ETV Bharat / state

ಹುಬ್ಬಳ್ಳಿ- ಧಾರವಾಡ ಪಾಲಿಕೆ ಮೇಯರ್ ಚುನಾವಣೆ: 'ಹಣದ ಆಮಿಷವೊಡ್ಡಿ ಅಧಿಕಾರಕ್ಕೇರಲು ಕಾಂಗ್ರೆಸ್ ಕುತಂತ್ರ'- ಬಿಜೆಪಿ

author img

By

Published : Jun 15, 2023, 5:35 PM IST

Updated : Jun 15, 2023, 11:02 PM IST

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಕಾವೇರುತ್ತಿದೆ. ಬಿಜೆಪಿ, ಕಾಂಗ್ರೆಸ್‌ ಪಕ್ಷಗಳ ಮುಖಂಡರ ಆರೋಪ-ಪ್ರತ್ಯಾರೋಪ ಮುಂದುವರೆದಿದೆ.

Sanjay Kapatakar, Mayor Eresha Anchatageri spoke at the press conference.
ಸಂಜಯ ಕಪಟಕರ, ಮೇಯರ್ ಈರೇಶ ಅಂಚಟಗೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹು-ಧಾ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹುಬ್ಬಳ್ಳಿ: ಬಿಜೆಪಿಗೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸ್ಪಷ್ಟ ಬಹುಮತವಿದೆ. ಆದ್ರೆ ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ಸದಸ್ಯರಿಗ ಹಣದ ಆಮಿಷವೊಡ್ಡಿ ತಮ್ಮತ್ತ ಸೆಳೆಯುವ ಕುತಂತ್ರ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಹಾಗೂ ಮೇಯರ್ ಈರೇಶ ಅಂಚಟಗೇರಿ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನವರು ಬಿಜೆಪಿ ಸದಸ್ಯರಿಗೆ ಆಮಿಷವೊಡ್ಡಿ, ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಉಪ ಮೇಯರ್ ಉಮಾ ಮುಕುಂದ, ಬಿಜೆಪಿ ಸದಸ್ಯ ಸುರೇಶ ಬೇಂದ್ರೆ, ಪಕ್ಷೇತರ ಸದಸ್ಯೆ ಚಂದ್ರಿಕಾ ಮೇಸ್ತ್ರಿ ಸೇರಿದಂತೆ ಇತರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರಿಗೆ 50 ಲಕ್ಷ ರೂ. ಆಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಪಾಲಿಕೆ ಸದಸ್ಯರು ಯಾವುದೇ ಆಸೆ, ಆಮಿಷಗಳಿಗೆ ಬಗ್ಗುವುದಿಲ್ಲ. ಶಾಸಕರು, ಪರಿಷತ್ ಸದಸ್ಯರು ಸೇರಿದಂತೆ 48 ಜನ ಸದಸ್ಯರು ಎಲ್ಲರೂ ಒಗ್ಗಟ್ಟಾಗಿದ್ದೇವೆ. ಕೆಲವರನ್ನು ಕಾಂಗ್ರೆಸ್​ನತ್ತ ಸೆಳೆಯಲು ಆಮಿಷವೊಡ್ಡುತ್ತಿದ್ದಾರೆ. ನಮಗೂ ರಾಜಕೀಯ ತಂತ್ರಗಾರಿಕೆ ಗೊತ್ತಿದೆ. ಕಾಂಗ್ರೆಸ್ಸಿನ ಮೂವರು ಸದಸ್ಯರು ನಮ್ಮೊಂದಿಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಟಾಂಗ್ ಕೊಟ್ಟರು.

ಇದನ್ನೂಓದಿ: ಪಂಚಮಸಾಲಿ ಮೀಸಲಾತಿ ವಿಚಾರ: ಆದಷ್ಟು ಬೇಗ ಸಿಎಂ ಸಿದ್ದರಾಮಯ್ಯ ಆಡಳಿತಾತ್ಮಕ ಸಭೆ ಕರೆದು ತೀರ್ಮಾನಿಸಲಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹ

ಸ್ಮಾರ್ಟ್​ ಸಿಟಿ ಯೋಜನೆಯಲ್ಲಿ ಅವ್ಯವಹಾರ, ತನಿಖೆಗೆ ಆಗ್ರಹ: ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆ ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಇದುವರೆಗೂ ಒಂದು ಯೋಜನೆ ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿಲ್ಲ. ತಾಂತ್ರಿಕ ಸಮಿತಿ ರಚನೆ ಮಾಡಿ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ರೂ ಮಾಹಿತಿ ನೀಡಿಲ್ಲ. ಯೋಜನೆ ಅವ್ಯವಹಾರದಲ್ಲಿನ ಲೋಕಾಯುಕ್ತ ತನಿಖೆಗೆ ಆಗ್ರಹಿಸಿ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಐದು ವರ್ಷಗಳಲ್ಲಿ ಆಗಿರುವ ಕಾಮಗಾರಿ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ಪತ್ರದಲ್ಲಿ ಕೋರಿದ್ದೇನೆ ಎಂದು ಹೇಳಿದರು.

ಪೌರಕಾರ್ಮಿಕರಿಗೆ ಕಳಪೆ ಆಹಾರ ವಿತರಣೆ: ಇದಲ್ಲದೆ ‌ಪೌರಕಾರ್ಮಿಕರಿಗೆ ಕಳಪೆ ಆಹಾರ ವಿತರಣೆ ಮಾಡಲಾಗುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಕಳಪೆ ಆಹಾರ ವಿತರಣೆ ಮಾಡುವ ಕಂಪೆನಿಗೆ ನೋಟಿಸ್ ನೀಡಲಾಗಿದೆ. ಟೆಂಡರ್ ಪಡೆದು ಬೇರೆಯವರಿಂದ ಆಹಾರ ತಯಾರಿಸಿ ವಿತರಣೆ ಮಾಡಿದ್ರೆ, ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಯಾರು ಟೆಂಡರ್ ಪಡೆದಿರುತ್ತಾರೋ ಆ ಕಂಪೆನಿ‌ ಅಥವಾ ಎನ್‌ಜಿಒದವರೇ ನೋಡಿಕೊಳ್ಳಬೇಕು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನೂಓದಿ: Gruha Lakshmi Scheme: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ನಾಲ್ಕೈದು ದಿನ ವಿಳಂಬ- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Last Updated : Jun 15, 2023, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.