ETV Bharat / state

ದಾವಣಗೆರೆ ಮಹಾಸಂಗಮ: ಜನರ ಮಧ್ಯದಲ್ಲಿ ವೇದಿಕೆಗೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ... ಹೇಗಿದೆ ಗೊತ್ತಾ ಬಿಗಿ ಭದ್ರತೆ?

author img

By

Published : Mar 24, 2023, 4:07 PM IST

ನಾಳೆ ದಾವಣಗೆರೆಯಲ್ಲಿ ನಡೆಯಲಿರುವ ಮೋದಿ ಮಹಾಸಂಗಮಕ್ಕೆ ಸಕಲ ಸಿದ್ಧತೆ ಜೊತೆಗೆ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.

Davangere SP CB Rishyant
ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್

ಎಸ್ಪಿ ಸಿಬಿ ರಿಷ್ಯಂತ್

ದಾವಣಗೆರೆ: ನಾಳೆ ದಾವಣಗೆರೆಯಲ್ಲಿ ಜರಗುವ ಮೋದಿ ಮಹಾಸಂಗಮಕ್ಕೆ ಸಕಲ ಸಿದ್ಧತೆ ನಡೆಸಲಾಗಿದ್ದು, ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನರ ಮಧ್ಯೆ ವೇದಿಕೆಗೆ ಕರೆತರುವ ಪ್ಲಾನ್ ಇರುವುದ್ದರಿಂದ ಪೊಲೀಸ್ ಕಣ್ಗಾವಲು ಹಾಕಲಾಗಿದೆ. ಈ ವೇಳೆ ಭದ್ರತೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ಅವರು ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ವೇದಿಕೆಗೆ ಜನರ ಮಧ್ಯೆ ಬರುತ್ತಿದ್ದಾರೆ. ವೇದಿಕೆ ಮಧ್ಯ ಭಾಗದಲ್ಲಿ ವಾಹನ ಬರುವಷ್ಟು ಜಾಗ ಬಿಟ್ಟಿದ್ದೇವೆ, ಸಮಾವೇಶದಲ್ಲಿ ಜನರ ಮಧ್ಯ ಬಂದು ಮೋದಿಯವರು ವೇದಿಕೆ ಹತ್ತುತ್ತಾರೆ ಎಂದು ಮಾಹಿತಿ ನೀಡಿದರು.

ತಪಾಸಣೆ ನಂತರವೇ ಸಮಾವೇಶಕ್ಕೆ ಎಂಟ್ರಿ: ಇನ್ನು ಮಹಾಸಂಗಮ ಸಮಾವೇಶಕ್ಕೆ ಐಪಿಎಸ್​ ದರ್ಜೆಯ 8 ಅಧಿಕಾರಿಗಳು, 4000 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಖಾಸಗಿ ಬಸ್ ಮತ್ತು KSRTC ಬಸ್ ಸ್ಟಾಪ್​ಅನ್ನು ನಗರದ ಹೊರವಲಯ ಪಿಬಿ ರೋಡ್​ನಲ್ಲಿ ಮಾಡಲಾಗಿದೆ. ಜನರು ಬೆಳಿಗ್ಗೆಯಿಂದ ಸಮಾವೇಶಕ್ಕೆ ಬಂದರೆ ಆದಷ್ಟು ಅನಕೂಲವಾಗಲಿದೆ. ಯಾವುದೇ ನೀರಿನ ಬಾಟಲ್​ಗಳನ್ನು ಸಮಾವೇಶದ ಜಾಗಕ್ಕೆ ತೆಗೆದುಕೊಂಡು ಹೋಗುವಂತಿಲ್ಲ, ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಿ ವೀಕ್ಷಕರ ಗ್ಯಾಲರಿಗೆ ಬಿಡಲಾಗುತ್ತೆ ಎಂದು ದಾವಣಗೆರೆ ಎಸ್ಪಿ ರಿಷ್ಯಂತ್ ಮಾಹಿತಿ ನೀಡಿದರು.

