ETV Bharat / state

ಬಿಜೆಪಿಯಲ್ಲಿ ತೀವ್ರ ಸ್ವರೂಪ‌ ಪಡೆದ ಟಿಕೆಟ್ ಹಂಚಿಕೆ‌ ವಿಚಾರ: ದಿಢೀರ್ ಸಭೆ ಕರೆದ ಮಾಡಾಳ್ ಮಲ್ಲಿಕಾರ್ಜುನ

author img

By

Published : Apr 4, 2023, 9:33 PM IST

ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಹಿರಿಯ ಪುತ್ರ ಮಾಡಾಳ್ ಮಲ್ಲಿಕಾರ್ಜುನ್‌ ಆಪ್ತರ ಸಭೆ ನಡೆಸಿದ್ದಾರೆ.

ದಿಢೀರ್ ಸಭೆ ಕರೆದ ಮಾಡಾಳ್ ಮಲ್ಲಿಕಾರ್ಜುನ
ದಿಢೀರ್ ಸಭೆ ಕರೆದ ಮಾಡಾಳ್ ಮಲ್ಲಿಕಾರ್ಜುನ

ದಿಢೀರ್ ಸಭೆ ಕರೆದ ಮಾಡಾಳ್ ಮಲ್ಲಿಕಾರ್ಜುನ

ದಾವಣಗೆರೆ : ಲೋಕಾಯುಕ್ತ ದಾಳಿ ಪ್ರಕರಣದಲ್ಲಿ ಜೈಲು ಸೇರಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಈ ಬಾರಿ ಟಿಕೆಟ್ ಕಂಟಕವಾಗಿ ಪರಿಣಮಿಸಿದೆ. ಇನ್ನು ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್​ಗೂ ಕೂಡ ಟಿಕೆಟ್ ಸಿಗುವುದು ಡೌಟ್ ಎಂಬ ವಿಚಾರ ಚನ್ನಗಿರಿ ಬಿಜೆಪಿಯಲ್ಲಿ ಕೇಳಿಬರುತ್ತಿದೆ.

ಇದೀಗ ಚನ್ನಗಿರಿ ಟಿಕೆಟ್ ಹಂಚಿಕೆ ವಿಚಾರ ತೀವ್ರ ಸ್ವರೂಪ‌ ಪಡೆದುಕೊಂಡಿದ್ದರಿಂದ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ದಿಢೀರ್ ಅಂತಾ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದರು.‌ ಮಾಡಾಳ್ ವಿರೂಪಾಕ್ಷಪ್ಪ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಸದ್ಯ ಇದೀಗ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಈ ಮಧ್ಯೆ ಚನ್ನಗಿರಿ ಕ್ಷೇತ್ರಕ್ಕೆ ಮಾಡಾಳ್ ಮಲ್ಲಿಕಾರ್ಜುನ್​ಗೆ ಟಿಕೆಟ್ ನೀಡುವಂತೆ ಪಕ್ಷದ ಹೈಕಮಾಂಡ್​ಗೆ ತಾಲೂಕಿನ ಬಿಜೆಪಿ ಮುಖಂಡರು ಸಭೆ ನಡೆಸಿ ಒತ್ತಾಯ ಮಾಡಿದ್ದಾರೆ.

ತಂದೆಯ ಅನುಪಸ್ಥಿತಿಯಲ್ಲಿ ಪಕ್ಷದ ಮೇಲಿನ ಹಿಡಿತ ಗಟ್ಟಿಗೊಳಿಸಲು ಪುತ್ರ ಮಾಡಾಳ್ ಮಲ್ಲಿಕಾರ್ಜುನ ಮುಂದಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಟಿಕೆಟ್ ಘೋಷಣೆ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆ ಚನ್ನಗಿರಿ ತಾಲೂಕಿನ ಬಹುತೇಕ ಪ್ರಮುಖ ನಾಯಕರನ್ನು ಕರೆದು ಮಹತ್ವದ ಸಭೆ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ಹಿರಿಯ ಪುತ್ರ ಹಿಡಿತ: ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧಿತರಾಗಿರುವ ಮಾಡಾಳ್ ವಿರೂಪಾಕ್ಷಪ್ಪ ಅವರ ಲೋಕಾಯುಕ್ತ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು. ಏಪ್ರಿಲ್ 11 ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಆದೇಶ ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಅವರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ. ಹೀಗಾಗಿ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಟಿಕೆಟ್​ ಸಿಗುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದ್ದು ಅವರ ಹಿರಿಯ ಪುತ್ರ ಕ್ಷೇತ್ರದಲ್ಲಿ ತಮ್ಮ ಬಿಗಿ ಹಿಡಿತ ಸಾಧಿಸುತ್ತಿದ್ದಾರೆ ಎಂಬುದು ಕೇಳಿಬರುತ್ತಿದೆ.

