ETV Bharat / state

ಸಾಕಷ್ಟು ಮನವಿ ಕೊಟ್ಟರೂ ಸಿಗದ ಸ್ಪಂದನೆ: ಮತದಾನ ಬಹಿಷ್ಕರಿಸಿ ಸೇತುವೆ ಕಟ್ಟಿದ ಗ್ರಾಮಸ್ಥರು

author img

By

Published : May 11, 2023, 11:02 AM IST

ಜನಪ್ರತಿನಿಧಿಗಳು ಗ್ರಾಮಕ್ಕೆ ಕನಿಷ್ಠ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದು ಬೇಸರಗೊಂಡ ಐನೆಕಿದು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು.

ಮತ ಬಹಿಷ್ಕರಿಸಿ ಸೇತುವೆ ಕಟ್ಟಿದ ಗ್ರಾಮಸ್ಥರು
ಮತ ಬಹಿಷ್ಕರಿಸಿ ಸೇತುವೆ ಕಟ್ಟಿದ ಗ್ರಾಮಸ್ಥರು

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) : ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನೆಕಿದು ಗ್ರಾಮದ ಕುಜುಂಬಾರ್ ಎಂಬಲ್ಲಿ ಸೇತುವೆ ನಿರ್ಮಿಸಿಕೊಡಿ ಎಂದು ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಬೇಡಿಕೆ ಈಡೇರಿಸದ ಕಾರಣ ಆ ಭಾಗದ ಜನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದೇ, ನಿನ್ನೆ ಹೊಳೆಗೆ ಮರದ ಸಂಕ(ಸೇತುವೆ) ನಿರ್ಮಿಸುವ ಕಾರ್ಯದಲ್ಲಿ ತೊಡಗಿದರು. ಕಡಬ ತಾಲೂಕಿನ ಕುಜುಂಬಾರು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಹಲವಾರು ವರ್ಷಗಳಿಂದ ಬೇಡಿಕೆ, ಮನವಿ ಸಲ್ಲಿಸಲಾಗಿತ್ತು. ಹೀಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರು ಎಂದು ಜನರು ತಿಳಿಸಿದ್ದಾರೆ.

ಇತ್ತೀಚೆಗೆ ಇಲ್ಲಿ ಜನರು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿ ಬ್ಯಾನರ್ ಅಳವಡಿಸಿದ್ದರು. ಇದನ್ನು ಕಂಡು ಸ್ಥಳೀಯ ಅಧಿಕಾರಿಗಳು ಆಗಮಿಸಿ ಜನರ ಮನವೊಲಿಸಿದ್ದರು. ಅಧಿಕಾರಿಗಳ ಕಸರತ್ತು ಜನರನ್ನು ತೃಪ್ತಿಪಡಿಸುವಲ್ಲಿ ಯಶ ಸಾಧಿಸಲಿಲ್ಲ. ಸೇತುವೆ ನಿರ್ಮಿಸದೇ ಇದ್ದಲ್ಲಿ ಮತದಾನ ಬಹಿಷ್ಕಾರ ಎಂಬ ನಿರ್ಧಾರಕ್ಕೂ ಅಂದೇ ಬಂದಿದ್ದರು. ಹೀಗಿದ್ದರೂ ಸೇತುವೆ ನಿರ್ಮಿಸುವ ಬಗ್ಗೆ ಯಾವುದೇ ಭರವಸೆ ನೀಡದ ಹಿನ್ನೆಲೆಯಲ್ಲಿ ಕುಜುಂಬಾರು ಪರಿಸರದ ಸುಮಾರು 30 ಮನೆಗಳ 80 ಕ್ಕೂ ಅಧಿಕ ಮಂದಿ ಮತ ಚಲಾಯಿಸಲಿಲ್ಲ. ಇದರ ಬದಲಿಗೆ, ಹೊಳೆಗೆ ಸಂಪರ್ಕ ಕಲ್ಪಿಸುವ ಸಂಕ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡು ಆಕ್ರೋಶ ಹೊರಹಾಕಿದರು.

"ನಾವು ಹಲವು ವರ್ಷಗಳಿಂದ ಬೇಡಿಕೆ ಇರಿಸಿದ್ದೇವೆ. ಆದರೂ ಸ್ಪಂದಿಸುತ್ತಿಲ್ಲ. ಭರವಸೆ ನಿಡಿ ಕೈತೊಳೆದುಕೊಳ್ಳುತ್ತಾರೆ" ಎಂದು ದೂರಿದ್ದಾರೆ. "ಈ ಬಾರಿ ವಿಧಾನಸಭಾ ಚುನಾವಣೆ ಬಹಿಷ್ಕರಿಸಿದ್ದೇವೆ. ಮುಂದೆಯೂ ಸೇತುವೆ ಆಗದಿದ್ದರೆ, ಲೋಕಸಭಾ ಚುನಾವಣೆಯನ್ನೂ ಬಹಿಷ್ಕರಿಸುತ್ತೇವೆ" ಎಂದು ಗ್ರಾಮಸ್ಥರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗ್ರಾಮಸ್ಥರೊಬ್ಬರು, "ಗ್ರಾಮದಲ್ಲಿ ರಸ್ತೆ ವ್ಯವಸ್ಥೆ ಸರಿಯಿಲ್ಲ. ಸುಮಾರು ವರ್ಷಗಳಿಂದ ಬೇಡಿಕೆ ಇಟ್ಟರೂ ಸಹ ಇದಕ್ಕೆ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ಈ ಬಗ್ಗೆ ಅಧಿಕಾರಿ ಸೇರಿದಂತೆ ಸ್ಥಳೀಯ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿನ 32 ಮನೆಗಳ ಸದಸ್ಯರು ವಿಧಾನಸಭೆ ಚುನಾವಣೆಯ ಮತದಾನ ಬಹಿಷ್ಕರಿಸಿದ್ದೇವೆ" ಎಂದು ಹೇಳಿದರು. ಇದೇ ವೇಳೆ, "ಶಾಸಕರ ಕೋಟಾದಿಂದಲೂ ನಮ್ಮ ಗ್ರಾಮಕ್ಕೆ ಯಾವುದೇ ಅನುದಾನ ಬಂದಿಲ್ಲ, ಸಂಸದರ ಕೋಟಾದಿಂದಲೂ ಬಂದಿಲ್ಲ" ಎಂದು ಹೇಳಿದರು.

ಶಿವಮೊಗ್ಗದಲ್ಲೂ ಮತ ಬಹಿಷ್ಕಾರ: ತಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಮತದಾನವನ್ನೇ ಗ್ರಾಮಸ್ಥರು ಬಹಿಷ್ಕಾರ ಹಾಕಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಭದ್ರಾವತಿ ತಾಲೂಕಿನ ಕನಸಿನಕಟ್ಟೆ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಕನಿಷ್ಠ ಮೂಲಭೂತ ಸೌಕರ್ಯಗಳಾದ ರಸ್ತೆ, ಬಸ್ ವ್ಯವಸ್ಥೆ, ಮೊಬೈಲ್ ಟವರ್ ಸೇರಿದಂತೆ ರುದ್ರಭೂಮಿಗಾಗಿ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದಾರೆ.

ಇದನ್ನೂ ಓದಿ: ಮೂಲಭೂತ ಸೌಲಭ್ಯ ಕನಸು.. ಬೇಡಿಕೆ ಈಡೇರಿಲ್ಲವೆಂದು ಮತದಾನ ಬಹಿಷ್ಕರಿಸಿದ ಕನಸಿನಕಟ್ಟೆ ಜನರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.