IST

Updated : Jan 13, 2023, 11:07 PM IST

ಹುಬ್ಬಳ್ಳಿ ಧಾರವಾಡದಲ್ಲಿ ಯುವಜನೋತ್ಸವ - ನೂರಕ್ಕೆ ನೂರರಷ್ಟು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಕ್ಷ ಹೆಚ್ಚು ಸ್ಥಾನಗಳಲ್ಲಿ ವಿಜಯ ಸಾಧಿಸಲಿದೆ - ಸಂಸದ ತೇಜಸ್ವಿ ಸೂರ್ಯ ವಿಶ್ವಾಸ.

MP Tejasvi Surya
ಸಂಸದ ತೇಜಸ್ವಿ ಸೂರ್ಯ

ಸಂಸದ ತೇಜಸ್ವಿ ಸೂರ್ಯ

ಹುಬ್ಬಳ್ಳಿ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯುವಜನತೆ ಮಹತ್ವದ ಪಾತ್ರ ವಹಿಸುವರು. ಯುವಜನರಿಗೆ ಅತಿ ಹೆಚ್ಚು ಅವಕಾಶ ಕೊಡುವ ಬಿಜೆಪಿ, ನೂರಕ್ಕೆ ನೂರರಷ್ಟು ಉತ್ತರ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಸ್ಥಾನಗಳಲ್ಲಿ ವಿಜಯ ಸಾಧಿಸಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ - ಧಾರವಾಡದಲ್ಲಿ ಯುವಜನೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಜರುಗುತ್ತಿದೆ. ಯುವಜನೋತ್ಸವಕ್ಕೆ ದೇಶದ ವಿವಿಧ ಮೂಲೆ ಮೂಲೆಯಿಂದ ಭಾಗವಹಿಸಲು ಯುವಕ-ಯುವತಿಯರು ಆಗಮಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಅವರೆಲ್ಲ ಉತ್ಸಾಹದಿಂದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನೂ ಮೈಗೂಡಿಸಿಕೊಳ್ಳುವ ಉದ್ದೇಶದಿಂದ ಯುವಜನೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಈಗಾಗಲೇ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ದೇಶಕ್ಕೆ ಹಾಗೂ ಯುವಜನರಿಗೆ ಉತ್ತಮ ಸಂದೇಶ ಕೊಟ್ಟಿದ್ದಾರೆ ಎಂದು ತೇಜಸ್ವಿ ತಿಳಿಸಿದರು.

ಗೆಲ್ಲುವ ಖುಷಿಯಲ್ಲಿ ಯುವಮೋರ್ಚಾ:ಇಂದು ನಾನು ಸಹ ಯುವಜನೋತ್ಸವದಲ್ಲಿ ಭಾಗಿಯಾಗಲು, ಯುವಕರನ್ನು ಉದ್ದೇಶಿಸಿ ಮಾತನಾಡಲು ಇಲ್ಲಿಗೆ ಬಂದಿದ್ದೇನೆ. ಇದಕ್ಕೂ ಪೂರ್ವದಲ್ಲಿ ಯುವ ಮೋರ್ಚಾದ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮ ಕೂಡ ಮಾಡಿದ್ದೇನೆ. ಬಹಳ ಉತ್ಸಾಹದಿಂದ ನಮ್ಮ ಕಾರ್ಯಕರ್ತರು ಚುನಾವಣೆಯನ್ನು ಎದುರು ನೋಡುತ್ತಾ ಇದ್ದಾರೆ. ಗೆಲ್ಲುವ ಖುಷಿಯಲ್ಲಿ ಯುವಮೋರ್ಚಾ ಕಾರ್ಯಕರ್ತರು ವಿವಿಧ ಕಾರ್ಯದ ಚಟುವಟಿಕೆಗಳಲ್ಲಿ ಮುಂದುವರಿದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯುವಜನರು ಬಿಜೆಪಿ ಯೋಜನೆಗಳಿಂದ ಆಕರ್ಷಿತರಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೂ ಜನಪರ ಆಗಿರುವ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಜನರ ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಯುವ ಪಡೆ ಮಾಡುತ್ತಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಸಂಚಲನ ಸೃಷ್ಟಿ:ಈಗಾಗಲೇ ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಬಂದು ಹೊಸ ಸಂಚಲನ ಹುಟ್ಟು ಹಾಕಿದ್ದಾರೆ. ಇದು ರಾಜ್ಯದ ಜನರ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಮುಂದಿನ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನೂರಕ್ಕೆ ನೂರು ಬಿಜೆಪಿ ಹೆಚ್ಚು ಸ್ಥಾನ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಮಾನ್ಯರಿಗೆ ಅವುಕಾಶ ಕಲ್ಪಿಸಿದ ಬಿಜೆಪಿ: ಸಾಮಾನ್ಯ ವ್ಯಕ್ತಿ ರಾಜಕೀಯದಲ್ಲಿ ಅವಕಾಶ ಪಡೆಯಬಹುದು ಎನ್ನುವುದಕ್ಕೆ ಬಿಜೆಪಿ ಪಕ್ಷವೇ ಸಾಕ್ಷಿ. ಬಹಳಷ್ಟು ಸಾಮಾನ್ಯ ವ್ಯಕ್ತಿಗಳಿಗೆ ರಾಜಕೀಯ ಕ್ಷೇತ್ರಕ್ಕೆ ಬರಲು ಬಿಜೆಪಿ ಅವಕಾಶ ಕಲ್ಪಿಸಿದೆ. ರಾಜಕೀಯದಲ್ಲಿ ಯುವಜನತೆಗೆ ನೇತೃತ್ವ ವಹಿಸಿಕೊಳ್ಳಲು, ವ್ಯಕ್ತಿತ್ವ ವಿಕಸನ ಹಾಗೂ ವೇದಿಕೆಗಳನ್ನು ಬಿಜೆಪಿ ಒದಿಗಿಸಿಕೊಟ್ಟು ಉತ್ತಮ ನಾಯಕತ್ವವನ್ನೂ ರೂಪಿಸಿದೆ.

