ETV Bharat / state

ಹೆಚ್​ ಡಿ ಕುಮಾರಸ್ವಾಮಿ ಏನೇ ಟೀಕೆ ಮಾಡಿದರೂ ಅದಕ್ಕೆ ಬೇಸ್ ಇಲ್ಲ, ಕೇವಲ ಹಿಟ್ ಅಂಡ್ ರನ್ ಕೇಸ್​: ಜಗದೀಶ್ ಶೆಟ್ಟರ್

author img

By ETV Bharat Karnataka Team

Published : Oct 25, 2023, 4:29 PM IST

ಹೆಚ್​.ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್​ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವ ವಿಚಾರದ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್
ಮಾಜಿ ಸಿಎಂ ಜಗದೀಶ್ ಶೆಟ್ಟರ್

"ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಾರೆ"

ಹುಬ್ಬಳ್ಳಿ : ಏನೇ ಟೀಕೆ ಮಾಡಿದರೂ ಅದಕ್ಕೆ ಬೇಸ್ ಇರಬೇಕು. ಆದರೆ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದು ವಿಧಾನ ಪರಿಷತ್​ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದರು.

ಬಿಜೆಪಿಯೊಂದಿಗೆ ಕೈ ಜೋಡಿಸಿದ ಮೇಲೆ ಹೆಚ್ ​ಡಿ ಕುಮಾರಸ್ವಾಮಿ ಕಾಂಗ್ರೆಸ್​ ವಿರುದ್ಧ ಟೀಕೆ ಮಾಡುತ್ತಿದ್ದು, ಸಚಿವ ಜಾರ್ಜ್ ಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಏನು ಮಾಡುತ್ತಿದ್ದರು? ಎಂದೆಲ್ಲ ಪ್ರಶ್ನೆ ಕೇಳುತ್ತಿರುವ ಬಗ್ಗೆ ಜಗದೀಶ್​ ಶೆಟ್ಟರ್​ ಪ್ರತಿಕ್ರಿಯಿಸಿ, ಕೆಲ ತಿಂಗಳ ಹಿಂದೆ ಪೆನ್​ಡ್ರೈವ್ ವಿಚಾರದಲ್ಲಿಯೂ‌ ಇದೇ ಆಯಿತು. ಕುಮಾರಸ್ವಾಮಿ ಅವರು ಕೇವಲ ಟೀಕೆ ಮಾಡುವ ಸಲುವಾಗಿ ಟ್ವೀಟ್ ಮಾಡಿದರೆ ಅದರಿಂದ ಏನೂ ಉಪಯೋಗ ಆಗಲ್ಲ. ಮಾಧ್ಯಮದಲ್ಲಿ ಚರ್ಚೆ ಆಗುತ್ತೆ ಹೊರತು ವಾಸ್ತವವಾಗಿ ಏನೂ ಗೊತ್ತಾಗುವುದಿಲ್ಲ. ಕೇವಲ ಪ್ರಶ್ನೆ ಆಗಿಯೇ ಉಳಿಯುತ್ತದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬರೀ‌ ಹೆಸರು ಕೇಳಿ ಬರೋದೆ ಆಯ್ತು. ಯಾರು ಅಧ್ಯಕ್ಷರು ಎಂದು ಬಹಿರಂಗವಾಗಿ ಹೇಳಲಿ. ದೆಹಲಿ ವರಿಷ್ಠರು ಒಂದು ಹೆಸರು ಬಿಟ್ಟು ಪ್ಲಸ್ ಮೈನಸ್​ ನೋಡುತ್ತಾರೆ. ಅದು ಫೇಲ್ ಆಯಿತು ಎಂದರೆ ಮತ್ತೆ ಬೇರೆ ಹೆಸರು ಬಿಡುತ್ತಾರೆ. ಇದನ್ನೇ ಇಷ್ಟು ದಿನದವರೆಗೆ ಪ್ರಯೋಗ ಮಾಡುತ್ತಿದ್ದಾರೆ. ಈ ಬಗ್ಗೆ ಶೋಭಾ ಕರಂದ್ಲಾಜೆ ಊಹಾಪೋಹ ಅಂತ ಹೇಳಿದ್ದಾರೆ. ಇದನ್ನು ಹೇಗೆ ಅಧಿಕೃತ ಅಂತ ಹೇಳಿತ್ತಿರ. ಇದಕ್ಕೆ ಯಾವುದೇ ಅರ್ಥ ಇಲ್ಲ. ಒಂದು ರಾಷ್ಟ್ರೀಯ ಪಕ್ಷದ ಫೇಲ್ಯೂರ್ ಆಗಬೇಕು ಅನ್ನೋ ಉದಾಹರಣೆಗೆ ಇದ್ದರೆ, ಇದಕ್ಕೆ ರಾಜ್ಯ ಬಿಜೆಪಿಯೇ ಉದಾಹರಣೆ ಎಂದು ಶೆಟ್ಟರ್​ ಟೀಕಿಸಿದರು.

