ETV Bharat / state

ಬಿ‌ ವೈ ವಿಜಯೇಂದ್ರ ಭೇಟಿಯಾದ ಮಾಜಿ ಶಾಸಕ ಚಿಕ್ಕನಗೌಡರ: ಗರಿಗೆದರಿದ ರಾಜಕೀಯ ಚಟುವಟಿಕೆ

author img

By ETV Bharat Karnataka Team

Published : Nov 25, 2023, 2:36 PM IST

Former MLA Chikkanagowda met BY Vijayendra: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಕುಂದಗೋಳ ಮಾಜಿ ಶಾಸಕ ಚಿಕ್ಕನಗೌಡರ ಭೇಟಿಯಾಗಿ ಅಭಿನಂದಿಸಿದ್ದಾರೆ.

former MLA Chikana Gowda
ಮಾಜಿ ಶಾಸಕ ಚಿಕ್ಕನಗೌಡರ

ಹುಬ್ಬಳ್ಳಿ : ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿ.ವೈ. ವಿಜಯೇಂದ್ರ ಅಧಿಕಾರ ಸ್ವೀಕರಿಸುತ್ತಿದಂತೆ ಬಿಜೆಪಿ ಪಾಳೆಯದಲ್ಲಿ ಹೊಸ ಹುರುಪು ಮೂಡಿ ಬಂದಿದೆ. ಚುನಾವಣಾ ವೇಳೆ ಬಿಜೆಪಿಯಿಂದ ಕಾಂಗ್ರೆಸ್​ನತ್ತ ಕೆಲ ನಾಯಕರು ಮುಖ ಮಾಡಿದ್ದರು. ಅಂತಹವರಲ್ಲಿ ಕುಂದಗೋಳ ಮಾಜಿ ಶಾಸಕ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಸಂಬಂಧಿ ಎಸ್.ಐ. ಚಿಕ್ಕನಗೌಡ ಅವರು ಕೂಡ ಒಬ್ಬರು.

Former MLA Chikkanagowda met CM and DCM
ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯನವರನ್ನು ಚಿಕ್ಕನಗೌಡರು ಭೇಟಿಯಾದ ಸಂದರ್ಭ

ಅವರು 2023 ರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದರು. ಅದಲ್ಲದೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಚಿಕ್ಕನಗೌಡರ ಕಳೆದ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು.

ಇದೀಗ ಚಿಕ್ಕನಗೌಡರ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿಯಾಗಿದ್ದು, ಅಧ್ಯಕ್ಷರಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇವರ ಈ ಭೇಟಿ ಈಗ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ‌ ಬಿಜೆಪಿ ‌ನೂತನ ಸಾರಥಿ ಬಿ‌.ವೈ. ವಿಜಯೇಂದ್ರ ಅಧ್ಯಕ್ಷರಾಗಿರುವುದರಿಂದ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಚಿಕ್ಕನಗೌಡರ ಬಿಜೆಪಿಗೆ ಮರಳಿದರಾ ಎಂಬ ಊಹಾಪೋಹಕ್ಕೆ ಇಂಬು ನೀಡಿದೆ.

ಕುಂದಗೋಳ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಎಸ್‌.ಐ. ಚಿಕ್ಕನಗೌಡರ ಕೆಲ ದಿನಗಳ‌ ಹಿಂದೆ ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್​​ನ ವಿಧಾನ ಪರಿಷತ್‌ ​ ಸದಸ್ಯ ಜಗದೀಶ್​ ಶೆಟ್ಟರ್​ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದರು. ಇದೀಗ ಏಕಾಏಕಿ ವಿಜಯೇಂದ್ರ ಜೊತೆಗೆ ಕಾಣಿಸಿಕೊಂಡ ಚಿಕ್ಕನಗೌಡರ ಮತ್ತು ಹಿಂಬಾಲಕರು ಮರಳಿ ಮತ್ತೆ ಕಮಲ ಹಿಡಿತಾರಾ ಎಂಬ ಶಂಕೆ ಮೂಡಿದೆ.

ಈ ಹಿಂದೆ‌ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸುವುದು ನನ್ನ ಗುರಿ ಎಂದು ಬಹಿರಂಗವಾಗಿ ಚಿಕ್ಕನಗೌಡರ ಹೇಳಿಕೆ ನೀಡಿದ್ದರು. ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡುತ್ತಿದೆ, ಜಾತಿ ಲೆಕ್ಕಾಚಾರದ ಮೇಲೆ ಜೋಶಿ ಅವರನ್ನು ಸೋಲಿಸುವುದು ನಮ್ಮ ಗುರಿ. ನನ್ನ ಟಿಕೆಟ್ ತಪ್ಪಲು ಜೋಶಿ ಕಾರಣ ಎಂದು ಹೇಳಿಕೆ ನೀಡಿದ್ದರು. ಇದರಿಂದಾಗಿ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮರಳಿ ಪಕ್ಷಕ್ಕೆ ಕರೆತರುವ ಪ್ರಯತ್ನಕ್ಕೆ ಕೈ ಹಾಕಿರುವ ವಿಜಯೇಂದ್ರ ಅವರು ಚಿಕ್ಕನಗೌಡರ ಅವರನ್ನು ಕರೆಯಿಸಿಕೊಂಡು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ : ಡಿಕೆಶಿ ವಿರುದ್ಧದ ಸಿಬಿಐ ತನಿಖೆಯ ಅನುಮತಿ ವಾಪಸ್ ಪಡೆದಿರುವುದು ಅಕ್ಷಮ್ಯ ಅಪರಾಧ: ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.