ಧಾರವಾಡ: ಗ್ರಾಮೀಣ ಸೊಗಡಿನ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಧಾರವಾಡದಲ್ಲಿ ಮಹಿಳೆಯರು ವಿಶಿಷ್ಟವಾಗಿ ಆಚರಿಸಿದರು.
ಧಾರವಾಡದ ಜಾನಪದ ಸಂಶೋಧನಾ ಕೇಂದ್ರದ ವತಿಯಿಂದ ಉತ್ತರ ಕರ್ನಾಟಕದ ಪಕ್ಕಾ ದೇಶಿ ಶೈಲಿಯಲ್ಲಿ ಹಬ್ಬ ಆಚರಣೆ ಮಾಡಲಾಯಿತು. ಜಾನಪದ ಕಲಾವಿದರಾದ ಬಸಲಿಂಗಯ್ಯ ಹಿರೇಮಠ ಹಾಗೂ ಪತ್ನಿ ವಿಶ್ವೇಶ್ವರಿ ಹಿರೇಮಠ ಅವರು ಮಹಿಳೆಯರಿಗೆ ಪಂಚಮಿ ಆಚರಣೆ ಹಿನ್ನೆಲೆಯಲ್ಲಿ ವೇದಿಕೆ ಸಿದ್ಧಪಡಿಸಿ, ನಾಗಪ್ಪನ ಮೂರ್ತಿ ಕೂರಿಸಿ, ಹಾಲೆರೆದು ಹಾಡು ನೃತ್ಯ ಮಾಡಿ ಸಂಭ್ರಮಿಸಿದರು.
ಕೊರೊನಾ ಹಾವಳಿಯಿಂದ ಮರೆತು ಹೋಗಿದ್ದ ಹಬ್ಬದ ಸಂಭ್ರಮವನ್ನು ಜಾನಪದ ಸಂಶೋಧನಾ ಕೇಂದ್ರದಲ್ಲಿ ಮಹಿಳೆಯರು ಮತ್ತೆ ನೆನಪಿಸಿದರು. ಹಬ್ಬದ ವಿಶೇಷವಾಗಿ ಚಕ್ಕಲಿ, ರವೆ ಉಂಡೆ, ಶೆಂಗಾ ಉಂಡೆ, ಚುರುಮುರಿ ಉಂಡೆ ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಲಾಗಿತ್ತು.