ETV Bharat / state

ಬಿಡಿಗಾಸಿನ ನೆರೆ ಪರಿಹಾರಕ್ಕೆ ಬೇಸರ: ಮುಖ್ಯಮಂತ್ರಿಗಳೇ ನಮ್ಮ ಕಷ್ಟ ಕಣ್ಬಿಟ್ಟು ನೋಡಿ ಎಂದ ಜನ

author img

By

Published : Jul 14, 2022, 5:30 PM IST

Updated : Jul 14, 2022, 6:05 PM IST

ಮಳೆಯಿಂದ ಭಾರಿ ಹಾನಿ- ಸರ್ಕಾರದಿಂದ ಹಣ ಬಿಡುಗಡೆ-ಪುಡಿಗಾಸು ಸಾಲಲ್ಲ, ಮುಖ್ಯಮಂತ್ರಿಗಳೇ ಕಷ್ಟ ಕಣ್ಬಿಟ್ಟು ನೋಡಿ ಅಂತಿದ್ದಾರೆ ಸಂತ್ರಸ್ತರು

ಬಿಡಿಗಾಸಿನ ನೆರೆ ಪರಿಹಾರಕ್ಕೆ ಬೇಸರ
ಬಿಡಿಗಾಸಿನ ನೆರೆ ಪರಿಹಾರಕ್ಕೆ ಬೇಸರ

ಹುಬ್ಬಳ್ಳಿ : ನೆರೆ ಸಂತ್ರಸ್ತರಿಗೆ ಪರಿಹಾರ ನೀಡುತ್ತಿದ್ದೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಬೊಬ್ಬೆ ಹೊಡೆಯುತ್ತಿದೆ. ಆದರೆ, ಸೂರು ಕಳೆದುಕೊಂಡವರಿಗೆ ಬಿಡಿಗಾಸಿನ‌ ಪರಿಹಾರ ನೀಡಿದೆ. ಬಿದ್ದಿರುವ ಮನೆಗಳಿಗೆ ಸರ್ಕಾರ ಐದು ಸಾವಿರ ರೂಪಾಯಿ ನೀಡಿದೆ. ಕಲ್ಲು ಹೊರ ಹಾಕುವ ‌ಕೂಲಿಗೂ ಈ‌ ಹಣ ಸಾಲಲ್ಲ ಎಂದು ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ನೆಲಕಚ್ಚಿದ ಮನೆಗಳು: ಮುಂಗಾರು ಪೂರ್ವ ಸುರಿದ ಮಳೆಯಿಂದ ಧಾರವಾಡ ಜಿಲ್ಲೆಯಲ್ಲಿ ನೂರಾರು ಮನೆಗಳು ನೆಲಕಚ್ಚಿವೆ. ಇದರಿಂದ ಸಾಕಷ್ಟು ಸಂಕಷ್ಟ ಅನುಭವಿಸುವಂತಾಗಿದ್ದು, ಸರ್ಕಾರ ಮಾತ್ರ ಬಿಡಿಗಾಸಿನ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಹಲವರಿಗೆ ಈ ಬಿಡಿಗಾಸು ಕೂಡ ತಲುಪಿಲ್ಲ. ಬರುವ ಪರಿಹಾರದದಿಂದ ಬಿದ್ದ ಮನೆ ಜಾಗದಲ್ಲಿ ಒಂದು ಸಣ್ಣ ಸೂರು ಕಟ್ಟಿಕೊಳ್ಳಬೇಕು ಎಂದುಕೊಂಡವರಿಗೆ ಬರಸಿಡಿಲು ಬಡದಂತಾಗಿದೆ.

