ಭ್ರಷ್ಟಾಚಾರದ ತತ್ತಿ ಇಟ್ಟು ಕಾವು ಕೊಟ್ಟವರು ಕಾಂಗ್ರೆಸ್ಸಿನವರೇ: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

author img

By

Published : Jan 27, 2023, 5:03 PM IST

Updated : Jan 27, 2023, 5:29 PM IST

Prahlad Joshi rant against Congress

ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್​ನಲ್ಲಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಭಾಗಿ - ಬಿಜೆಪಿ ಬ್ಯಾನ್ ಮಾಡುವ ಮುನ್ನವೇ ಜನರು ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್​ ಬ್ಯಾನ್ ಮಾಡಿದ್ದಾರೆ - ಕಾಂಗ್ರೆಸ್​ ವಿರುದ್ದ ಪ್ರಹ್ಲಾದ್​ ಜೋಶಿ ವಾಗ್ದಾಳಿ

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ: ಧಾರವಾಡ ಜಿಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸುತ್ತಿದ್ದಾರೆ. ಬಿವಿಬಿ ಅಮೃತ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ಬಹುನೀರಿಕ್ಷಿತ ಎನ್.ಎಫ್‌.ಎಸ್.ಯು(ನ್ಯಾಷನಲ್ ಫಾರೆನ್ಸಿಕ್ ಸೈನ್ಸ್ ಯುನಿವರ್ಸಿಟಿ)ಗೆ ಅಡಿಗಲ್ಲು ಸಮಾರಂಭ ನೆರವೇರಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ತಿಳಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್​​ಎಫ್ಎಸ್​​ಯು ಬಗ್ಗೆ ಈಗಾಗಲೇ ಬೇಡಿಕೆ ಇಟ್ಟಿದ್ದೆವು. ಈಗ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಧಾರವಾಡಕ್ಕೆ ಎನ್​ಎಫ್ಎಸ್​ಯು ಜಾರಿಯಾಗಿರುವುದು ನಿಜಕ್ಕೂ ವಿಶೇಷವಾಗಿದೆ. ಈ ಭಾಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಂತೆ ಎನ್​ಎಫ್ಎಸ್​ಯು ಕೂಡ ಕಾರ್ಯಾರಂಭವಾಗಲಿದ್ದು, ದಕ್ಷಿಣ ಭಾರತದಲ್ಲಿಯೇ ಮೊದಲ ವಿಶ್ವವಿದ್ಯಾಲಯ ಇದಾಗಿದೆ ಎಂದರು.

ಇನ್ನು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿರುವ ಭಯವನ್ನು ದೂರಮಾಡಿ ಹೊಸ ಉತ್ಸಾಹವನ್ನು ಸೃಷ್ಟಿಸುವ ಸದುದ್ದೇಶದಿಂದ ಚರ್ಚಾ ಕಾರ್ಯಕ್ರಮ ನಡೆದಿದೆ. ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು ಅವರು ಹೇಳಿದರು.

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಿಸಿದ ಜೋಶಿ: ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್​ನಲ್ಲಿ ಪರೀಕ್ಷಾ ಪೇ ಚರ್ಚಾ ವೀಕ್ಷಣೆಗೆ ಅವಕಾಶ ಮಾಡಲಾಗಿದ್ದು, ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ವೀಕ್ಷಣೆ ಮಾಡಿದರು. ಜೂತೆಗೆ ಸುಮಾರು ಐದು ಕಾಲೇಜ್​ನ ವಿದ್ಯಾರ್ಥಿಗಳು ಮೋದಿ ಅವರ ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮ ವೀಕ್ಷಣೆ ಮಾಡಿದ್ದು, ಈ ವೇಳೆ ಕೇಂದ್ರ ಸಚಿವ ಜೋಶಿ ಜೊತೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.

ಬಿಜೆಪಿ ಬ್ಯಾನ್ ಮಾಡುವ ಮುನ್ನವೇ ಜನರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್​ ಅನ್ನು ಬ್ಯಾನ್ ಮಾಡಿದ್ದಾರೆ. ಕಾಂಗ್ರೆಸ್ಸಿನವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ನನಗೆ ವಿಚಿತ್ರ ಸಂಗತಿ. ಭ್ರಷ್ಟಾಚಾರ ಆರಂಭವಾಗಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಎಂದು ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು. ನೆಹರು ಕಾಲದಿಂದ ಮನಮೋಹನ್ ಸಿಂಗ್ ಕಾಲದವರೆಗೂ ಭ್ರಷ್ಟಾಚಾರ ಆಗಿದೆ. ಆದರೆ, ಕಾಂಗ್ರೆಸ್ಸೇತರ ಸರ್ಕಾರ ಇದ್ದಾಗ ಹಗರಣ ಆಗಿಲ್ಲ ಎಂದರು.

