ETV Bharat / state

ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನೀಡದ ಅಸಮಾಧಾನ; 16 ಪಾಲಿಕೆ ಸದಸ್ಯರ ರಾಜೀನಾಮೆ

author img

By

Published : Apr 14, 2023, 9:27 PM IST

ಜಗದೀಶ್ ಶೆಟ್ಟರ್​ ಅವರಿಗೆ ಬಿಜೆಪಿ ಟಿಕೆಟ್​ ನೀಡುವಲ್ಲಿ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 16 ಸದಸ್ಯರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಜಗದೀಶ್ ಶೆಟ್ಟರ್‌
ಜಗದೀಶ್ ಶೆಟ್ಟರ್‌

ಹುಬ್ಬಳ್ಳಿ : ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನೀಡುವಲ್ಲಿ ವಿಳಂಬ ಮಾಡುತ್ತಿದ್ದು ಬಿಜೆಪಿಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 16 ಸದಸ್ಯರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಪತ್ರ ಬರೆದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್ ಸಲ್ಲಿಸಿದ್ದಾರೆ.

ಪಾಲಿಕೆ ಬಿಜೆಪಿ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ, ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ತಿಪ್ಪಣ್ಣ ಮಜ್ಜಿಗಿ, ಸೀಮಾ ಮುಗಲಿಶೆಟ್ಟರ್, ಸಂತೋಷ ಚೌಹಾಣ್, ಮಹದೇವಪ್ಪ ನರಗುಂದ, ಬೀರಪ್ಪ ಖಂಡೇಕರ, ಉಮಾ‌ ಮುಕುಂದ, ವೀರಣ್ಣ ಸವಡಿ, ರೂಪಾ ಶೆಟ್ಟಿ, ಕಿಶನ್ ಬೆಳಗಾವಿ, ವೀಣಾ ಬರದ್ವಾಡ, ಸರಸ್ವತಿ ಧೋಂಗಡಿ, ಚಂದ್ರಿಕಾ ವೆಂಕಟೇಶ ಮೇಸ್ತ್ರಿ, ಮೀನಾಕ್ಷಿ ವಂಟಮೂರಿ ರಾಜೀನಾಮೆ ಸಲ್ಲಿಸಿದ್ದಾರೆ.

ನನಗೆ ಟಿಕೆಟ್ ಪಕ್ಕಾ- ಜಗದೀಶ್ ಶೆಟ್ಟರ್: ನನಗೆ ಎರಡು ದಿನಗಳಲ್ಲಿ ಟಿಕೆಟ್ ಸಿಗಲಿದೆ. ನಾನು ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ. ನನ್ನ ಮಗನ ಹೆಸರು ಕೂಡಾ ಹೇಳಿಲ್ಲ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಜೊತೆ ಟಿಕೆಟ್​ ಬಗ್ಗೆ ಸುದೀರ್ಘ ಮೀಟಿಂಗ್ ಕೂಡಾ ಆಗಿದೆ. ಓಪನ್ ಆಗಿ‌ ಎಲ್ಲವನ್ನೂ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿನ್ನೆ (ಗುರುವಾರ) ತಿಳಿಸಿದ್ದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದ ಅವರು, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಅವರೂ ಕೂಡ ಶೆಟ್ಟರ್‌ಗೆ ಟಿಕೆಟ್ ‌ಕೊಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನಡ್ಡಾ ಜೊತೆ ಮಾತಾಡಿದ್ದಾರೆ. ಇದು ಕೇವಲ ಜಗದೀಶ್ ಶೆಟ್ಟರ್ ಪ್ರಶ್ನೆ ಅಲ್ಲ, ನನಗೆ ಟಿಕೆಟ್ ಸಿಗದೇ ಹೋದರೆ ಉತ್ತರ ಕರ್ನಾಟಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದನ್ನು ಗಮನಕ್ಕೆ ತಂದಿದ್ದಾರೆ ಎಂದು ಹೇಳಿದ್ದರು.

ನಿಮಗೆ ಟಿಕೆಟ್ ತಪ್ಪಿಸಲು ಸಿಎಂ ಬಸವರಾಜ ಬೊಮ್ಮಾಯಿ ಪ್ರಯತ್ನ ಮಾಡುತ್ತಿದ್ದಾರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರ ಬಗ್ಗೆಯೂ ಕಮೆಂಟ್‌ ಮಾಡಲ್ಲ ಎಂದು ತಿಳಿಸಿದ್ದರು. ನಂತರ ಬಿಜೆಪಿಯ ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರು ಬರದೇ ಇರುವುದಕ್ಕೆ ಪ್ರತಿಕ್ರಿಯಿಸಿ, ನಿನ್ನೆ ಸಂಜೆವರೆಗೂ ಮೀಟಿಂಗ್ ಇತ್ತು. ಆದ್ದರಿಂದ ಅದು ಸಹಜ, ಅದರಲ್ಲಿ ವಿಶೇಷ ಇಲ್ಲ. ನನಗೆ ಟಿಕೆಟ್ ಸಿಗುತ್ತದೆ ಕಾದು ನೋಡಿ ಎಂದು ಹೇಳಿದ್ದರು.

ಇದನ್ನೂ ಓದಿ: ನನಗೆ ಟಿಕೆಟ್ ಪಕ್ಕಾ, ಎರಡು ದಿನ ಕಾದು ನೋಡಿ: ಜಗದೀಶ್ ಶೆಟ್ಟರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.