ಮುಂಗಾರು ಪ್ರವೇಶಕ್ಕಿಂತ ಮೊದಲೇ ಭಾರೀ ಮಳೆಯಾಗಿದೆ. ಮೇ ತಿಂಗಳಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ನಷ್ಟವಾಗಿದೆ. ಬದುಕಿಗೆ ಆಶ್ರಯವಾಗಿದ್ದ ಸೂರು ಧರೆಗುರುಳಿದ್ದು, ದಿನದ ಕೂಲಿಯಲ್ಲಿ ಗಂಜಿ, ಅನ್ನ ತಿಂದು ನೆಮ್ಮದಿಯಿಂದ ಬದುಕುತ್ತಿದ್ದ ಕೆಲ ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ.‌

ಐದು ಸಾವಿರ ಪರಿಹಾರ: ಮನೆಗೆ ಸರ್ಕಾರ ಒಂದಿಷ್ಟು ಪರಿಹಾರ ನೀಡಿದರೆ ನಾಲ್ಕು ಗೋಡೆ ಎಬ್ಬಿಸಿ ಮೇಲೆ ತಗಡಿನ ಶೀಟಾದರೂ ಹಾಕಿದರಾಯ್ತು ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರ ದೊಡ್ಡ ಶಾಕ್ ನೀಡಿದೆ. ಬಿದ್ದಿರುವ ಮನೆಗಳಿಗೆ ಗರಿಷ್ಠ ಐದು ಸಾವಿರ ರೂಪಾಯಿ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಇದೀಗ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಬಿಡಿಗಾಸಿನ ನೆರೆ ಪರಿಹಾರಕ್ಕೆ ಬೇಸರ: ಮುಖ್ಯಮಂತ್ರಿಗಳೇ ನಮ್ಮ ಕಷ್ಟ ಕಣ್ಬಿಟ್ಟು ನೋಡಿ ಎಂದ ಜನ

ಕುಂದಗೋಳ ತಾಲೂಕಿನಲ್ಲಿಯೇ ನೂರಾರು ಅರ್ಜಿ ತಿರಸ್ಕೃತಗೊಂಡಿವೆ. ಮುಂಗಾರು ಪೂರ್ವ ಮಳೆಯ ಹಾನಿಗೆ ಕುಂದಗೋಳ ಜನತೆ ಅಕ್ಷರಶಃ ನಲುಗಿದ್ದರು. ಈ ತಾಲೂಕಿನಲ್ಲಿ ಮನೆಗಳ ಪರಿಹಾರ ಕೋರಿ ಸಲ್ಲಿಕೆಯಾದ 222 ಅರ್ಜಿಗಳ ಪೈಕಿ 191 ತಿರಸ್ಕಾರಗೊಂಡಿವೆ. ನವಲಗುಂದ ತಾಲೂಕಿನಲ್ಲಿ 143 ಅರ್ಜಿಗಳ ಪೈಕಿ ಕೇವಲ 24 ಮಾತ್ರ ತಿರಸ್ಕೃತಗೊಂಡಿವೆ. ಉಳಿದಂತೆ ಹುಬ್ಬಳ್ಳಿ ಗ್ರಾಮಾಂತರ ತಾಲೂಕು ವ್ಯಾಪ್ತಿಯಲ್ಲಿ 76 ಅರ್ಜಿಗಳು ಸಲ್ಲಿಕೆಯಾಗಿದ್ದವು ಇದರಲ್ಲಿ 37 ತಿರಸ್ಕೃತಗೊಂಡಿವೆ.

