ETV Bharat / state

ಅಂದು ಜೆಡಿಎಸ್ ಜೊತೆಗಿನ ಹೊಂದಾಣಿಕೆಯಿಂದಾಗಿ ನಾನು, ಖರ್ಗೆ, ಮುನಿಯಪ್ಪ ಸೋತೆವು.. ಈಗ ಬಿಜೆಪಿಗೆ ಅನಿಷ್ಟ ಹೊಕ್ಕಿದೆ ಎಂದ ಮೊಯ್ಲಿ

author img

By ETV Bharat Karnataka Team

Published : Sep 23, 2023, 8:13 PM IST

Updated : Sep 24, 2023, 3:26 PM IST

ಇದೀಗ ಬಿಜೆಪಿಗೆ ದಾರಿದ್ರ್ಯ ಪ್ರವೇಶವಾಗಿದೆ. ಕಳೆದ ಬಾರಿ ಜೆಡಿಎಸ್ ಜೊತೆಗೆ ಹೊಂದಾಣಿಕೆಯಿಂದಾಗಿ ನಾನು, ಖರ್ಗೆ, ಮುನಿಯಪ್ಪ ಸೋತೆವು. ಆಗ ಆ ಅನಿಷ್ಟ ನಮ್ಮ‌ ಜೊತೆ ಇತ್ತು. ಈಗ ಅನಿಷ್ಟ ದೂರವಾದದ್ದು ಸಂತೋಷ. ನಾನು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ತಮ್ಮ ಇಂಗಿತ ವ್ಯಕ್ತಪಡಿಸಿದರು.

Former CM Veerappa Moily spoke to the media.
ಮಾಧ್ಯಮದವರೊಂದಿಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಂಗಳೂರು: ಬಿಜೆಪಿ ಜೆಡಿಎಸ್ ಮೈತ್ರಿಗೆ ತುಳುವಿನ ಒಡು ಪೊಗ್ಗುನಿ (ಉಡ ಒಳನುಸುಳುವುದು) ಎಂಬ ತುಳು ಗಾದೆ ಹೇಳುವ ಮೂಲಕ ಬಿಜೆಪಿಗೆ ಅನಿಷ್ಟ ಹೊಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿಶ್ಲೇಷಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಊರಿನಲ್ಲಿ ತುಳುವಿನಲ್ಲಿ ಒಡು ಪೊಗ್ಗುನಿ ಅನ್ನುತ್ತಾರೆ. ಜೆಡಿಎಸ್ ಎಲ್ಲೆಲ್ಲಿ ಹೋಗಿದ್ದಾರೊ ಅಲ್ಲಿ ಅದರ ಕಥೆ ಮುಗಿಯಿತು ಎಂದು ಲೆಕ್ಕ. ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿ ನಮಗೆ ಕಟು ಅನುಭವ ಆಗಿದೆ. ಕಾಂಗ್ರೆಸ್​​​ನ ಇತಿಹಾಸದಲ್ಲಿ ಒಂದು ಸೀಟು ಬಂದದ್ದೇ ಇಲ್ಲ. ಅವರಿಗೆ ಒಂದು ಸೀಟು ನಮಗೆ ಒಂದು ಸೀಟು ಬಂದಿತ್ತು.

ಬಿಜೆಪಿ ಜೊತೆಗೆ ಹೊಂದಾಣಿಕೆ ‌ಮಾಡುವ ದಾರಿದ್ರ್ಯ ನಮ್ಮ ಪಕ್ಷಕ್ಕೆ ಬರುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದರು. ಇದೀಗ ಬಿಜೆಪಿಗೆ ದಾರಿದ್ರ್ಯ ಪ್ರವೇಶವಾಗಿದೆ. ಕಳೆದ ಬಾರಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡ ಪರಿಣಾಮ ನಾನು, ಖರ್ಗೆ, ಮುನಿಯಪ್ಪ ಸೋತೆವು. ಆಗ ಆ ಅನಿಷ್ಟ ನಮ್ಮ‌ ಜೊತೆಗೆ ಇತ್ತು. ಈಗ ಅನಿಷ್ಟ ದೂರವಾದದ್ದು ಸಂತೋಷ. ನಾನು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿಸ್ತು ಸಮಿತಿಯಲ್ಲಿ ಬಿ ಕೆ ಹರಿಪ್ರಸಾದ್ ವಿಚಾರ: ಬಿ ಕೆ ಹರಿಪ್ರಸಾದ್ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ ಅವರು, ಇದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು. ಹೊರಗೆ ಚರ್ಚಿಸುವುದು ಅಶಿಸ್ತು ಆಗುತ್ತದೆ. ಇದೀಗ ಅವರ ವಿಚಾರ ಶಿಸ್ತು ಸಮಿತಿಯಲ್ಲಿ ಇದೆ ಎಂದು ಹೇಳಿದರು.

