ETV Bharat / state

ಸಚಿವ ಮಲ್ಲಿಕಾರ್ಜುನ್ ಸಂದರ್ಶನದ ವಿಡಿಯೋ ಬಳಕೆ ಮಾಡಿದ ವ್ಯಕ್ತಿ ವಿರುದ್ಧ ಪ್ರಕರಣ

author img

By

Published : Aug 16, 2023, 9:29 AM IST

Updated : Aug 16, 2023, 9:50 AM IST

ಅನುಮತಿಯಿಲ್ಲದೇ ಫೇಸ್​​​ಬುಕ್​​ನಲ್ಲಿ ವಿಜಯ್ ಕುಮಾರ್ ಹಿರೇಮಠ ಎಂಬುವರು ಸಚಿವ ಮಲ್ಲಿಕಾರ್ಜುನ್ ಹಾಗೂ ಅವರ ಪತ್ನಿಯದ್ದು ಎನ್ನಲಾದ ಸಂದರ್ಶನದ ವಿಡಿಯೋ ತುಣುಕುಗಳನ್ನು ಅಪ್ಲೋಡ್​ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದೆ.

Minister Mallikarjun
ಸಚಿವ ಮಲ್ಲಿಕಾರ್ಜುನ್

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಅನುಮತಿ ಇಲ್ಲದೇ ಸಂದರ್ಶನದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ವ್ಯಕ್ತಿ ವಿರುದ್ಧ ನಗರದ ಸೈಬರ್ ಕ್ರೈಂ (ಸಿಇಎನ್) ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅನುಮತಿ ಇಲ್ಲದೇ ಫೇಸ್​​​​ಬುಕ್​​ನಲ್ಲಿ ವಿಜಯ್ ಕುಮಾರ್ ಹಿರೇಮಠ ಎಂಬುವರು ಸಚಿವ ಮಲ್ಲಿಕಾರ್ಜುನ್ ಹಾಗೂ ಅವರ ಪತ್ನಿಯ ಸಂದರ್ಶನ ನಡೆಸಿದ್ದಾರೆ ಎನ್ನಲಾದ ವಿಡಿಯೋ ತುಣುಕುಗಳನ್ನು ಅಪ್ಲೋಡ್​ ಮಾಡಿದ್ದರು. ಈ ಸಂಬಂಧ ವಿಜಯ್ ಕುಮಾರ್ ಹಿರೇಮಠ ಅವರ ವಿರುದ್ಧ ದಾವಣಗೆರೆಯ ಶ್ರೀನಾಥ್ ಬಾಬು (ಬೂದಾಳ್ ಬಾಬು) ಎಂಬುವವರು ಪ್ರಕರಣ ದಾಖಲಿಸಿ ಕ್ರಮ ಜರಗಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಇಲಾಖೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರ ವಿರುದ್ಧ ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದಿವಾಕರ್ ಎಂಬುವರು ದೂರು ನೀಡಿದ್ದಾರೆ.

ಇದನ್ನೂ ಓದಿ: S S Mallikarjun: ಆಕ್ಷೇಪಾರ್ಹ ಪದ ಬಳಕೆ ಆರೋಪ; ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್ ವಿರುದ್ಧ ದೂರು

ಸಚಿವ ಮಲ್ಲಿಕಾರ್ಜುನ್ ಅವರನ್ನು ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರು ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಈ ಸಂದರ್ಶನ ನಡೆಸಿದ್ದರು ಎನ್ನಲಾಗಿದೆ. ಆ ಹಳೆಯ ವಿಡಿಯೋವನ್ನು ಇದೀಗ ವೈರಲ್ ಮಾಡಲಾಗಿತ್ತು.

ದೂರಿನಲ್ಲೇನಿದೆ: "ನಾನು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ದಾವಣಗೆರೆ ತಾಲೂಕಿನ ಚಿಕ್ಕಬೂದಿಹಾಳ್ ಗ್ರಾಮದ ಕಾಂಗ್ರೆಸ್​​ ಮುಖಂಡನಾಗಿರುತ್ತೇನೆ. ನಾನು ಈ ದಿನ ಮೊಬೈಲ್​​ನಲ್ಲಿ ಫೇಸ್​​ಬುಕ್‌ ನೋಡುತ್ತಿದ್ದಾಗ ವಿಜಯ್​ ಕುಮಾರ್ ಹಿರೇಮಠ ಎಂಬ ಫೇಸ್​​ಬುಕ್ ಪ್ರೊಫೈಲ್ ಹೊಂದಿರುವ ವ್ಯಕ್ತಿ ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಮತ್ತು ತೋಟಗಾರಿಕಾ ಸಚಿವರು ಹಾಗೂ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್.ಎಸ್ ಮಲ್ಲಿಕಾರ್ಜುನ್​ ಅವರು ಚುನಾವಣೆ ಪೂರ್ವದಲ್ಲಿ ನಡೆಸಿದ ಸಂದರ್ಶನದ ಭಾಗ ಸೋಷಿಯಲ್​ ಮೀಡಿಯಾದಲ್ಲಿ ಪ್ರಸಾರ ಆಗುತ್ತಿದೆ. ಸಚಿವರು ತಮ್ಮ ಶ್ರೀಮತಿಯೊಂದಿಗೆ ಅವರ ಮನೆಯಲ್ಲಿ ನಡೆಸಿರುವ ಸಂವಾದದ ವಿಡಿಯೋವನ್ನು ಅವರ ಅನುಮತಿಯಿಲ್ಲದೇ ಪ್ರಸಾರವಾಗಿದೆ. ಇದು ದುರುದ್ದೇಶಪೂರ್ವಕವಾಗಿ ಮತ್ತು ಮಾನ್ಯ ಸಚಿವರ ಪುತಿಷ್ಠೆಗೆ ಧಕ್ಕೆಯನ್ನುಂಟು ಮಾಡಿ, ಸಾರ್ವಜನಿಕರ ಮನಸಿನಲ್ಲಿ ಅಹಿತಕರ ಭಾವನೆಗಳನ್ನು ಉತ್ತೇಜಿಸುವಂತೆ ಮೂಲ ವಿಡಿಯೋವನ್ನು ಅಪೂರ್ಣವಾಗಿ ಫೇಸ್ಬುಕ್‌ನಲ್ಲಿ ಅಪ್ಲೋಡ್​ ಮಾಡಿರುತ್ತಾರೆ. ಸಚಿವರು ಮಾತನಾಡುತ್ತಿರುವ ವಿಡಿಯೋವನ್ನು ವಿಜಯ್​ ಕುಮಾರ್ ಹಿರೇಮಠ ಎಂಬ ಫೇಸ್ಬುಕ್ ಪ್ರೊಫೈಲ್ ಹೊಂದಿರುವ ವ್ಯಕ್ತಿ ತನ್ನ ಅಕೌಂಟ್​​ನಲ್ಲಿ ಅಪ್ಲೋಡ್​ ಮಾಡಿರುವುದು ಕಂಡು ಬಂದಿದೆ. ಹಾಗಾಗಿ ಆ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿ ಕ್ರಮಕೈಗೊಳ್ಳುವಂತೆ ತಮ್ಮಲ್ಲಿ ಕೋರುತ್ತೇನೆ' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಆಕ್ಷೇಪಾರ್ಹ ಪದ ಬಳಕೆ ಆರೋಪದ ವಿಡಿಯೋ ವೈರಲ್​: ಸಚಿವ ಎಸ್​.ಎಸ್.ಮಲ್ಲಿಕಾರ್ಜುನ್​ ಸ್ಪಷ್ಟನೆ

Last Updated : Aug 16, 2023, 9:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.