ಅರ್ಜಿಗಳ ತಿರಸ್ಕಾರ : ಧಾರವಾಡ ತಾಲೂಕಿನಲ್ಲಿ 69 ಅರ್ಜಿಗಳ ಪೈಕಿ 13 ಮಾತ್ರ ತಿರಸ್ಕಾರಗೊಂಡಿವೆ. ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಲ್ಲಿ ಹೆಚ್ಚು ಮನೆಗಳನ್ನು ಪರಿಹಾರಕ್ಕೆ ಗುರುತಿಸಲಾಗಿದೆ. ಆದರೆ, ಕಾಂಗ್ರೆಸ್ ಶಾಸಕರಿರುವ ಕುಂದಗೋಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿಗಳನ್ನು ತಿರಸ್ಕಾರ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಸಲ್ಲಿಕೆಯಾಗಿದ್ದ 600 ಅರ್ಜಿಗಳ ಪೈಕಿ 323 ಮಾತ್ರ ಪರಿಹಾರಕ್ಕೆ ಊರ್ಜಿತಗೊಂಡಿದ್ದು, ಇವುಗಳ ಪೈಕಿ 108 ಮನೆಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಇನ್ನು 215 ಮನೆಗಳಿಗೆ ಪರಿಹಾರ ನೀಡುವುದು ಬಾಕಿಯಿದೆ ಎಂದು ಹೇಳಲಾಗುತ್ತಿದೆ.

ಅಸಮರ್ಪಕ ಗುರುತಿಸುವಿಕೆ : ಮೇಲ್ಛಾವಣಿ, ಮೂರು ಗೋಡೆಗಳು ಬಿದ್ದು ಒಂದು ಗೋಡೆ ಉಳಿದರೆ ಅದನ್ನು ಅಧಿಕಾರಿಗಳು ಭಾಗಶಃ ಎಂದು ಪರಿಗಣಿಸಿದ್ದಾರೆ ಎನ್ನುವ ಆಕ್ರೋಶ ಜನರಲ್ಲಿದೆ. ಮಾಳಿಗೆ, ಮೂರು ಗೋಡೆ ಬಿದ್ದ ಮನೆಗೆ ಗರಿಷ್ಠ ಐದು ಸಾವಿರ ರೂ. ಪರಿಹಾರ ವಿತರಿಸಲಾಗುತ್ತಿದೆ. ಒಂದು ಮಾನವ ಪ್ರಾಣ ಹಾನಿ, 27 ಜಾನುವಾರುಗಳ ಜೀವ ಹಾನಿ ಸೇರಿ 6.63 ಲಕ್ಷ ರೂ. ಪರಿಹಾರ ವಿತರಿಸಿದ್ದರೆ, ಬಿದ್ದ 108 ಮನೆಗಳಿಗೆ 5.47 ಲಕ್ಷ ರೂ. ಬಿಡಿಗಾಸಿನ ಪರಿಹಾರ ವಿತರಿಸಲಾಗಿದೆ ಎನ್ನುವ ಆರೋಪ ಜನರದ್ದಾಗಿದೆ.

2019-20 ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರೆಯಿಂದಾಗಿ ಮನೆ ಕಳೆದುಕೊಂಡವರಿಗೆ ಉತ್ತಮ ಪರಿಹಾರ ಘೋಷಿಸಿದ್ದರು.‌ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಹಿಂದಿನ ಘೋಷಣೆ ಮುಂದುವರೆಸುತ್ತಾರೆ, ಇದರಿಂದ ಸಣ್ಣ ಮನೆಯಾದರೂ ಕಟ್ಟಿಕೊಳ್ಳಬಹುದು ಎಂದು ಕನಸು ಕಂಡವರ ಖಾತೆಗೆ ಬಿಡಿಗಾಸಿನ ಪರಿಹಾರ ಜಮೆಯಾಗುತ್ತಿದೆ. ಈಗಾಲಾದ್ರೂ ಬೊಮ್ಮಾಯಿ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಮನೆ ಕಳೆದುಕೊಂಡ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ‌ ಮಾಡಬೇಕಿದೆ.

ಇದನ್ನೂ ಓದಿ: ನದಿಯಲ್ಲಿ ಸಿಲುಕಿದ ಟ್ರ್ಯಾಕ್ಟರ್​​.. ನೋಡ - ನೋಡುತ್ತಿದ್ದಂತೆ ಹರಿದು ಬಂದ ಪ್ರವಾಹದ ನೀರು.. ವಿಡಿಯೋ

Last Updated : Jul 14, 2022, 6:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.