ETV Bharat / state

ಶಾಮನೂರು ಶಿವಶಂಕರಪ್ಪಗೆ ಸಿಎಂ ಸ್ಥಾನ ಕೊಡಿ: ಅಭಿಮಾನಿಗಳ ಆಗ್ರಹ

author img

By

Published : May 15, 2023, 6:41 PM IST

ಈ ಬಾರಿ ನಮ್ಮ ಸಮಾಜದ ಶಾಮನೂರು ಶಿವಶಂಕರಪ್ಪ ಅವರಿಗೆ ಸಿಎಂ ಸ್ಥಾನ ನೀಡಿ ನ್ಯಾಯ ಒದಗಿಸಿಕೊಡಿ ಎಂದು ಮಾಜಿ ದೂಡ ಅಧ್ಯಕ್ಷ ದೇವರಮನೆ ಶಿವಕುಮಾರ್ ಅವರು ಒತ್ತಾಯಿಸಿದ್ದಾರೆ.

ಮಾಜಿ ದೂಡ ಅಧ್ಯಕ್ಷ ದೇವರಮನೆ ಶಿವಕುಮಾರ್
ಮಾಜಿ ದೂಡ ಅಧ್ಯಕ್ಷ ದೇವರಮನೆ ಶಿವಕುಮಾರ್

ಮಾಜಿ ದೂಡ ಅಧ್ಯಕ್ಷ ದೇವರಮನೆ ಶಿವಕುಮಾರ್

ದಾವಣಗೆರೆ : 67 ವರ್ಷಗಳ ಕಾಲ ಶಾಮನೂರು ಶಿವಶಂಕರಪ್ಪ ಪಕ್ಷಕ್ಕೆ ದುಡಿದಿದ್ದಾರೆ. ಅವರಿಗೆ ಸಿಎಂ ಸ್ಥಾನ ಕೊಡಿ ಎಂದು ಶಾಮನೂರು ಶಿವಶಂಕರಪ್ಪ ಅಭಿಮಾನಿಗಳು ಆಗ್ರಹಿಸಿದ್ದಾರೆ.

ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಎಸ್ಎಸ್ ಮಲ್ಲಿಕಾರ್ಜುನ್‌ ಅಭಿಮಾನಿ ಬಳಗದಿಂದ ಪತ್ರಿಕಾಗೋಷ್ಠಿ ಉದೇಶಿಸಿ ಮಾತನಾಡಿದ ಪದಾಧಿಕಾರಿಗಳು, ಮಾಜಿ ಮಂತ್ರಿಗಳು ಹಾಗೂ ಹಾಲಿ ಶಾಸಕರು ಆಗಿರುವ ಇವರು ರಾಷ್ಟ್ರೀಯ ವೀರಶೈವ ಸಮಾಜದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲ ವರ್ಗದ ಜನರಿಗೂ ಸ್ಪಂದಿಸುತ್ತಿರುವ ಇವರ ಸೇವೆಯನ್ನು ಪರಿಗಣಿಸಿ ಹಾಗೂ ಇವರು ಹಿರಿಯ ಮುತ್ಸದ್ದಿಗಳಾಗಿದ್ದು, ರಾಜಕೀಯ ಅನುಭವದ ಆಧಾರದ ಮೇಲೆ ಮೊದಲ ಪ್ರಾಮುಖ್ಯತೆ ಇವರಿಗೆ ನೀಡುವ ಮೂಲಕ 2023ನೇ ಸಾಲಿನಲ್ಲಿ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ.‌

ಇದಲ್ಲದೆ ಇಡೀ ರಾಜ್ಯದಲ್ಲಿ ವೀರಶೈವ ಸಮಾಜದವರು ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ಕೊಟ್ಟಿರುವುದರಿಂದ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ವಿಜಯ ಸಾಧಿಸಲು ಡಾ ಶಾಮನೂರು ಶಿವಶಂಕರಪ್ಪನವರೇ ಕಾರಣರಾಗಿದ್ದಾರೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ನಾಯಕರುಗಳು ಡಾ ಶಾಮನೂರು ಶಿವಶಂಕರಪ್ಪ ಅವರ ಸೇವೆ ಪರಿಗಣಿಸಿ ಮುಖ್ಯಮಂತ್ರಿ ಸ್ಥಾನವನ್ನು ಕೊಡುವುದರಲ್ಲಿ ತಪ್ಪೇನಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕ್ಯಾಬಿನೆಟ್ ದರ್ಜೆಯ ಉತ್ತಮ ಸ್ಥಾನವನ್ನು ಕೊಡಬೇಕು: ಇನ್ನು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ 36 ರಿಂದ 37 ಜನ ಶಾಸಕರು ಗೆದ್ದಿದ್ದಾರೆ. ಎಲ್ಲ ಸಮಾಜಕ್ಕಿಂತ ವೀರಶೈವ ಸಮಾಜದ ಶಾಸಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ನಮಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಕಾಂಗ್ರೆಸ್ ಹೈಕಮಾಂಡ್​ಗೆ ಒತ್ತಾಯಿಸಿದರು. ಇದಲ್ಲದೇ ಮಾಜಿ ಸಚಿವ ಎಸ್ ಎಸ್‌ ಮಲ್ಲಿಕಾರ್ಜುನ ಇವರಿಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಕ್ಯಾಬಿನೆಟ್ ದರ್ಜೆಯ ಉತ್ತಮ ಸ್ಥಾನವನ್ನು ಕೊಡಬೇಕು ಎಂದು ವಿನಂತಿಸಿದರು.

'ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಬಹುಮತ ಬಂದಿದೆ. ಈ ಪಕ್ಷಕ್ಕೆ ನಮ್ಮ ಸಮಾಜದಿಂದ 39 ಜನ ಚುನಾಯಿತರಾಗಿದ್ದಾರೆ. ನಾವು ಕರ್ನಾಟಕದಲ್ಲಿ ಸುಮಾರು 5 ಕೋಟಿ ಜನಸಂಖ್ಯೆ ಇದ್ದೇವೆ. ಹೀಗಾಗಿ ಇಂದು ನಾವು ನಮ್ಮ ಸಮಾಜಕ್ಕೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂದು ಕಾಂಗ್ರೆಸ್​ ಹೈಕಮಾಂಡ್​ಗೆ ಆಗ್ರಹಪಡಿಸುತ್ತೇವೆ. ಈ ಸಲದ ಚುನಾವಣೆಯಲ್ಲಿ ಎಲ್ಲ ವೀರಶೈವ ಲಿಂಗಾಯತ ಸಮಾಜದ ಬಂಧುಗಳು ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸಿದ್ದಾರೆ.

ನಮ್ಮ ಸಮಾಜಕ್ಕೆ ನ್ಯಾಯವನ್ನು ಒದಗಿಸಿಕೊಡಬೇಕು: ವೀರೇಂದ್ರ ಪಾಟೀಲ್ ಅವರ ಕಾಲದಿಂದಲೂ ಕಾಂಗ್ರೆಸ್​ ಪಕ್ಷದಲ್ಲಿ ಲಿಂಗಾಯತರು ಸಿಎಂ ಆಗಿಲ್ಲ. ಹೀಗಾಗಿ ಈ ಬಾರಿ ನಮ್ಮ ಸಮಾಜದಿಂದ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂದು ದಾವಣಗೆರೆ ಘಟಕದಿಂದ ಆಗ್ರಹಪಡಿಸುತ್ತೇವೆ. ಚುನಾಯಿತರಾಗಿರುವ ಎಲ್ಲರಿಗೂ ಮುಖ್ಯಮಂತ್ರಿ ಸ್ಥಾನ ಪಡೆಯುವ ಅರ್ಹತೆ ಇದೆ.

ಆದರೆ, ಹಿರಿಯರಾದ ಡಾ ಶಾಮನೂರು ಶಿವಶಂಕರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂದು ನಾವು ಆಗ್ರಹ ಪಡಿಸುತ್ತೇವೆ. ಇಲ್ಲದಿದ್ದರೆ ಉಪಮುಖ್ಯಮಂತ್ರಿ ಸ್ಥಾನವನ್ನು ಎಂ ಬಿ ಪಾಟೀಲ್ ಅವರಿಗೆ, ಎಸ್ ಎಸ್ ಮಲ್ಲಿಕಾರ್ಜುನ್​ ಅಥವಾ ಈಶ್ವರ್ ಖಂಡ್ರೆ ಅವರಲ್ಲಿ ಒಬ್ಬರಿಗೆ ನೀಡಿ ನಮ್ಮ ಸಮಾಜಕ್ಕೆ ನ್ಯಾಯವನ್ನು ಒದಗಿಸಿಕೊಡಬೇಕು' ಎಂದು ಮಾಜಿ ದೂಡ ಅಧ್ಯಕ್ಷ ದೇವರಮನೆ ಶಿವಕುಮಾರ್ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹೈಕಮಾಂಡ್​ ಮುಂದೆ ಸಿಎಂ ಸ್ಥಾನದ ಆಯ್ಕೆ ಸವಾಲು: ಸಿದ್ದು- ಡಿಕೆ ಪ್ರಸ್ತಾಪಗಳೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.