ETV Bharat / state

ಒಳ್ಳೆಯ ಕೆಲಸ ಮಾಡಿದ್ರೆ ಪ್ರಶಸ್ತಿ..ತಪ್ಪು ಮಾಡಿದರೆ ಕ್ರಿಮಿನಲ್ ಕೇಸ್ : ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ

author img

By ETV Bharat Karnataka Team

Published : Sep 14, 2023, 9:10 PM IST

ಧಾರವಾಡದಲ್ಲಿ ಸಚಿವ ಕೃಷ್ಣ ಬೈರೇಗೌಡ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

revenue-minister-byre-gowda-warns-officers-in-dharwad
ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ

ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ

ಧಾರವಾಡ : ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದರೆ, ಜನಪರ ಕೆಲಸ ಮಾಡಿದರೆ ಅವರಿಗೆ ಪ್ರಶಸ್ತಿ ನೀಡಲಾಗುವುದು. ಅಲ್ಲದೇ ತಪ್ಪು ಮಾಡಿದರೆ ಅಮಾನತು ಮಾತ್ರವಲ್ಲ. ಕ್ರಿಮಿನಲ್ ಪ್ರಕರಣವನ್ನು ದಾಖಲಿಸುತ್ತೇವೆ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದರು.

ನಗರದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಆಡಳಿತ ಸುಧಾರಣೆ ಕಂದಾಯ ಇಲಾಖೆಯ ಮೂಲಕವೇ ಆಗಬೇಕು. ಹೀಗಾಗಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಒಳ್ಳೆ ಕೆಲಸ ಮಾಡಿದವರಿಗೆ ಸರ್ವೋತ್ತಮ ಅಧಿಕಾರಿ ಪ್ರಶಸ್ತಿ ಕೊಡುತ್ತೇವೆ. ಒಳ್ಳೆಯ ಮಾತಿಗೆ ಬಗ್ಗದೇ ತಪ್ಪು ಮಾಡುವವರೂ ಇದ್ದಾರೆ. ಅಂಥವರಿಗೆ ಅವರದೇ ಮಾತಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ವಂಚನೆ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡುತ್ತೇವೆ. ಜೊತೆಗೆ ಕ್ರಿಮಿನಲ್ ಕೇಸ್ ಕೂಡ ಹಾಕುತ್ತೇವೆ. ಕೆಲವರ ಉದ್ದೇಶವೇ ಭ್ರಷ್ಟಾಚಾರ ಆಗಿರುತ್ತದೆ. ಅದು ಕ್ರಿಮಿನಲ್ ಪ್ರಕರಣ ಆಗುತ್ತದೆ. ಈಗಾಗಲೇ ಇಬ್ಬರು ಎಸಿಗಳ ಮೇಲೆ ಕ್ರಿಮಿನಲ್ ಕೇಸ್ ಆಗಿದೆ. ಇಲ್ಲಿವರೆಗೆ ಬಡಪಾಯಿ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಕ್ರಮ ಆಗುತ್ತಿತ್ತು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂದು ಹೇಳುತ್ತಿದ್ದರು. ಆದರೆ, ಈಗ ತಪ್ಪು ಮಾಡಿದ ಎಸಿಗಳ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ. ಹಿಂದೆ ಹೇಗೆ ಕೆಲಸ ಮಾಡಿದ್ದಿರಿ ಎಂದು ನಾವು ಕೇಳುವುದಿಲ್ಲ. ಆದರೆ, ಈಗ ಜನ ಪರವಾಗಿ ಕೆಲಸ ಮಾಡಬೇಕು ಎಂದರು.

ಅಧಿಕಾರಿಗಳ ವಿರುದ್ಧ ಸಚಿವರು ಗರಂ : ಡಿಡಿಎಲ್‌ಆರ್ ಅಧಿಕಾರಿ ಕಾರ್ಯವೈಖರಿ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಗರಂ ಆದ ಘಟನೆ ನಡೆಯಿತು. ಧಾರವಾಡ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಜಿಲ್ಲಾ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಪೋಡಿ ಸರ್ವೆಗೆ ಸಂಬಂಧಿಸಿದಂತೆ ಪರಿಶೀಲನೆ ವೇಳೆ ಜನರಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿ ಮೋಹನ ಶಿವಮ್ಮನವರ್​ ಸಚಿವರು ಕ್ಲಾಸ್ ತೆಗೆದುಕೊಂಡರು.

ಬಳಿಕವೂ ಅಧಿಕಾರಿ ತಮ್ಮದೇ ಸಮಜಾಯಿಷಿ ನೀಡಿದ್ದಕ್ಕೆ ಮತ್ತೆ ಗರಂ ಆದ ಸಚಿವರು, ನಾನು ಎಷ್ಟು ಹೇಳಿದ್ರೂ ನೀವು ಒಪ್ಪೊಲ್ಲ ಬಿಡಿ. ನೀವು ನಮ್ಮ ಮಾತು ಕೇಳೋದಿಲ್ಲ. ಬೆಳಗ್ಗೆಯಿಂದ ಹೇಳ್ತಾ ಇದೆನಿ ನಿಮಗೆ ತಿಳೀತಾ ಇಲ್ವಾ ? ಸರ್ವೆ ಇಲಾಖೆಯವರು ನಿಮ್ಮನ್ನು ನೀವು ಏನೆಂದುಕೊಂಡಿದ್ದೀರಿ?. ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ. ಇರೋ ಕಾನೂನು ನಿಮ್ಮ ತಲೆಗೆ ಹೋಗೋದಿಲ್ಲ ಅಂದ್ರೆ ಹೇಗೆ?. ಎಲ್ಲ ಜನ ಬಂದು ನಿಮ್ಮ ಮನೆ ಬಾಗಿಲು ಕಾಯಬೇಕಾ? ನೀವು ಹೇಳಿದ ಹಾಗೆ ಜಗತ್ತು ಕುಣಿಯಬೇಕಾ? ಎಂದು ತರಾಟೆ ತೆಗೆದುಕೊಂಡರು.

ಇದನ್ನೂ ಓದಿ : ಬರಗಾಲ ಘೋಷಣೆ: ಕೇಂದ್ರ ಸರ್ಕಾರ ರೈತರನ್ನು ಗೊಂದಲಕ್ಕೀಡು ಮಾಡಿದೆ.. ಕಂದಾಯ ಸಚಿವ ಕೃಷ್ಣಬೈರೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.