ಅಂದಿನಿಂದಲೂ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ : ಬಿಜೆಪಿಗೆ ರಾಜ್ಯಾಧ್ಯಕ್ಷರನ್ನು, ವಿಪಕ್ಷ ನಾಯಕರನ್ನು ಆಯ್ಕೆ ಮಾಡದ ಶೋಚನೀಯ ಪರಿಸ್ಥಿತಿ ಬಂದಿದೆ. ಜನರ ಆಶೋತ್ತರಗಳಿಗೆ ತಕ್ಕಂತೆ ನಾನು ಪ್ರವಾಸ ಮಾಡುತ್ತಿದ್ದೇನೆ. ನಾನು ಕಾಂಗ್ರೆಸ್ ಬಂದ ಮೇಲೆ ಮಾತ್ರವಲ್ಲ, ಮೊದಲಿಂದಲೂ ಪ್ರವಾಸ ಮಾಡುತ್ತಿದ್ದೇನೆ. ಮೊದಲಿಂದಲೂ ರಾಜ್ಯ ಪ್ರವಾಸ ಮಾಡುವ ನಾಯಕತ್ವ ಗುಣ ಬೆಳೆದುಬಂದಿದೆ. ಹಿಂದೆಯೂ ರಾಜ್ಯ ಪ್ರವಾಸ ಮಾಡುವುದು ನಡೆದುಕೊಂಡು ಬಂದಿದೆ. ಅದನ್ನು ಈಗ ಮುಂದುವರಿಸಿದ್ದೇನೆ ಅಷ್ಟೇ ಎಂದು ಶೆಟ್ಟರ್​ ಸ್ಪಷ್ಟನೆ ನೀಡಿದರು.

ಕಾಂಗ್ರೆಸ್ ಸರ್ಕಾರಕ್ಕೆ ಏನು ಆಗೋದಿಲ್ಲ. ಆದರೆ ಸಂಕ್ರಾಂತಿ ನಂತರ ಅಲ್ಲೋಲ ಕಲ್ಲೋಲ ಆಗುತ್ತೆ ಅಂತ ಬಿಜೆಪಿಗರು ಅಪಪ್ರಚಾರ ಮಾಡುತ್ತಿದ್ದಾರೆ. ಪಕ್ಷ ಬಿಟ್ಟು ಹೋಗುತ್ತಿರುವ ನಾಯಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಗಟ್ಟಿಮುಟ್ಟಾಗಿ ಐದು ವರ್ಷ ಇರುತ್ತೆ. 104 ಇದ್ದಾಗಾಲೇ ಏನು ಮಾಡಲು ಆಗಿಲ್ಲ. ಈಗ ಏನು ಮಾಡಲು ಸಾಧ್ಯ ಎಂದು ಬಿಜೆಪಿಗೆ ಶೆಟ್ಟರ್​ ತಿರುಗೇಟು ನೀಡಿದರು.

ಡಿಕೆಶಿ ​ಪರ ಬ್ಯಾಟಿಂಗ್ : ಕನಕಪುರ ಬೆಂಗಳೂರಿಗೆ ಸೇರಿಸೋ ವಿಚಾರಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್​ ಪರ ಬ್ಯಾಟಿಂಗ್ ಮಾಡಿದ ಶೆಟ್ಟರ್​, ಕನಕಪುರ ಬೆಂಗಳೂರು ಗ್ರಾಮೀಣದ ಒಂದು ಭಾಗ. ಬೆಂಗಳೂರು ಸಾಕಷ್ಟು ಬೆಳವಣಿಗೆ ಆಗಿದೆ. ನೂರಾರು ಹಳ್ಳಿಗಳು ಬೆಂಗಳೂರಿಗೆ ಸೇರುತ್ತಿವೆ. ಇದಕ್ಕೆ ಕನಕಪುರ ಹೊರತಾಗಿಲ್ಲ. ಸಹಜವಾಗಿ ಕನಕಪುರ ಬೆಂಗಳೂರು ನಗರಕ್ಕೆ ಸೇರಿದೆ ಎನ್ನುವುದರಲ್ಲಿ ಆಶ್ಚರ್ಯಪಡುವಂತಹ ವಿಚಾರ ಏನಿದೆ. ಇದಕ್ಕೆ ವಿಶೇಷ ಕಾಮೆಂಟ್ ಮಾಡುವ ಅವಶ್ಯಕತೆ ಇಲ್ಲ ಎಂದರು.

ಡಿ.ಕೆ ಶಿವಕುಮಾರ್ ಕನಕಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಜಿಲ್ಲೆ ಬಗ್ಗೆ ಹೇಳಿಲ್ಲ. ಈ ರೀತಿ ಹೇಳಿಕೆ ಮುಖಾಂತರ ಅಭಿವೃದ್ಧಿಗೆ ಒತ್ತು ನೀಡುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಎಲ್ಲವನ್ನೂ ರಾಜಕೀಯ ಮಾಡುವುದು ಸ್ಟಾರ್ಟ್ ಆಗಿದೆ. ಇದನ್ನು ಬಿಟ್ಟು ಇಡೀ ವ್ಯವಸ್ಥೆಗೆ ಅನುಕೂಲ ಆಗುವುದನ್ನು ನೋಡಬೇಕು‌. ಯಾರ ಯಾರ ಆಸ್ತಿ ಅಲ್ಲಿದೆ ಅಂತ ಯಾರು ಮಾಹಿತಿ ನೀಡಿದ್ದಾರಾ? ಸುಮ್ಮನೆ ರಾಜಕೀಯ ಟೀಕೆ ಮಾಡಲು ಆಸ್ತಿ ವಿಚಾರ ಬರುತ್ತೆ ಎಂದು ಶೆಟ್ಟರ್​ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ : ಏಳು ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆ ಛಿದ್ರ ಮಾಡಲು ಸಾಧ್ಯವಿಲ್ಲ, ಅದೇನು ಕಲ್ಲುಬಂಡೆಯೇ?: ಡಿಕೆಶಿಗೆ ಹೆಚ್​ಡಿಕೆ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.