ETV Bharat / state

ಹಸಿ ಸುಳ್ಳು ಬಿಟ್ಟರೆ ಬಿಜೆಪಿಯವರ ಕೊಡುಗೆ ಏನೂ ಇಲ್ಲ : ಡಿಕೆಶಿ ವಾಗ್ದಾಳಿ

author img

By

Published : Jan 2, 2023, 9:24 PM IST

ಹುಬ್ಬಳ್ಳಿಯಲ್ಲಿ ಮಹದಾಯಿ ಜಲ ಜನ ಸಮಾವೇಶ-ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್​- ಅಭಿನಂದನಾ ರ್‍ಯಾಲಿ ಮಾಡಲು ಬಿಜೆಪಿಯವರಿಗೆ ನಾಚಿಕೆ ಆಗಬೇಕು

mahadayi-jala-jana-samavesha-kpcc-president-dk-shivakumar-slams-bjp-govt
ಹಸಿ ಸುಳ್ಳು ಬಿಟ್ಟರೆ ಬಿಜೆಪಿಯವರ ಕೊಡುಗೆ ಏನೂ ಇಲ್ಲ : ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

ಹಸಿ ಸುಳ್ಳು ಬಿಟ್ಟರೆ ಬಿಜೆಪಿಯವರ ಕೊಡುಗೆ ಏನೂ ಇಲ್ಲ : ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

ಹುಬ್ಬಳ್ಳಿ : ಬಿಜೆಪಿಯವರೇ ಈ ರಾಜ್ಯದಲ್ಲಿ ನಿಮ್ಮ ಸಾಧನೆ ಏನು. ಹಸಿ ಸುಳ್ಳು ಬಿಟ್ಟರೆ ಬೇರೇನೂ ಇಲ್ಲ. ನಾಲ್ಕು ಇಂಜಿನ್ ಸರ್ಕಾರ ಏನು ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸೋಮವಾರ ನಡೆದ ಮಹದಾಯಿ ಜಲ ಜನ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಇದೇ ಭಾಗದವರು, ಮಾಜಿ ಸಿಎಂ ಇಲ್ಲಿ ಇದ್ದಾರೆ. ಕೇಂದ್ರ ಸಚಿವರೂ ಇದ್ದಾರೆ. ಆದರೂ ನಾಲ್ಕು ಇಂಜಿನ್ ಸರ್ಕಾರ ಏನು ಮಾಡುತ್ತಿದೆ. ಈ ಭಾಗದ ಜನರಿಗೆ ನೀರು ಕೊಡದಿದ್ದರೆ, ನಿಮಗೆ ಯಾಕೆ ಅಧಿಕಾರ ಬೇಕು ಎಂದು ಪ್ರಶ್ನಿಸಿದರು.

ಮಹದಾಯಿ ವಿಚಾರದಲ್ಲಿ ನಿನ್ನೆ ಆಚರಣೆ ಮಾಡಿದ್ರಲ್ಲ, ಇದು ನಿಮ್ಮ ಶೋಕಿ. ಈ ಹಿಂದೆ ಯೋಜನೆಗಾಗಿ ರೈತರು, ಕಲಾವಿದರು ಸೇರಿ ಸಾವಿರಾರು ಜನ ಹೋರಾಟ ಮಾಡಿದ್ದರು. ನಿಮ್ಮ ಸಂಭ್ರಮಾಚರಣೆಗೆ ಯಾಕೆ ಅವರು ಬರಲಿಲ್ಲ. ನಿಮ್ಮ ಹಸಿ ಸುಳ್ಳು ಅವರಿಗೆ ಅರ್ಥ ಆಗಿದೆ ಎಂದು ಟೀಕಿಸಿದರು.

ನಮಗೆ ಬಸವಣ್ಣ, ಶಿಶುನಾಳ ಶರೀಫರ ಕರ್ನಾಟಕ ಬೇಕು. ನುಡಿದಂತೆ ನಡೆಯುವರು ಬೇಕು. ನಾವು ಜನರಿಗೆ ಯಾವ ಮಾತು ಕೊಟ್ಟಿದ್ದೇವೆಯೋ ಅದನ್ನು ನಡೆಸಿ ಕೊಟ್ಟಿದ್ದೇವೆ. ಮುಂದೆ ನಿಮಗೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ನಿಮ್ಮ ಸರ್ಕಾರ ಇನ್ನು ಕೇವಲ 60 ದಿನ ಮಾತ್ರ ಎಂದು ಹೇಳಿದರು. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಮುಂದೆ ನಾವೇ ಬಜೆಟ್ ಮಾಡೋದು. ಯೋಜನೆಗೆ 1 ಸಾವಿರ ಕೋಟಿ ‌ರೂಪಾಯಿ ಮೀಸಲು ಇಡುತ್ತೇವೆ ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದರು.

ಅಭಿನಂದನಾ ರ್‍ಯಾಲಿ ಮಾಡೋಕೆ ಬಿಜೆಪಿಯವರಿಗೆ ನಾಚಿಕೆ ಆಗಬೇಕು: ಈ ಸಮಾವೇಶ ಚುನಾವಣೆಗಾಗಿ ಅಲ್ಲ. ಮಹದಾಯಿ ನದಿ ನೀರು ಮಲಪ್ರಭಾಕ್ಕೆ ತಿರುವು ಬೇಕಿದೆ. ಮಹದಾಯಿ ನೀರಿನ ಮೂಲಕ‌ ನಮ್ಮ ಸಮಸ್ಯೆ ಬಗೆಹರಿಸಬೇಕಿದೆ. ರೋಣ, ನವಲಗುಂದ, ರಾಮದುರ್ಗ, ನರಗುಂದ, ಸವದತ್ತಿ ಈ ಭಾಗದ ರೈತರು ಕಷ್ಟದಲ್ಲಿದ್ದಾರೆ. ಮಹದಾಯಿ ಕೂಡಿಸುವ ಮೂಲಕ ರೈತರ ಕಲ್ಯಾಣ ಆಗಬೇಕಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್​ ಹೇಳಿದರು.