ಏನಾಗಿತ್ತು?: ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ಕಚ್ಚಾ ವಸ್ತುಗಳ ಪೂರೈಕೆ ಸಂಬಂಧ ಟೆಂಡರ್​ ವಿಚಾರವಾಗಿ ಟೆಂಡರ್​ ಆಕಾಂಕ್ಷಿಗಳಿಂದ ಶಾಸಕ ವಿರೂಪಾಕ್ಷಪ್ಪ ಮಾಡಾಳ್​ ಅವರ ಮಗ ಪ್ರಶಾಂತ್​ ಮಾಡಾಳ್ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ಪ್ರಶಾಂತ್​ ಮಾಡಾಳ್​ ಅವರನ್ನು ಬಂಧಿಸಿದ್ದ ಅಧಿಕಾರಿಗಳು, ಅದೇ ದಿನ ಬೆಂಗಳೂರಿನಲ್ಲಿರುವ ಪ್ರಶಾಂತ್​ ಮಾಡಾಳ್​ ಅವರ ಮನೆ ಹಾಗೂ ಚನ್ನಗಿರಿ ತಾಲೂಕಿನಲ್ಲಿರುವ ಶಾಸಕ ವಿರೂಪಾಕ್ಷಪ್ಪ ಮಾಡಾಳ್​ ಅವರ ಮನೆಯಲ್ಲೂ ಶೋಧ ಕಾರ್ಯ ನಡೆಸಿತ್ತು. ದಾಳಿ ವೇಳೆ 8 ಕೋಟಿ ಹಣ ಪತ್ತೆಯಾಗಿತ್ತು.

ಪ್ರಶಾಂತ್​ ಮಾಡಾಳ್​ ಲಂಚ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆ ಶಾಸಕ ವಿರೂಪಾಕ್ಷಪ್ಪ ಮಾಡಾಳ್​ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಪತ್ರವನ್ನು ಮುಖ್ಯಮಂತ್ರಿಗೆ ಕಳುಹಿಸಿದ್ದರು. ನಂತರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ವಿರೂಪಾಕ್ಷಪ್ಪ ಮಾಡಾಳ್​ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದರು.

ನಂತರ ವಿರೂಪಾಕ್ಷಪ್ಪ ಮಾಡಾಳ್​ ಅರ್ಜಿ ವಿಚಾರಣೆ ಕೈಗೊಂಡ ಹೈಕೋರ್ಟ್​ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿತ್ತು. ನಿರೀಕ್ಷಣಾ ಜಾಮೀನು ವಜಾಗೊಂಡ ಬೆನ್ನಲ್ಲೆ ಬೆಂಗಳೂರು ಕಡೆ ಹೋಗುತ್ತಿದ್ದ ಅವರನ್ನು ತುಮಕೂರು ಜಿಲ್ಲೆಯ ಕ್ಯಾತಸಂದ್ರ ಚೆಕ್​ಪೋಸ್ಟ್​ ಬಳಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಬಂಧನದ ನಂತರ ಅವರನ್ನು ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಶೇಷ ನ್ಯಾಯಾಲಯ ಮಾಡಾಳ್​ ಅವರನ್ನು ಐದು ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ನೀಡಿತ್ತು. ಇದೀಗ ಲೋಕಾಯುಕ್ತ ಕಸ್ಟಡಿ ಅವಧಿ ಮುಕ್ತಾಯಗೊಂಡಿದ್ದು, ನ್ಯಾಯಾಂಗ ಬಂಧನ ವಿಧಿಸಿತ್ತು.

ಇದನ್ನೂ ಓದಿ : ಲೋಕಾಯುಕ್ತ ಕಸ್ಟಡಿ ಅವಧಿ ಅಂತ್ಯ: ಶಾಸಕ ವಿರೂಪಾಕ್ಷಪ್ಪ ಮಾಡಾಳ್​ಗೆ ನ್ಯಾಯಾಂಗ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.