ETV Bharat / state

ಸಿಎಂ ನಾನು ಆಗೋದಲ್ಲ, ಅದು ಹೈಕಮಾಂಡ್ ಪ್ರಸಾದ್: ಡಿಕೆಶಿ ಸ್ಪಷ್ಟ ನುಡಿ

author img

By

Published : Jan 2, 2023, 2:22 PM IST

Updated : Jan 2, 2023, 2:49 PM IST

ಮೀಸಲಾತಿ ಮತ್ತು ಕಳಸಾ ಬಂಡೂರಿ ಯೋಜನೆ ಕುರಿತು ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸ್ಥಾನ ಹೈಕಮಾಂಡ್​ ವರ ಪ್ರಸಾದ್​ ಎನ್ನುವ ಮೂಲಕ ಎಲ್ಲವನ್ನು ಹೈಕಮಾಂಡ್​​​​​ ನಾಯಕರಿಗೆ ಬಿಟ್ಟಿದ್ದಾರೆ.

ಡಿಕೆಶಿ
ಡಿಕೆಶಿ

ಹುಬ್ಬಳ್ಳಿಯಲ್ಲಿ ಡಿಕೆಶಿ ಪ್ರತಿಕ್ರಿಯೆ

ಹುಬ್ಬಳ್ಳಿ: ಸಿಎಂ ನಾನು ಆಗೋದಲ್ಲ, ಯಾರು ಆಗಬೇಕು ಅನ್ನೋದು ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್, ಸೋನಿಯಾ ಗಾಂಧಿ ತೀರ್ಮಾನ ಮಾಡ್ತಾರೆ. ಹೈಕಮಾಂಡ್ ಏನ್ ಹೇಳುತ್ತೋ ಅದೇ ನನ್ನ ಪ್ರಸಾದ ಎಂದು ಕೆಪಿಸಿಸಿ ಅಧ್ಯಕ್ಷ ಡಿ‌ ಕೆ ಶಿವಕುಮಾರ ಹೇಳಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಬಿಜೆಪಿಯವರದ್ದು ಸುಳ್ಳಿನ ಯುನಿವರ್ಸಿಟಿ. ಮೂರು ವರ್ಷದಿಂದ ಒಂದೇ ಒಂದು ಯೋಜನೆ ಜಾರಿಗೊಳಿಸಲು ಆಗಿಲ್ಲ. ಮೂರು ರಾಜ್ಯಗಳಲ್ಲಿ ಅವರದ್ದೇ ಸರ್ಕಾರಗಳಿವೆ. ಆದರೂ ಯೋಜನೆ ಜಾರಿ ಮಾಡಲು ಆಗಿಲ್ಲ. ಈಗ ನಾವು, ರೈತರು ಸೇರಿ ಹೋರಾಟ ಮಾಡಿ ಒಂದು ಹಂತಕ್ಕೆ ತಂದಿದ್ದೇವೆ. ಕಳಸಾ ಬಂಡೂರಿ ಯೋಜನೆ ರದ್ದುಗೊಳಿಸದಿದ್ದರೆ ಗೋವಾ ಸಚಿವರೊಬ್ಬರು ರಾಜೀನಾಮೆ ಕೊಡ್ತಾರಂತೆ. ಕೊಡಲಿ ಬಿಡಿ. ರಾಜ್ಯದಲ್ಲಿ 26 ಸಂಸದರು ಬಿಜೆಪಿಯವರಿದ್ದಾರೆ‌.

