ETV Bharat / state

ವರದಕ್ಷಿಣೆ ಕಿರುಕುಳ: ಆರು ಜನರಿಗೆ 2 ವರ್ಷ ಜೈಲು ಶಿಕ್ಷೆ

author img

By

Published : Feb 6, 2020, 12:27 PM IST

ವರದಕ್ಷಿಣೆ ಕಿರುಕುಳ ಪ್ರಕರಣ ಕುರಿತಂತೆ ಆರು ಜನರಿಗೆ, ಒಂದನೇ ಜೆಎಂಎಫ್‌ಸಿ ನ್ಯಾಯಾಲಯ 2 ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.

Dowry harassment case
ಒಂದನೇ ಜೆಎಂಎಫ್‌ಸಿ ನ್ಯಾಯಾಲಯ ಹುಬ್ಬಳ್ಳಿ

ಹುಬ್ಬಳ್ಳಿ: ವರದಕ್ಷಿಣೆ ಕಿರುಕುಳ ಪ್ರಕರಣದ ಕುರಿತಂತೆ ಆರು ಜನರಿಗೆ, ಒಂದನೇ ಜೆಎಂಎಫ್‌ಸಿ ನ್ಯಾಯಾಲಯ 2 ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ಬೆಳಗಾವಿಯ ತಿಲಕವಾಡಿ ಗಜಾನನ ಮಹಾರಾಜ ನಗರದ ನಿವಾಸಿಯಾದ, ಪತಿ ಕೈಲಾಸ ಅಚ್ಚಿತಲ್‌, ಅತ್ತೆ ಸಗಾಯಿಮ್ಮಾ, ಮಾವ ಬಾಲಕೃಷ್ಣ ಹಾಗೂ ಅವರ ಕುಟುಂಬದವರಾದ ಅಂಜನಾ, ನಾಗೇಶ್, ರೇಖಾ ಶಿಕ್ಷೆಗೆ ಒಳಗಾಗಿದ್ದಾರೆ.

2012ರ ಮೇ 23ರಂದು ದೇವಿಕಾ ಅವರು ಕೈಲಾಸ ಅವರನ್ನು ಮದುವೆಯಾಗಿದ್ದರು. ಈ ವೇಳೆ, ದೇವಿಕಾ ಅವರ ಮನೆಯವರು ಕೈಲಾಸ ಅವರಿಗೆ ವರದಕ್ಷಿಣೆಯಾಗಿ 8 ತೊಲ ಬಂಗಾರ ಹಾಗೂ 1 ಲಕ್ಷ ರೂಪಾಯಿ ನಗದು ನೀಡಿದ್ದರು. ಮದುವೆಯಾದ ಎರಡು ತಿಂಗಳ ನಂತರ, ಪತಿಯ ಮನೆಯವರು ವ್ಯಾಪಾರ ಮಾಡಲು ತವರಿನಿಂದ 2 ಲಕ್ಷ ರೂಪಾಯಿ ತರುವಂತೆ ಪೀಡಿಸಿ, ಹಿಂಸೆ ನೀಡಿದ್ದರು. 2014ರ ಮೇ 14ರಂದು ದೇವಿಕಾ ಅವರ ಮೇಲೆ ಹಲ್ಲೆ ನಡೆಸಿದ್ದ ಕುಟುಂಬದವರು, ಜೀವ ಬೆದರಿಕೆ ಕೂಡ ಹಾಕಿದ್ದರು. ಆಗ ದೇವಿಕಾ ಅವರು ತವರಿಗೆ ಬಂದು ವಾಸಿಸುತ್ತಿದ್ದರು.

ಒಂದನೇ ಜೆಎಂಎಫ್‌ಸಿ ನ್ಯಾಯಾಲಯ ಹುಬ್ಬಳ್ಳಿ

ದೇವಿಕಾ ಕುಟುಂಬದ ಹಿರಿಯರು ಬೆಳಗಾವಿಗೆ ಹೋಗಿ ಕೈಲಾಸ ಹಾಗೂ ಅವರ ಕುಟುಂಬದವರಿಗೆ ಬುದ್ದಿ ಹೇಳಿದ್ದರೂ ಮಾತು ಕೇಳಿರಲಿಲ್ಲ. ಅಲ್ಲದೇ ಕೈಲಾಸ ಮನೆಯವರು ಹುಬ್ಬಳ್ಳಿಗೆ ಬಂದು, ‘ವರದಕ್ಷಿಣೆ ತೆಗೆದುಕೊಂಡು ಬಾ ಅಂದರೆ ಹಿರಿಯರನ್ನು ಕರೆದುಕೊಂಡು ಬರುತ್ತೀಯಾ’ ಎಂದು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಮತ್ತೆ ಜೀವ ಬೆದರಿಕೆ ಹಾಕಿದ್ದರು. ಬಳಿಕ, ದೇವಿಕಾ ಹುಬ್ಬಳ್ಳಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದರು.

ಅಂದಿನ ಪೊಲೀಸ್‌ ಇನ್ಸ್‌ಪೆಕ್ಟರ್ ಸಿ.ಎಂ. ಶಿರಹಟ್ಟಿ ಅವರು ತನಿಖೆ ನಡೆಸಿ, ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಸುಶಾಂತ ಎಂ. ಚೌಗಲೆ ತೀರ್ಪು ಪ್ರಕಟಿಸಿದ್ದು, ದೇವಿಕಾ ಅವರ ಪರ ವಕೀಲ ಪ್ರಶಾಂತ ಚಟ್ನಿ ವಾದ ಮಂಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.