ಪ್ರಧಾನಿ ಮೋದಿಯವರು ಬರುವುದು ಯಾವಾಗ?: ನಾಳೆ ಪ್ರಧಾನಿ ಮೋದಿ 1.50ಕ್ಕೆ ಬೆಂಗಳೂರಿನ ಹೆಲಿಪ್ಯಾಡ್​ನಿಂದ 3.15 ಕ್ಕೆ ದಾವಣಗೆರೆ ಹೆಲಿಪ್ಯಾಡ್​​ಗೆ ಆಗಮಿಸಲಿದ್ದಾರೆ. 3.20 ಕ್ಕೆ ಹೆಲಿಪ್ಯಾಡ್​​ನಿಂದ ದಾವಣಗೆರೆ ಜಿ ಎಂ ಐ ಟಿ ವೇದಿಕೆಗೆ ಆಗಮಿಸಿ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಸಂಜೆ 5.5 ಕ್ಕೆ ಸಾರ್ವಜನಿಕ ಸಭೆಯಿಂದ ಹೆಲಿಪ್ಯಾಡ್​ಗೆ ಪ್ರಯಾಣ ಮಾಡಿ ಸಂಜೆ 5.15 ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. 5.50 ಕ್ಕೆ ಶಿವಮೊಗ್ಗ ಏರ್​ಪೋರ್ಟ್ ತಲುಪಿ ಅಲ್ಲಿಂದ 5.55 ಕ್ಕೆ ದೆಹಲಿಗೆ ಪ್ರಯಾಣ ಬೆಳಸಲಿದ್ಧಾರೆ.

ನಾಳೆ ನಗರದಲ್ಲಿ ಭಾರೀ ವಾಹನಗಳಿಗೆ ಪ್ರವೇಶ ನಿಷೇಧ: ದಾವಣಗೆರೆಯಲ್ಲಿ ನಾಳೆ ಬಿಜೆಪಿ ಮಹಾಸಂಗಮ ಯಾತ್ರೆ ಇರುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾರೀ ವಾಹನಗಳಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು ನಗರದ ಒಳಗೆ ಪ್ರವೇಶಿಸುವಂತಿಲ್ಲ. ರಾಜ್ಯದ ನಾಲ್ಕು ಭಾಗಗಳಿಂದ ಬರುವ ವಾಹನಗಳಿಗೆ ಹೊರಭಾಗದಲ್ಲೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಭದ್ರಾವತಿ, ಬೆಂಗಳೂರು, ತುಮಕೂರು, ಹಾಸನ, ಕೊಡಗು, ಮಂಗಳೂರು ಕಡೆಯಿಂದ ಬಾಡಾ ಕ್ರಾಸ್ ಮೂಲಕ ಬರುವ ವಾಹನಗಳಿಗೆ ಎಪಿಎಂಸಿ, ಚಿಕ್ಕನಹಳ್ಳಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಮೋದಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

ಇನ್ನು ಚನ್ನಗಿರಿ, ಕಡೂರು, ಬೀರೂರು ಕಡೆಯಿಂದ ಹದಡಿ ರಸ್ತೆಯಿಂದ ಬರುವ ವಾಹನಗಳಿಗೆ ಡಿಆರ್​ಎಂ ಸೈನ್ಸ್ ಕಾಲೇಜ್ ಮತ್ತು ಹೈಸ್ಕೂಲ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಹಾವೇರಿಯಿಂದ ಹರಿಹರ ಮಾರ್ಗವಾಗಿ ಬರುವ ವಾಹನಗಳಿಗೆ ಕುಂದವಾಡ ಕೆರೆ ಮತ್ತು ಹತ್ತಿರದ ಜಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ನೀಡಲಾಗಿದೆ. ಬಳ್ಳಾರಿ, ಕೊಪ್ಪಳ, ವಿಜಯನಗರ, ವಿಜಯಪುರ, ಬೀದರ್, ರಾಯಚೂರು, ಕಲಬುರಗಿ, ಗದಗ ಜಿಲ್ಲೆಗಳಿಂದ ಕೊಂಡಜ್ಜಿ ಮಾರ್ಗವಾಗಿ ಬರುವ ವಾಹನಗಳಿಗೆ ಕೇಂದ್ರೀಯ ವಿದ್ಯಾಲಯದಲ್ಲಿ, ಜಗಳೂರು ರಸ್ತೆ ಮೂಲಕ ಬರುವ ವಾಹನಗಳು ಬಡಗಿ ಕೃಷ್ಣಪ್ಪ ಲೇಔಟ್​ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಪಿಯು ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ: ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಮುತ್ತ ಎಲ್ಲ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ‌. ಇನ್ನು ಪಿಯು ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದ್ದು, ವಿದ್ಯಾರ್ಥಿಗಳು ಹಾಲ್ ಟಿಕೆಟ್ ಇಟ್ಟುಕೊಂಡಿರಬೇಕು, ಪೊಲೀಸರಿಗೆ ತೋರಿಸಬೇಕಾಗಿದೆ. ನಗರದಲ್ಲಿನ ಕೆಎಸ್​ಆರ್​ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ ನಗರದ ಹೊರಭಾಗಕ್ಕೆ ಸ್ಥಳಾಂತರ ಮಾಡಲಾಗಿದೆ. ಕಾರ್ಯಕ್ರಮ ಸ್ಥಳದ 2 ಕಿಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧಿಸಲಾಗಿದೆ.

ಜರ್ಮನ್ ಮಾದರಿ ಪೆಂಡಲ್ ನಿರ್ಮಾಣ: ನಾಳೆ ನಡೆಯಲಿರುವ ಮೋದಿ ಮಹಾಸಂಗಮ ಕಾರ್ಯಕ್ರಮದ ಬೃಹತ್ ವೇದಿಕೆ 40 ಅಡಿ ಉದ್ದ ಹಾಗೂ 70 ಅಡಿ ಅಗಲವಿದ್ದು, ನೂರಕ್ಕು ಹೆಚ್ಚು ಜನ ಕೂರಬಹುದಾದ ವೇದಿಕೆಯಾಗಿದೆ. ಇನ್ನು ಈ ವೇದಿಕೆ ಮುಂದೆ ಹಾಕಿರುವ ಮೂರು ಜರ್ಮನ್ ಮಾದರಿಯ ಪೆಂಡಲ್​ಗಳು ಆಕರ್ಷಿಸುತ್ತಿವೆ. ಮೂರು ಪೆಂಡಲ್ ಸೇರಿ ಒಟ್ಟು 450 ಅಡಿ ಅಗಲ 1000 ಅಡಿ ಉದ್ದದ ಬೃಹತ್ ಪೆಂಡಲ್ ನಿರ್ಮಾಣ ಮಾಡಲಾಗಿದೆ.

ಅಲ್ಲದೆ ಜನ ಆಸೀನರಾಗಲು ಒಟ್ಟು 2 ಲಕ್ಷ ಚೇರ್​ಗಳನ್ನು ಹಾಕಲಾಗಿದೆ. ಇನ್ನು ಅದೇ ಜನರ ಮಧ್ಯೆ ಮೋದಿಯವರು ನಡೆದುಕೊಂಡು ಬಂದು ವೇದಿಕೆಗೆ ಆಗಮಿಸುವಂತೆ ಪ್ಲಾನ್ ಮಾಡಿ ಮತದಾರರನ್ನು ಸೆಳೆಯುವ ತಂತ್ರವಾಗಿದೆ. ಮುಂಜಾಗ್ರತಾ ಕ್ರಮವಾಗಿ ಆರು ಸಾವಿರಕ್ಕೂ ಅಧಿಕ ಪೊಲೀಸರನ್ನು ನೇಮಿಸಲಾಗಿದೆ. ಇನ್ನು ಜನಪ್ರತಿನಿಧಿಗಳು ಕೂರಲು ಪ್ರತ್ಯೇಕ ಆಸನಗಳನ್ನು ಹಾಕಲಾಗಿದೆ.

ಇದನ್ನೂ ಓದಿ :ಮಾ 25ಕ್ಕೆ ದಾವಣಗೆರೆಯಲ್ಲಿ ಪ್ರಧಾನಿ ಮೋದಿ ಮೇನಿಯಾ; ಸಮಾವೇಶದಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.