ಸ್ಮಶಾನಕ್ಕೆ ತೆರಳುವ ದಾರಿ ಬಂದ್.. ರಸ್ತೆ ಮಧ್ಯೆಯೇ ಶವವಿಟ್ಟು ಜನರ ಪ್ರತಿಭಟನೆ

ಸ್ಮಶಾನಕ್ಕೆ ತೆರಳುವ ದಾರಿ ಬಂದ್.. ರಸ್ತೆ ಮಧ್ಯೆಯೇ ಶವವಿಟ್ಟು ಜನರ ಪ್ರತಿಭಟನೆ
ಯರಗುಂಟೆ ಗ್ರಾಮದಲ್ಲಿಂದು ಓರ್ವರು ಸಾವನ್ನಪ್ಪಿದ್ದಾರೆ. ಸ್ಮಶಾನಕ್ಕೆ ತೆರಳುವ ಕಾಲುದಾರಿಯನ್ನು ವ್ಯಕ್ತಿಯೋರ್ವ ಬಂದ್ ಮಾಡಿದ್ದಕ್ಕಾಗಿ ಜನರು ರಸ್ತೆ ಮಧ್ಯೆಯೇ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ದಾವಣಗೆರೆ: ಸ್ಮಶಾನಕ್ಕೆ ತೆರಳುವ ಕಾಲುದಾರಿಯನ್ನು ವ್ಯಕ್ತಿಯೋರ್ವ ಬಂದ್ ಮಾಡಿದ್ದಕ್ಕಾಗಿ ಆಕ್ರೋಶಗೊಂಡ ಜನರು ರಸ್ತೆ ಮಧ್ಯೆಯೇ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿರುವ ಘಟನೆ ದಾವಣಗೆರೆ ತಾಲೂಕಿನ ಯರಗುಂಟೆ ಗ್ರಾಮದಲ್ಲಿ ನಡೆದಿದೆ.
ಯರಗುಂಟೆ ಗ್ರಾಮದಲ್ಲಿಂದು ಓರ್ವರು ಸಾವನ್ನಪ್ಪಿದ್ದರು. ಅವರ ಶವಸಂಸ್ಕಾರ ಮಾಡಲು ಸ್ಮಶಾನಕ್ಕೆ ತೆರಳುವ ವೇಳೆ ಕಾಲು ದಾರಿಯನ್ನು ವ್ಯಕ್ತಿಯೋರ್ವ ಉದ್ದೇಶಪೂರ್ವಕವಾಗಿ ಬಂದ್ ಮಾಡಿದ್ದರಿಂದ ಸಿಡಿಮಿಡಿಗೊಂಡ ಜನರು ರಸ್ತೆ ಮಧ್ಯೆ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ಕಾಲು ದಾರಿ ಇಲ್ಲದಿದ್ದರೆ ಸ್ಮಶಾನಕ್ಕೆ ಶವ ಹೊತ್ತು 4-5 ಕಿ.ಮೀ ಸುತ್ತುವರಿದು ಹೋಗಬೇಕಾದ ಪರಿಸ್ಥಿತಿಯಿದೆ. ಈ ಹಿನ್ನೆಲೆ ಗ್ರಾಮಸ್ಥರಿಗೆ ತೊಂದರೆಯಾಗಿದ್ದು, ರಸ್ತೆಯಲ್ಲಿಯೇ ಶವ ಇಟ್ಟು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಕಲಬುರಗಿ: ದೇವಲಗಾಣಗಾಪುರ ದತ್ತಾತ್ರೇಯ ದೇಗುಲದ ಅರ್ಚಕರ ವಿರುದ್ಧ ವಂಚನೆ ಪ್ರಕರಣ
ಪ್ರತಿಭಟನೆ ಬೆನ್ನಲ್ಲೇ ಘಟನಾ ಸ್ಥಳಕ್ಕೆ ದಾವಣಗೆರೆ ತಹಶೀಲ್ದಾರ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಈ ಬಗ್ಗೆ ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಭರವಸೆ ನೀಡಿದರು. ರಸ್ತೆ ಬಂದ್ ಮಾಡಿದ ವ್ಯಕ್ತಿಯನ್ನು ಕೇಳಿದ್ರೆ ರಸ್ತೆ ತನ್ನ ಜಾಗದಲ್ಲಿದೆ ಎಂದು ಬಂದ್ ಮಾಡಿದ್ದೇನೆ ಎಂದು ತಿಳಿಸಿದ್ದಾನೆ. ಆದ್ರೆ ಆತ ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಸಿ ಜಾಗ ಪಡೆದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