ಈ ಪಕ್ಷದಲ್ಲಿ ಸಿಗುವಷ್ಟು ಅವಕಾಶ ಬೇರೆ ಯಾವುದೇ ಪಕ್ಷದಲ್ಲಿ ಇಲ್ಲ. ಇದಕ್ಕೆ ನಾನೇ ತಾಜಾ ಉದಾಹರಣೆ ಎಂದ ಅವರು, ಇನ್ನು ಚುನಾವಣೆಯಿಂದ ಬಹಳ ದೂರ ಇದ್ದೇವೆ. ಚುನಾವಣೆ ಸಮೀಪಿಸಿದಾಗ ಯುವನಾಯಕರಿಗೆ ಇಷ್ಟು ಸೀಟು ಎಂದು ಖಚಿತ ಪಡಿಸುತ್ತೇನೆ ಎಂದು ಸ್ಪಷ್ಟ ಪಡಿಸಿದರು.

ಯುವಕರ ಪಾತ್ರ ದೊಡ್ಡದು:ದೇಶದ ಜನಸಂಖ್ಯೆಯಲ್ಲಿ ಯುವಕರ ಪಾತ್ರ ಮಹತ್ವದ್ದು, ಕರ್ನಾಟಕದಲ್ಲಿ ಯುವಜನರು ಹೆಚ್ಚಿದ್ದಾರೆ, ಈಗಾಗಲೇ ಪ್ರತಿ ಕ್ಷೇತ್ರದಿಂದ 4-5 ಸಾವಿರ ಯುವ ಹೊಸ ಮತದಾರರು ಸೇರ್ಪಡೆ ಆಗಿದ್ದಾರೆ. ಯುವಜನರ ಬೇಡಿಕೆಗಳನ್ನು ಕೇಳೋದು, ಸರ್ಕಾರ ಯೋಜನೆ ಅವರಿಗೆ ತಲುಪಿಸೋದು ಯುವ ಮೋರ್ಚಾದ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಮೂಲ ಸಿದ್ದಾಂತ ಅಂತ್ಯೋದಯ. ಯಾರು ಅತ್ಯಂತ ಕಡುಬಡವ ಇದ್ದಾನೆ. ಅವನಿಗೆ ನ್ಯಾಯ ಒದಗಿಸೋದು ನಮ್ಮ ಧ್ಯೇಯ, ಜಾತಿ ಯಾವುದೇ ಇರಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸೋದೆ ನಮ್ಮ ಉದ್ದೇಶ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಇದನ್ನೂಓದಿ:ಕೋಲಾರದಲ್ಲಿ ಸಿದ್ದರಾಮಯ್ಯ ಗೆದ್ದು ಬರುವ ವಿಶ್ವಾಸ ಇಲ್ಲ: ಸಿ ಟಿ ರವಿ ಟೀಕಾಪ್ರಹಾರ

Last Updated : Jan 13, 2023, 11:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.