ETV Bharat / state

ಸುಡಾನ್​​ ಸೇನಾ ಸಂಘರ್ಷ.. ಸಂಕಷ್ಟದಲ್ಲಿ 31 ಕನ್ನಡಿಗರು, ನೆರವಿಗೆ ಮನವಿ

author img

By

Published : Apr 18, 2023, 7:21 AM IST

Updated : Apr 18, 2023, 9:24 AM IST

ಸುಡಾನ್​​ನಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ 31 ಕನ್ನಡಿಗರು ಸಿಲುಕಿದ್ದಾರೆ. ಅವರು ನೀಡಿದ ವಿಡಿಯೋ, ಫೋಟೋಗಳಿಂದ ಮಾಹಿತಿ ಲಭ್ಯವಾಗಿದೆ.

ಸುಡಾನ್​​ನಲ್ಲಿ ಸೇನೆ ಮಧ್ಯೆ ಚಕಮಕಿ
ಸುಡಾನ್​​ನಲ್ಲಿ ಸೇನೆ ಮಧ್ಯೆ ಚಕಮಕಿ

ಸುಡಾನ್​​ ಸೇನಾ ಸಂಘರ್ಷ

ದಾವಣಗೆರೆ/ಶಿವಮೊಗ್ಗ: ಸುಡಾನ್ ದೇಶದಲ್ಲಿ ಸೇನೆ ಹಾಗೂ ಅರೆಸೇನಾ ಗುಂಪಿನ ನಡುವೆ ನಡೆದ ಗುಂಡಿನ ಚಕಮಕಿಯಿಂದ ಇಡೀ ದೇಶದ ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಜನವಸತಿ ಪ್ರದೇಶಗಳ ಮೇಲೂ ಗುಂಡಿನ ದಾಳಿ ನಡೆಯುತ್ತಿದ್ದು, ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ.

ಸುಡಾನ್ ದೇಶದ ಅಲ್​ಫಷೀರ್ ನಗರದಲ್ಲಿ ದಾವಣಗೆರೆ ಜಿಲ್ಲೆಯ 5 ಜನ ಸೇರಿ ಕರ್ನಾಟಕದ ಒಟ್ಟು 31 ಮಂದಿ ಸಿಲುಕಿಕೊಂಡಿದ್ದಾರೆ. ಸ್ವತಃ ಅವರುಗಳೇ ಫೋಟೋ, ವಿಡಿಯೋಗಳನ್ನು ಕಳಿಸುವ ಮೂಲಕ ತಮ್ಮನ್ನು ರಕ್ಷಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಭಾರತೀಯರು ನೆಲೆಸಿರುವ ಮನೆಗಳ ಮೇಲೂ ಗುಂಡಿನ ದಾಳಿ ನಡೆದಿದೆ. ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಆಹಾರ, ನೀರಿಗೂ ಪರಿತಪಿಸುವಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕರ್ನಾಟಕದ 31 ಮಂದಿಯಲ್ಲಿ ಶಿವಮೊಗ್ಗದ 7, ದಾವಣಗೆರೆ ಜಿಲ್ಲೆ ಚನ್ನಗಿರಿಯ 5, ಮೈಸೂರು ಜಿಲ್ಲೆಯ ಹುಣಸೂರಿನ 19 ಜನ ಸಿಲುಕಿಕೊಂಡಿದ್ದಾರೆ. ಇವರೆಲ್ಲಾ ಕೂಲಿ ಕಾರ್ಮಿಕರಾಗಿದ್ದು, ಕೆಲಸ ಅರಸಿ ಸುಡಾನ್​ಗೆ ತೆರಳಿದ್ದರು. ಸದ್ಯ ಗುಂಡಿನ ದಾಳಿಗಳು ನಡೆಯುತ್ತಿರುವುದರಿಂದ ಮಹಿಳೆಯರು ಆತಂಕದಲ್ಲಿದ್ದಾರೆ.

