ದಾವಣಗೆರೆ: ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿತರಿಂದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಂದುವರೆದಿದೆ. ಆದರೆ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಟಿಕೆಟ್ಗೆ ಸಾಧಿಕ್ ಫೈಲ್ವಾನ್ ಅರ್ಜಿ ಸಲ್ಲಿಸಿದ್ದರಿಂದ ದಾವಣಗೆರೆ ದಕ್ಷಿಣ ಮತಕ್ಷೇತ್ರದ ಹಾಲಿ ಶಾಸಕ ಶಾಮನೂರ ಶಿವಶಂಕರಪ್ಪ ಬಳಗದಲ್ಲಿ ತಳಮಳ ಶುರುವಾಗಿದೆ.
ಹಿರಿಯ ಕಾಂಗ್ರೆಸ್ ಮುಖಂಡ ಸಾಧಿಕ್ ಪೈಲ್ವಾನ್ ಶುಕ್ರವಾರ ಕೆಪಿಸಿಸಿ ಕಚೇರಿಗೆ ತೆರಳಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಾಧಿಕ್ ಪೈಲ್ವಾನ್ ಅವರು ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ರ ಸಹೋದರನಾಗಿದ್ದಾರೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡುವಂತೆ ಮುಖಂಡ ಸಾಧಿಕ್ ಆಗ್ರಹಿಸಿದ್ದಾರೆ.
ಶಾಸಕ ಶಾಮನೂರು ಪ್ರತಿನಿಧಿಸುವ ಕ್ಷೇತ್ರ ದಾವಣಗೆರೆ ದಕ್ಷಿಣ ಕ್ಷೇತ್ರವಾಗಿದ್ದರೂ, ಯಾವುದೇ ಹೆದರಿಕೆ ಇಲ್ಲದೇ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ ಮಾಡಿರುವುದು ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ದಾವಣಗೆರೆ ದಕ್ಷಿಣ ಮತ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು,ಸಾದೀಕ್ ಪೈಲ್ವಾನ್ ಟಿಕೆಟ್ ಗಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಇದೀಗ ದಾವಣಗೆರೆ ದಕ್ಷಿಣದಿಂದ ಮತ್ತೊಬ್ಬ ಆಕಾಂಕ್ಷಿತ ಅಭ್ಯರ್ಥಿ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿರುವುದು ಶಾಮನೂರು ಕುಟುಂಬದಲ್ಲಿ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ:ಮತದಾರರ ಪಟ್ಟಿ ಪರಿಷ್ಕರಣೆ ಕೆಜಿಎಫ್ ಸೇಡಿನ, ಕಾಂತಾರದ ಪಂಜುರ್ಲಿಯ ಕಥೆಯಲ್ಲ: ಸಿದ್ದರಾಮಯ್ಯ ಟ್ವೀಟ್