ETV Bharat / state

ಜೈನ ಮುನಿ ಹತ್ಯೆ ಕೇಸ್‌: ಪೊಲೀಸ್ ಇಲಾಖೆ ಸಮರ್ಥ, ಸಿಬಿಐ ತನಿಖೆ ಅಗತ್ಯವಿಲ್ಲ- ಸಚಿವ ಜಿ.ಪರಮೇಶ್ವರ್

author img

By

Published : Jul 10, 2023, 11:07 AM IST

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಆಶ್ರಮದ ಜೈನ ಮುನಿಗಳ ಹತ್ಯೆ ಪ್ರಕರಣದ ತನಿಖೆಯ ಕುರಿತು ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿದರು.

cbi-investigation-is-not-necessary-in-jain-monk-murder-case-minitser-parameshwar
ಜೈನ ಮುನಿ ಹತ್ಯೆ ಪ್ರಕರಣ: ಪೊಲೀಸ್ ಇಲಾಖೆ ಸಮರ್ಥವಾಗಿದೆ..ಸಿಬಿಐ ತನಿಖೆ ಅಗತ್ಯವಿಲ್ಲ : ಸಚಿವ ಜಿ.ಪರಮೇಶ್ವರ

ಜೈನ ಮುನಿ ಹತ್ಯೆ ಪ್ರಕರಣ: ಸಚಿವ ಜಿ.ಪರಮೇಶ್ವರ ಹೇಳಿಕೆ

ಹುಬ್ಬಳ್ಳಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಹತ್ಯೆ ತನಿಖೆಯ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಪೊಲೀಸರು ಏನು ಕಾನೂನು ಕ್ರಮ ಕೈಗೊಳ್ಳಬೇಕೋ ಅದನ್ನು ಅವರು ಮಾಡುತ್ತಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್​ ಹೇಳಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆ ನಡೆದಾಗ ಯಾರೂ ಕೂಡ ತಾರತಮ್ಯ ಮಾಡಲು ಹೋಗುವುದಿಲ್ಲ. ಪೊಲೀಸರು ಆರೋಪಿಗಳನ್ನು ಬಂಧಿಸುವ ಕೆಲಸವನ್ನು ಸ್ವಾಭಾವಿಕವಾಗಿ ಮಾಡುತ್ತಾರೆ. ಇದರಲ್ಲಿ ತಾರತಮ್ಯದ ಪ್ರಶ್ನೆಯೇ ಬರುವುದಿಲ್ಲ ಎಂದರು.

ಜೈನಮುನಿಗಳು ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಹಂತಕರು ಬೋರ್‌ವೆಲ್​ನಲ್ಲಿ ಹಾಕಿದ ದೇಹವನ್ನು ಪತ್ತೆ ಮಾಡಿ ಕ್ರಮ ಕೈಗೊಂಡಿದ್ದಾರೆ. ನಮ್ಮ ಪೊಲೀಸ್​​ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿನ ಜೈನ ಮುನಿಗಳು ಉಪವಾಸ ಮಾಡಿದ್ದರು. ಅವರೊಂದಿಗೆ ನಿನ್ನೆ ನಾನು ಕೂಡ ಮಾತನಾಡಿದ್ದೇನೆ. ಅವರ ಬೇಡಿಕೆಗಳನ್ನು ಪೂರೈಸುವ ಭರವಸೆಯನ್ನು ನೀಡಿ ಬಂದಿದ್ದೇವೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ : ಜೈನಮುನಿ ಹತ್ಯೆ ಪ್ರಕರಣ: ಹೆಚ್ಚಿನ ಮುತುವರ್ಜಿ ವಹಿಸಿ ತನಿಖೆ ನಡೆಸುತ್ತಿದ್ದೇವೆ- ಬೆಳಗಾವಿ ಎಸ್ಪಿ

ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕೆಂದು ಒತ್ತಾಯಿಸಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಪೊಲೀಸ್ ಇಲಾಖೆಯವರು ಸಮರ್ಥರಿದ್ದಾರೆ. ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಪ್ರಕರಣದ ಉನ್ನತ ತನಿಖೆ ಆರಂಭ ಆಗಿದೆ. ಈ ಪ್ರಕರಣವನ್ನು ಸಿಬಿಐ ಅಥವಾ ಯಾವುದಕ್ಕೂ ಕೊಡುವ ಅಗತ್ಯ ಇಲ್ಲ. ನಮ್ಮ ಇಲಾಖೆ ಪ್ರಕರಣದ ತನಿಖೆ ನಡೆಸಿದ ಬಳಿಕ ಸತ್ಯಾಸತ್ಯತೆ ತಿಳಿದು ಬರಲಿದೆ. ಸುಮ್ಮನೆ ಆಪಾದನೆ ಮಾಡುವುದು ಸರಿಯಲ್ಲ, ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪೊಲೀಸರು ಪಕ್ಷಾತೀತವಾಗಿ ಯಾವುದೇ ಒತ್ತಡ ಇಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದರು.

ಹತ್ಯೆಗೈದವರ ವಿರುದ್ಧ ಕಠಿಣ ಕ್ರಮ- ಡಿಕೆಶಿ: ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಡಿಸಿಎಂ ಡಿ.ಕೆ. ಶಿವಕುಮಾರ್ ಭಾನುವಾರ ಹೇಳಿದ್ದಾರೆ. ಜೈನ ಮುನಿಗಳ ಹತ್ಯೆ ಖಂಡನೀಯ. ಇದನ್ನು ಸರ್ಕಾರ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರೊಬ್ಬರೂ ಪ್ರಚೋದನೆಗೆ ಒಳಗಾಗಬಾರದು. ಬೇರೆಯವರನ್ನೂ ಪ್ರಚೋದಿಸಬಾರದು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದ್ದರು.

ವಿರೋಧ ಪಕ್ಷದ ನಾಯಕ ಆಯ್ಕೆ ವಿಚಾರವಾಗಿ ಮಾತನಾಡಿ ಜಿ. ಪರಮೇಶ್ವರ್‌ ಮಾತನಾಡಿ, ಬಿಜೆಪಿಯಲ್ಲಿ ಒಳಜಗಳ ಇದೆ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡೋಕೆ ಅವರಿಗೆ ಆಗ್ತಿಲ್ಲ. ಒಂದು ವಾರ ಸದನ ನಡೆದಿದೆ. ಇದು ಅವರಿಗೆ ಎಷ್ಟು ಜವಾಬ್ದಾರಿ ಇದೆ ಎನ್ನುವುದನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ : ಜೈನಮುನಿ ಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.