ETV Bharat / state

ಕ್ಷುಲ್ಲಕ ಕಾರಣಕ್ಕೆ 2 ಕೋಮಿನ ಯುವಕರ ನಡುವೆ ಗಲಾಟೆ: ಓರ್ವನಿಗೆ ಚಾಕು ಇರಿತ

author img

By

Published : Dec 6, 2022, 9:56 AM IST

ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ಯುವಕರ ನಡುವೆ ಗಲಾಟೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ಘಟನೆ.

davanagere
ದಾವಣಗೆರೆ

ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರ ನಡುವೆ ಗಲಾಟೆ ಆಗಿರುವ ಪ್ರಕರಣ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಗ್ರಾಮದಲ್ಲಿ ಸೋಮವಾರ ನಡೆದಿದೆ. ಗಲಾಟೆಯಲ್ಲಿ ಓರ್ವ ಯುವಕನಿಗೆ ಚಾಕು ಇರಿತವಾಗಿದೆ.

ಅನ್ಯಕೋಮಿನ 24 ವರ್ಷದ ಯುವಕ ಚಾಕು ಇರಿತಕ್ಕೆ ಒಳಗಾಗಿದವನು. ಇನ್ನೊಂದು ಕೋಮಿನ ಈತನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಕಳೆದ ದಿನ ಮಲೇಬೆನ್ನೂರು ಗ್ರಾಮದ ಜಿಗಳಿ ಸರ್ಕಲ್ ನಲ್ಲಿರುವ ಸಾಯಿ ಬೇಕರಿ ಬಳಿ ಈ ಘಟ‌ನೆ ಜರುಗಿದೆ.

ಹಲ್ಲೆಗೊಳಗಾದ ಯುವಕನನ್ನು ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಜಿಲ್ಲಾಸ್ಪತ್ರೆಗೆ ಎಸ್​​ಪಿ ಸಿ.ಬಿ ರಿಷ್ಯಂತ್ ಭೇಟಿ ನೀಡಿ ಹಲ್ಲೆಗೊಳಗಾದ ಯುವಕ ಹಾಗೂ ಸಂಬಂಧಿಕರಿಂದ ಮಾಹಿತಿ ಪಡೆದರು.

ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಡಿದರೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಎಸ್​ಪಿ ಸೂಚನೆ ನೀಡಿದರು. ಅಲ್ಲದೇ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಘಟನೆ ಹಿನ್ನೆಲೆ ಮಲೇಬೆನ್ನೂರು, ಹರಿಹರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿದೆ. ಈ ಇಬ್ಬರು ಯುವಕರ ನಡುವಿನ ಗಲಾಟೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

2 ಕೋಮಿನ ಮುಖಂಡರೊಂದಿಗೆ ಮಾತುಕತೆ: ಕಳೆದ ರಾತ್ರಿ ಮಲೇಬೆನ್ನೂರಿಗೆ ಆಗಮಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಎರಡೂ ಕೋಮಿನ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಸಿಸಿ ಕ್ಯಾಮರಾ ಪರಿಶೀಲಿಸಿ ತಪ್ಪು ಯಾರಿಂದ ಆಗಿದೆ ಎಂಬುದನ್ನು ನೋಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಶಾಂತಿ, ಸುವ್ಯವಸ್ಥೆ ಹದಗೆಡಿಸಲು ಯಾರೇ ಪ್ರಯತ್ನಪಟ್ಟರೂ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಸ್​​ಪಿ ಎಚ್ಚರಿಕೆ ನೀಡಿದರು. ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸಲಾಗಿದೆ. ಸದ್ಯ ಪರಿಸ್ಥಿತಿ ಸಂಪೂರ್ಣ ಶಾಂತಿಯುತವಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ: ಅಪರಿಚಿತ ವ್ಯಕ್ತಿಯಿಂದ ದಾಳಿ: ಅಪ್ರಾಪ್ತ ಬಾಲಕಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.