ಸುಮಲತಾ ಕೂಡ ಬಿಜೆಪಿ ಅಸೋಸಿಯೇಟ್ ಮೆಂಬರ್. ಮಹದಾಯಿಗಾಗಿ ಇವರು ಒಮ್ಮೆಯೂ ಪ್ರಧಾನಿ ಬಳಿ‌ ಮಾತನಾಡಿಲ್ಲ. ನೀರು ಹರಿಸುವ ಮುನ್ನ ಕಾಮಗಾರಿಯಾದ್ರೂ ಪೂರ್ಣಗೊಳಿಸಬೇಕಿತ್ತು. ಪ್ರಹ್ಲಾದ್ ಜೋಶಿ ಎಷ್ಟೊಂದು ಅಪ್ಡೇಟ್ ಇದ್ದಾರೆ ಅನ್ನೋದು, ಪತ್ರ ಓದಲಿ ಗೊತ್ತಾಗುತ್ತೆ. ಕೇಂದ್ರ ಸರ್ಕಾರ ಅನುಮತಿ ನೀಡಿದ ಪತ್ರದಲ್ಲಿ ಕಂಡಿಷನ್ ಹಾಕಿದ್ದಾರೆ. ನಮಗೆ ಅಧಿಕಾರ ಸಿಕ್ಕರೆ ಆರು ತಿಂಗಳಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೇವೆ ಎಂದು ಇದೇ ವೇಳೆ ಡಿ ಕೆ ಶಿವಕುಮಾರ್​ ಜನರಿಗೆ ಭರವಸೆ ನೀಡಿದರು.

ಕಾಂಗ್ರೆಸ್​ನಲ್ಲಿ ನೋ ಫಿಕ್ಸಿಂಗ್: ನನ್ನ ಅಧ್ಯಕ್ಷತೆಯಲ್ಲಿ ಒಳ ಒಪ್ಪಂದಕ್ಕೆ ಅವಕಾಶ ನೀಡಲ್ಲ. ಕಾಂಗ್ರೆಸ್ ಮೊದಲ ಪಟ್ಟಿ ಬಹುತೇಕ ಸಿದ್ಧಗೊಂಡಿದೆ. ಟಿಕೆಟ್​​ಗಾಗಿ ಪಕ್ಷದಲ್ಲಿ ಯಾವುದೇ ಕಿತ್ತಾಟ ನಡೆದಿಲ್ಲ. ಜಗದೀಶ್ ಶೆಟ್ಟರ್ ಸೇರಿ ಬಿಜೆಪಿ ನಾಯಕರ ಕ್ಷೇತ್ರಗಳಲ್ಲಿಯೂ ಪೈಪೋಟಿ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ನೋ ಮ್ಯಾಚ್ ಫಿಕ್ಸಿಂಗ್. ಬೇರೆ ಪಕ್ಷದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯಬಹುದು. ಕಾಂಗ್ರೆಸ್ ಪಕ್ಷದಲ್ಲಿ ಮ್ಯಾಚ್ ಫಿಕ್ಸಿಂಗ್​ಗೆ ಅವಕಾಶ ನೀಡಲ್ಲ. ಕಾಂಗ್ರೆಸ್ ನಾಯಕರನ್ನು ಸೋಲಿಸಲು ಕಾಂಗ್ರೆಸ್ ನಾಯಕರಂದಲೇ ಫಿಕ್ಸಿಂಗ್ ವಿಚಾರ ಮಾಧ್ಯಮಗಳ ಸೃಷ್ಟಿ. ಹಾಲಿ ಶಾಸಕರಲ್ಲಿ ಶೇ.95 ರಷ್ಟು ಜನರಿಗೆ ಟಿಕೆಟ್ ಸಿಗೋದು ಖಚಿತ ಎಂದು ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದರು.

ಆಪರೇಷನ್ ಕಮಲಕ್ಕೆ ಗುರಿಯಾಗಿ ಬಿಜೆಪಿಗೆ ಹೋದವರ ಮರು ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು. ಅವರು ಯಾರೂ ಈವರೆಗೆ ಅರ್ಜಿ ಸಲ್ಲಿಸಿಲ್ಲ. ಅರ್ಜಿ ಕೊಟ್ಟ ಮೇಲೆ ಹೇಳ್ತೇನೆ. ಕಾಂಗ್ರೆಸ್​​ನಲ್ಲಿ ಯಾವುದೇ ಬಣಗಳಿಲ್ಲ. ನನ್ನನ್ನು ಮತ್ತು ಸಿದ್ದರಾಮಯ್ಯ ಅವರನ್ನು ಚುನಾವಣೆಗೆ ಸ್ಪರ್ಧಿಸದೇ ರೆಸ್ಟ್ ಮಾಡುವಂತೆ ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಅವರ ಸಲಹೆಯನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದರು.