ಜಲ ಜನ ಆಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ನಿನ್ನೆ ಕೇಂದ್ರ ಮಂತ್ರಿಗಳು ಬಿಜೆಪಿ ವಿಜಯೋತ್ಸವ ಆಚರಣೆ ಮಾಡಿದ್ದರು. ನೀರು ಹರಿದು ಬಂದೇ ಬಿಟ್ಟಿತು ಎನ್ನುವ ಹಾಗೆ ವಿಜಯೋತ್ಸವ ಆಚರಣೆ ಮಾಡಿದರು. ವಿಜಯೋತ್ಸವ ಆಚರಣೆ ಮಾಡುವುದಕ್ಕೆ ನಿಮಗೆ ನಾಚಿಕೆ ಆಗಲ್ವಾ ಎಂದು ಪ್ರಶ್ನಿಸಿದರು.

ಇದೇ ಮೈದಾನದಲ್ಲಿ ಯಡಿಯೂರಪ್ಪ ಪತ್ರ ತೋರಿಸಿದ್ದರು. ಗೋವಾ ಸಿಎಂ ಲೆಟರ್ ತೋರಿಸಿದ್ದರು. ಚುನಾಚಣೆ ಮುಗಿದ ತಕ್ಷಣ ಯೋಜನೆ ಜಾರಿ ಮಾಡುವುದಾಗಿ ಇದೇ ಮೈದಾನದಲ್ಲಿ ಯಡಿಯೂರಪ್ಪ ಹೇಳಿದ್ದರು. ಅಲ್ಲದೆ ಮೋದಿ ಅವರು ಗದಗ್ ನಲ್ಲಿ ನಮ್ಮ ಸರ್ಕಾರ ಬಂದರೆ ತಕ್ಷಣ ಗೋವಾ ಮುಖ್ಯಮಂತ್ರಿ, ಕರ್ನಾಟಕ ಮುಖ್ಯಮಂತ್ರಿ ಕರೆದು ಸಮಸ್ಯೆ ಬಗೆಗರಿಸುವುದಾದಿ ಹೇಳಿದ್ದರು. ಚುನಾಚಣೆ ಬಂದಾಗ ಇವರಿಗೆ ಮಹದಾಯಿ ನೆನಪಾಗಾತ್ತದೆ. 2020ಕ್ಕೆ ಮಹದಾಯಿ ಗೆಜೆಟ್ ನೋಟಿಫಿಕೇಶನ್ ಆಯ್ತು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಎರಡು ತಿಂಗಳ ಹಿಂದೆ ಹೋರಾಟ ಆರಂಭಿಸಲು ಹೇಳಿದ್ದರು ಎಂದರು.

ಇನ್ನು, ಡಿಪಿಆರ್ ಮಂಜೂರಾಗಿದೆ ಎಂದು ಹೇಳುತ್ತಾರೆ. ಡಿಪಿಆರ್ ಆದರೆ ಯೋಜನೆ ಆದ ಹಾಗೇನಾ..? ಡಿಪಿಆರ್ ದಾಖಲೆಯಲ್ಲಿ ದಿನಾಂಕ ಇಲ್ಲ ಎಂದು ನಾವು ಕೇಳಿದ್ದೆವು. ಗೌರವಾನ್ವಿತ ಸಚಿವರು ಬಿಡುಗಡೆ ಮಾಡಿದ ದಾಖಲೆಯಲ್ಲಿ ದಿನಾಂಕ ಇರಲಿಲ್ಲ ಅನ್ನೋದು ನಮ್ಮ ಪ್ರಶ್ನೆಯಾಗಿತ್ತು. ಜನ ನಿಮ್ಮ ಸುಳ್ಳಿನಿಂದ ಬೇಸತ್ತಿದ್ದಾರೆ ಎಂದು ಹೆಚ್​ ಕೆ ಪಾಟೀಲ್ ಹರಿಹಾಯ್ದರು.

ಜೋಶಿ ವಿರುದ್ಧ ಹರಿಪ್ರಸಾದ್​ ಕಿಡಿ : ಜಲ ಜನ ಆಂದೋಲನ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಬಿ‌.ಕೆ. ಹರಿಪ್ರಸಾದ್​ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರದಲ್ಲಿ ಇರುವುದು ನಕಲಿ ಸರ್ಕಾರ. ಪ್ರಧಾನಮಂತ್ರಿಗಳ ದಾಖಲೆಯೂ ನಕಲಿ. ಮಹದಾಯಿ ಡಿಪಿಆರ್ ಪತ್ರವೂ ನಕಲಿ ಎಂದು ಟೀಕಿಸಿದರು. ದೇಶದಲ್ಲಿ ಸುಳ್ಳಿನ ಪ್ರಧಾನಿ. ಅವರು ಹೇಳಿದಂತೆ ಕೇಳೋದು, ಅದನ್ನೇ ಪಾಲಿಸೋದು ಇಲ್ಲಿನ ಮಂತ್ರಿ ಎಂದು ಪ್ರಹ್ಲಾದ್ ಜೋಶಿ ಅವರನ್ನು ಹರಿಪ್ರಸಾದ್ ಟೀಕಿಸಿದರು.

ಇದನ್ನೂ ಓದಿ : ಹುಬ್ಬಳ್ಳಿ: ಭೈರಿದೇವರಕೊಪ್ಪದ ದರ್ಗಾಗೆ ಭೇಟಿ ನೀಡಿದ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.