ನರೇಂದ್ರ ಮೋದಿ ಸರ್ಕಾರದಲ್ಲಿ ಯಾರೊಬ್ಬರೂ ಕೂಡ ಭ್ರಷ್ಟಾಚಾರದ ಧ್ವನಿ ಎತ್ತುವುದಕ್ಕೆ ಸಾಧ್ಯವಿಲ್ಲ. ಭ್ರಷ್ಟಾಚಾರದ ತತ್ತಿ ಇಟ್ಟು ಕಾವು ಕೊಟ್ಟವರು ಕಾಂಗ್ರೆಸ್ಸಿನವರೇ. ಭ್ರಷ್ಟಾಚಾರದ ಬೀಜ ಬಿತ್ತಿದವರು ಇವರೇ. ಇವರೆಲ್ಲ ಪರಮ ಭ್ರಷ್ಟರು. ಡಿ.ಕೆ.ಶಿವಕುಮಾರ್ ಮೊದಲು ತಮ್ಮ ಅಸ್ತಿ ಡಿಕ್ಲೇರ್ ಮಾಡಲಿ ಎಂದು ಸಚಿವ ಪ್ರಹ್ಲಾದ್​ ಜೋಶಿ ಸವಾಲು ಹಾಕಿದರು.

ಮಾತನಾಡುವಾಗ ಸ್ವಲ್ಪ ಜ್ಞಾನ ಇಟ್ಟುಕೊಂಡು ಮಾತನಾಡಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೂರು ಸಾರಿ ರಾಜ್ಯಕ್ಕೆ ಬರಲಿ ಎನ್ನುವ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ 2014ರಲ್ಲಿ ಕೆಟ್ಟ ಕೆಟ್ಟ ಶಬ್ದಗಳಿಂದ ಮೋದಿಯವರ ಬಗ್ಗೆ ಮಾತನಾಡಿದ್ದರು. ಏನಾಯ್ತು ಲೋಕಸಭೆಯಲ್ಲಿ ನಾವೇ ಗೆಲ್ಲುವುದು, ಒಂದೆರಡು ಸೀಟು ಬಿಜೆಪಿ ಗೆದ್ದರೆ ಬಹಳ ಎಂದು ಸಿದ್ದರಾಮಯ್ಯ ಹೇಳಿದ್ದರು, 2018 ಚುನಾವಣೆಯಲ್ಲೂ ಹೀಗೆ ಹೇಳಿದ್ದರು. ಆಗ ಸಮ್ಮಿಶ್ರ ಸರ್ಕಾರ ಇತ್ತು. ಬಿಜೆಪಿ ವಿರುದ್ದ ಕಾಂಗ್ರೆಸ್​ - ಜೆಡಿಎಸ್​ ಒಟ್ಟಿಗೆ ಸ್ಪರ್ಧಿಸಿದರೂ ಗೆದ್ದಿದ್ದು 2 ಕ್ಷೇತ್ರಗಳನ್ನ ಮಾತ್ರ. ನಾವು 26 ಗೆದ್ದು ನಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದ್ದೇವೆ. ಮಾತನಾಡುವಾಗ ಸ್ವಲ್ಪ ಜ್ಞಾನ ಇಟ್ಟುಕೊಂಡು ಮಾತನಾಡಿ, ಹಳೆಯದನ್ನು ನೆನಪಿನಲ್ಲಿಟ್ಟುಕೊಂಡು ಮಾತನಾಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಸಚಿವ ಪ್ರಹ್ಲಾದ್​ ಜೋಶಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಶಿಕ್ಷಣ ಕಾಶಿಗೆ ಮತ್ತೊಂದು ಗರಿ: ಧಾರವಾಡದಲ್ಲಿ ಸ್ಥಾಪನೆಯಾಗಲಿದೆ ವಿಧಿವಿಜ್ಞಾನ ಯುನಿವರ್ಸಿಟಿ

Last Updated :Jan 27, 2023, 5:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.