ಪಂಚಮಸಾಲಿ ಒಕ್ಕಲಿಗ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಸರ್ಕಾರ ಮೂಗಿಗಲ್ಲ, ತಲೆಗೆ ತುಪ್ಪ ಸವರಿದೆ. ಮೂಗಿಗೆ ಸವರಿದ್ದರೆ ಕನಿಷ್ಟ ವಾಸನೆಯನ್ನಾದರೂ ಪಡೆದುಕೊಳ್ಳಬಹುದಿತ್ತು. ಬೊಮ್ಮಾಯಿ ಸರ್ಕಾರ ತಲೆಗೆ ಸವರಿದೆ. ಅದನ್ನು ಹೇಗೆ ತಿನ್ನೋದು..? ಜಯಮೃತ್ಯುಂಜಯ ಸ್ವಾಮೀಜಿ ಸರಿಯಾಗಿ ಹೇಳಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ. ಆರ್ಥಿಕವಾಗಿ ಹಿಂದೂಳಿದವರಿಗೆ ಕೇಂದ್ರ ನೀಡಿದ ಮೀಸಲಾತಿಯಲ್ಲಿ ಸೇರಿಸುವುದಾಗಿ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ ಇದನ್ನು ಹೇಗೆ ಒಪ್ಪುತ್ತೆ. ಸಂಪುಟದ ತೀರ್ಮಾನ ಆದೇಶದ ಬಗ್ಗೆ ಯಾರಾದರೂ ಕೋರ್ಟಿಗೆ ಹೋದ್ರೆ ಮುಗಿತು. ಮೀಸಲಾತಿ ಜಾರಿ ಆಗುವುದಿಲ್ಲ. ಎಸ್​ಸಿ - ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ರು, ಮುಂದೆ ಜಾರಿ ಆಗಿಲ್ಲ. ಕೇಂದ್ರಕ್ಕೆ‌ ಕಳುಹಿಸಿ ಸಂಸತ್ತಿನಲ್ಲಿ ಮಾಡಿಸಬೇಕಿತ್ತು. ಆದರೆ ಕೇಂದ್ರಕ್ಕೆ ಕಳುಹಿಸಲೇ ಇಲ್ಲ. ಇನ್ನು 90 ದಿನದಲ್ಲಿ ಸರ್ಕಾರವೇ ಇರಲ್ಲ. ಇವರ ಕೈಯಲ್ಲಿ ಅಧಿಕಾರನೇ ಇರುವುದಿಲ್ಲ, ಇನ್ನೂ ಮೀಸಲಾತಿ ಹೇಗೆ ಜಾರಿ‌ ಮಾಡ್ತಾರೆ. ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರನು ಅಲ್ಲ. ಪಂಚಮಸಾಲಿ ನಾಯಕರು ಅನ್ನೋರು ಎಲ್ಲಿ ಹೋದ್ರು..? ಸರ್ಕಾರದ ಬಗ್ಗೆ ಯಾಕೆ ಮೌನವಾಗಿದ್ದಾರೆ..? ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ್ ಯಾಕೆ ಮಾತನಾಡುತ್ತಿಲ್ಲ ಎಂದು ಡಿಕೆ ಶಿವಕುಮಾರ್ ಇದೇ ವೇಳೆ ಪ್ರಶ್ನಿಸಿದರು.

(ಇದನ್ನೂ ಓದಿ: ಬಿಜೆಪಿ ಜನರಿಗೆ ಚಾಕೊಲೇಟ್​​ ಕೊಡುವ ಕೆಲಸ ಮಾಡುತ್ತಿದೆ: ಡಿಕೆಶಿ )

Last Updated :Jan 2, 2023, 2:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.