ಮನೆ ಕಟ್ಟಿಕೊಡದ ಬಿಲ್ಡರ್: ಬಡ್ಡಿ ಸಮೇತ ಪರಿಹಾರ, ದಂಡ ಕೊಡಲು ಜಿಲ್ಲಾ ಗ್ರಾಹಕರ ಆಯೋಗ ಆದೇಶ

author img

By

Published : Nov 22, 2022, 9:27 PM IST

KN_DWD

ಗ್ರಾಹಕನಿಂದ ಮುಂಗಡ ಹಣ ಪಡೆದು ಮನೆ ನಿರ್ಮಾಣ ಮಾಡಿಕೊಡದ ಬಿಲ್ಡರ್​ಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ.

ಧಾರವಾಡ: ಮನೆ ಕಟ್ಟಿಕೊಡದ ಬಿಲ್ಡರ್​ಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದ್ದು, ದೂರುದಾರರಿಂದ ಪಡೆದ ಮುಂಗಡ ಹಣವನ್ನ ಬಡ್ಡಿಸಮೇತ ಪರಿಹಾರ ಮತ್ತು ದಂಡ ಕೊಡುವಂತೆ ಆದೇಶಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಗ್ರಾಮದ ಪರಮೇಶ್ವರ ವಿಘ್ನೇಶ್ವರ ಭಟ್ ಎಂಬುವವರು ಧಾರವಾಡದ ಶ್ರೀ.ವೀರಭದ್ರೇಶ್ವರ ಇನ್‍ಫ್ರಾಸ್ಟ್ರಕ್ಚರ್ ಮತ್ತು ಹೌಸಿಂಗ್ ಪ್ರೈ.ಲಿ. ಇದರ ಆಡಳಿತಾತ್ಮಕ ನಿರ್ದೇಶಕ ನಾಗನಗೌಡ ಶಿವನಗೌಡ ನೀರಲಗಿ ಅವರ ಜೊತೆ ಪೂರ್ಣಿಮಾ ಲೇಔಟ್‍ನಲ್ಲಿ 1200 ಚ.ಅ ವಿಸ್ತೀರ್ಣದ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಡಲು 16,86,167 ರೂಗಳಿಗೆ ದಿ:05/02/2007 ರಂದು ಒಪ್ಪಂದ ಮಾಡಿಕೊಂಡಿದ್ದು, ಆ ಪೈಕಿ ರೂ.13,95,097 ಮುಂಗಡವಾಗಿ ನೀಡಿದ್ದರು.

ಮುಂಗಡ ಹಣಕೊಟ್ಟು ಒಪ್ಪಂದ ಆಗಿದ್ದರೂ ಬಿಲ್ಡರ್ ತನಗೆ ಮನೆ ನಿರ್ಮಾಣ ಮಾಡಿಕೊಡದೇ ಸೇವಾ ನ್ಯೂನತೆ ಎಸಗಿ ಮೋಸ ಮಾಡಿದ್ದಾರೆ ಎಂದು ಬಿಲ್ಡರ್ ಮೇಲೆ ಕ್ರಮ ಕೈಗೊಳ್ಳುವಂತೆ ಫಿರ್ಯಾದುದಾರ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ್​ ಅವರನ್ನೊಳಗೊಂಡ ಆಯೋಗ ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಮನೆ ಕಟ್ಟಿಕೊಡದೇ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನತೆ ಎಸಗಿ ಮೋಸ ಮಾಡಿರುತ್ತಾರೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಈ ಬಗ್ಗೆ ವೀರಭದ್ರೇಶ್ವರ ಹೌಸಿಂಗ್ ಪ್ರೈ.ಲಿ. ಆಡಳಿತಗಾರ ಎನ್.ಎಸ್.ನೀರಲಗಿ ದೂರುದಾರರಿಂದ ಪಡೆದ ರೂ.13,95,097 ಗಳನ್ನು ದಿ:04/06/2015ರಿಂದ ಶೇ.9 ರಂತೆ ಬಡ್ಡಿ ಲೆಕ್ಕ ಹಾಕಿ ಹಾಗೂ ಮಾನಸಿಕ ತೊಂದರೆಗೆ ರೂ.1,00,000 ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.10,000 ಗಳನ್ನು ಈ ಆದೇಶದ ದಿನಾಂಕದಿಂದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ತೀರ್ಪು ನೀಡಿದೆ.

ಇದನ್ನೂ ಓದಿ: ವಿಮೆ ಹಣ ನಿರಾಕರಿಸಿದ ವಿಮಾ ಕಂಪನಿಗೆ ದಂಡ ಹಾಕಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.