ETV Bharat / state

ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ: ಮುಂದಿನ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರವೇ?

author img

By

Published : Jul 18, 2022, 8:00 PM IST

ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ಹೆಣೆಯಲು ರಾಜಕೀಯ ಪಕ್ಷಗಳು ಸಜ್ಜಾಗಿವೆ. ಅಹಿಂದ ನಾಯಕ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್​ನಿಂದ ದಾವಣಗೆರೆಯಲ್ಲಿ ವೇದಿಕೆ ಸಜ್ಜಾಗುತ್ತಿದೆ.

ವೇದಿಕೆ ನಿರ್ಮಾಣಕ್ಕೆ ಗುದ್ದಲಿ ಪೂಜೆ
ವೇದಿಕೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟು ಹಬ್ಬ ಹಿನ್ನೆಲೆ ಮಧ್ಯ ಕರ್ನಾಟಕದ ಕೇಂದ್ರ ಬಿಂದುವಾದ ದಾವಣಗೆರೆಯಲ್ಲಿ ಬೃಹತ್ ಸಮಾವೇಶಕ್ಕೆ ವೇದಿಕೆ ಸಜ್ಜಾಗುತ್ತಿದೆ. 5 ರಿಂದ 10 ಲಕ್ಷ ಜನರನ್ನು ಸೇರಿಸಿ, ಆಡಳಿತ ಪಕ್ಷವಾದ ಬಿಜೆಪಿಯ ವೈಫ್ಯಲ್ಯಗಳನ್ನು ಪ್ರದರ್ಶಿಸಲು ಭರ್ಜರಿ ಸಿದ್ಧತೆ ನಡೆದಿದೆ.

ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಎಂದರೆ ಒಂದು ಶಕ್ತಿ. ಆದ್ದರಿಂದ ಸಿದ್ದರಾಮಯ್ಯ ಮುಂದಿಟ್ಟುಕೊಂಡು ಈ ಬಾರಿ ಚುನಾವಣೆಯಲ್ಲಿ 150 ಸೀಟ್ ಗೆದ್ದು ಅಧಿಕಾರ ಹಿಡಿಯಲು ಕಾಂಗ್ರೆಸ್ ತೆರೆಮರೆಯಲ್ಲಿ ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ. ಆದ್ದರಿಂದ ಸಿದ್ದರಾಮಯ್ಯ 75 ನೇ ವರ್ಷದ ಹುಟ್ಟು ಹಬ್ಬವನ್ನು ಬೆಣ್ಣೆ ನಗರಿ ದಾವಣಗೆರೆಯಲ್ಲಿ ಆಚರಣೆ ಮಾಡಲು ಸಿದ್ದತೆ ನಡೆದಿದೆ.

ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ರಿಂದ ವೇದಿಕೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿರುವ ಶಾಮನೂರು ಪ್ಯಾಲೇಸ್ ಗ್ರೌಂಡ್​ನಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಆಗಸ್ಟ್ 3 ರಂದು ನಡೆಯಲಿದೆ. ಇಂದು ವೇದಿಕೆ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೆರವೇರಿಸಿದ್ದಾರೆ. ಇದು ಕೇವಲ ಸಿದ್ದರಾಮಯ್ಯ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಸ್ನೇಹಿತರು ಮಾಡುತ್ತಿರುವ ಕಾರ್ಯಕ್ರಮವಾಗಿದೆ.

ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. 50 ಅಡಿ ಉದ್ದ 200 ಅಡಿ ಅಗಲದ ಬೃಹತ್ ವೇದಿಕೆ ನಿರ್ಮಾಣವಾಗಲಿದೆ. ಬೃಹತ್ ವೇದಿಕೆಯ ಪಕ್ಕದಲ್ಲಿ ವಿಐಪಿಗಳು ಕೂರುವುದಕ್ಕೆ ಚಿಕ್ಕ ವೇದಿಕೆ ಮಾಡಲಾಗುವುದು. ಅಲ್ಲದೇ ಐದು ಲಕ್ಷದಿಂದ ಹತ್ತು ಲಕ್ಷ ಜನರು ಸೇರುವ ಸಾಧ್ಯತೆ ಇದ್ದು, ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮಯ್ಯರ 75ನೇ ಹುಟ್ಟುಹಬ್ಬದ ಅಮೃತಮಹೋತ್ಸವ : ಸಲೀಂ ಅಹ್ಮದ್

ಇನ್ನು ದಾವಣಗೆರೆಯಲ್ಲಿ 2012 ರಲ್ಲಿ ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸಿದ್ದರು. ಅಲ್ಲದೇ ಕುರುಬ ಸಮಾವೇಶವನ್ನು ಕೂಡ ನಡೆಸಿ ಸಿಎಂ ಆಗಿದ್ದರು. ಈ ಬಾರಿ ಕೂಡ ಅದೇ ಲೆಕ್ಕಾಚಾರ ಇಟ್ಟುಕೊಂಡು ಈ ಅಮೃತ ಮಹೋತ್ಸವ ಆಯೋಜನೆ ಮಾಡಲಾಗಿದೆ ಎನ್ನಲಾಗಿದೆ. ಈಗಾಗಲೇ ಮಾಜಿ ಸಚಿವರಿಗೆ, ಶಾಸಕರಿಗೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ. ಮಧ್ಯ ಕರ್ನಾಟಕ ಆಗಿರುವುದರಿಂದ ರಾಜ್ಯದ ಎಲ್ಲ ಕಡೆಯಿಂದ ಬರುವ ಜನರಿಗೆ ಅನುಕೂಲವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.