ವಾಸವಿರುವ ಕಟ್ಟಡದ ಮೇಲೂ ಗುಂಡಿನ ದಾಳಿ ನಡೆಸಲಾಗಿದ್ದು, ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಸರ್ಕಾರ ನಮ್ಮನ್ನು ಇಲ್ಲಿಂದ ತೆರವು ಮಾಡಲು ನೆರವು ನೀಡಬೇಕು. ಸುಡಾನ್​ನಲ್ಲಿ ಸಿಲುಕಿರುವ 31 ಜನ ಕನ್ನಡಿಗರಲ್ಲಿ ಬಹುತೇಕರು ಗಿಡಮೂಲಿಕೆಗಳ ಔಷಧಿ ಮಾರಾಟ ಮಾಡಲು ತೆರಳಿದ್ದರು ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ಶಿವಮೊಗ್ಗದ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ 7 ಮಂದಿಯೂ ಸುಡಾನ್​ನಲ್ಲಿ ಸಿಲುಕಿದ್ದಾರೆ. ನಾವು ಕನ್ನಡಿಗರು, ಆಫ್ರಿಕಾದ ಸುಡಾನ್ ದೇಶದ ಅಲ್ಪಷೇರ್ ಸಿಟಿಯಲ್ಲಿ ಉಳಿದುಕೊಂಡಿದ್ದೇವೆ. 10 ದಿನಗಳ ಹಿಂದೆ ಇಲ್ಲಿಗೆ ಬಂದಿದ್ದೇವೆ. ಕಳೆದ 3 ದಿನಗಳಿಂದ ಫೈರಿಂಗ್ ಪ್ರಾರಂಭವಾಗಿದೆ. ನಾವಿರುವ ಮನೆಯ ಸುತ್ತಮುತ್ತ ಗುಂಡಿನ ದಾಳಿ ಆಗ್ತಾ ಇದೆ.‌ ಇದರ ಜೊತೆಗೆ ಬಾಂಬ್ ಸದ್ದು ಕೂಡ ಕೇಳಿ ಬರುತ್ತಿದೆ. ಏರ್​ಪೋರ್ಟ್​ ನಾಶವಾಗಿವೆ. ದೊಡ್ಡ ದೊಡ್ಡ ಸಿಟಿಗಳು ನಾಶವಾಗಿವೆ. ಊಟ, ತಿಂಡಿ, ಕುಡಿಯುವ ನೀರೂ ಸಹ ಇಲ್ಲವಾಗಿದೆ ಎಂದು ವಿಡಿಯೋದಲ್ಲಿ ತಮ್ಮ ಸಂಕಷ್ಟವನ್ನು ಸಂತ್ರಸ್ತರು ತೋಡಿಕೊಂಡಿದ್ದಾರೆ.

ಸಾವಿನ ಸಂಖ್ಯೆ ಏರಿಕೆ: ಸುಡಾನ್‌ನ ಮಿಲಿಟರಿ ಮತ್ತು ದೇಶದ ಪ್ರಮುಖ ಅರೆಸೇನಾ ಪಡೆಗಳ ನಡುವಿನ ಕಾಳಗದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರುತ್ತಲೇ ಇದೆ. ಈ ಸಂಘರ್ಷದಲ್ಲಿ ಕನಿಷ್ಠ 180 ನಾಗರಿಕರು ಸಾವನ್ನಪ್ಪಿದ್ದು, ಮತ್ತು 1,800 ಕ್ಕೂ ಹೆಚ್ಚು ನಾಗರಿಕರು ಮತ್ತು ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಜಧಾನಿಯಾದ ಖಾರ್ಟೌಮ್‌ನ 5 ಮಿಲಿಯನ್ ನಿವಾಸಿಗಳು ವಿದ್ಯುತ್ ಅಥವಾ ನೀರಿಲ್ಲದೆ ಮನೆಯಲ್ಲೇ ಸಿಲುಕಿದ್ದಾರೆ. ಮುಸ್ಲಿಮರ ಪವಿತ್ರ ತಿಂಗಳಾದ ರಂಜಾನ್‌ನ ಕೊನೆಯ ಕೆಲವು ದಿನಗಳಲ್ಲಿ ಈ ದಾಳಿ ನಡೆಯುತ್ತಿದ್ದು, ಅನೇಕರು ಪ್ರತಿದಿನ ಉಪವಾಸ, ಪ್ರಾರ್ಥನೆ ಸಲ್ಲಿಸಲು ಸಹ ಕಷ್ಟ ಪಡುತ್ತಿದ್ದಾರೆ.

ಈಶಾನ್ಯ ಭಾಗದಲ್ಲಿರುವ ಪ್ರಮುಖ ವೈದ್ಯಕೀಯ ಕೇಂದ್ರ ಒಳಗೊಂಡಂತೆ ವೈದ್ಯಕೀಯ ಸೌಲಭ್ಯಗಳನ್ನು ನೀಡುವ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಶೆಲ್‌ನಿಂದ ದಾಳಿ ನಡೆದಿದೆ. ಇದರಿಂದ ಹಲವಾರು ಕೇಂದ್ರಗಳು ಬಾಗಿಲು ಹಾಕಿವೆ.

ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಪ್ರಸ್ತುತ ಘರ್ಷಣೆಯನ್ನು ಗಮನದಲ್ಲಿಟ್ಟುಕೊಂಡು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ಮತ್ತು ಸಹಾಯವನ್ನು ಒದಗಿಸಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಅಲ್ಲಿ ಸಿಲುಕಿರುವ ಭಾರತೀಯರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು. 1800 11 8797 (Toll free) +91-11-23012113; +91-11-23014104; +91-11-23017905; ಮೊಬೈಲ್: ​+91 9968291988, Email: situationroom@mea.gov.in

ಓದಿ: ಸುಡಾನ್ ಸೇನಾ ಸಂಘರ್ಷ: ನೂರಕ್ಕೂ ಹೆಚ್ಚು ಸಾವು, 600 ಜನರಿಗೆ ಗಾಯ

Last Updated :Apr 18, 2023, 9:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.