ಮೂರು ಡಿಸಿಎಂ ವಿಚಾರ: ಮೂರು ಡಿಸಿಎಂ ವಿಚಾರ ಪಕ್ಷದ ಅಭಿಪ್ರಾಯವಲ್ಲ. ವೈಯಕ್ತಿಕವಾಗಿ ಕೆಲವು ಮಂತ್ರಿಗಳು ಅಭಿಪ್ರಾಯ ಹೇಳಿದ್ದಾರೆ. ನಮ್ಮ ಪಕ್ಷ ಬಹಳ ಗಟ್ಟಿಯಾಗಿದೆ. ಬಲಿಷ್ಠವಾಗಿದೆ, 5 ವರ್ಷ ಆಡಳಿತ ನಡೆಸುತ್ತದೆ. ಆದರೆ ಇನ್ನಷ್ಟು ಬಲಿಷ್ಠ ಮಾಡಲು, ಅವರವರ ದೃಷ್ಟಿಯಲ್ಲಿ ಪಕ್ಷ ಇನ್ನಷ್ಟು ಪ್ರವರ್ಧಮಾನಕ್ಕೆ ಬರಲು ಅವರು ಸೂಚನೆಗಳನ್ನು ನೀಡಿದ್ದಾರೆ. ಅದನ್ನು ನಾವು ಸ್ವೀಕರಿಸುತ್ತೇವೆ. ಮೂರು ಡಿಸಿಎಂ ವಿಚಾರ ಕೇಂದ್ರ ಹೈಕಮಾಂಡ್ ನಲ್ಲಿ ಚರ್ಚೆ ಆಗಿದೆ ಎಂದು ಮೊಯ್ಲಿ ತಿಳಿಸಿದರು.

ಕಾವೇರಿ ವಿಚಾರ ಒಂದು ಮಳೆ ಬಂದರೆ ತಣ್ಣಗಾಗುತ್ತೆ: ಕಾವೇರಿ ವಿಚಾರ ತಣ್ಣಗಾಗುತ್ತೆ. ಒಂದು ಮಳೆ ಬಂದರೆ ತಣ್ಣಗಾಗುತ್ತದೆ. ನಮ್ಮ ಸರ್ಕಾರ ಸುಪ್ರೀಂ ಕೋರ್ಟ್​ ನಲ್ಲಿ ವಾದ ಮಾಡುತ್ತದೆ. ನಾನು ಮುಖ್ಯಮಂತ್ರಿ ಇದ್ದಾಗ ಜಯಲಲಿತಾ ಮರೀನಾ ಬೀಚ್​​​ನಲ್ಲಿ ಸತ್ಯಾಗ್ರಹ ಕೂತರೂ ನಾನು ನೀರು ಬಿಟ್ಟಿರಲಿಲ್ಲ. ಕಾವೇರಿ ನೀರು ಕರ್ನಾಟಕ ಜನರ ಜೀವನ್ಮರಣದ ಪ್ರಶ್ನೆ. ನಮ್ಮ ‌ನಿಷ್ಠೆ ಕರ್ನಾಟಕ ಜನರ ಪರ ಎಂದು ಸ್ಪಷ್ಟನೆ ನೀಡಿದರು.

ಜಾತ್ಯತೀತ ಪದ ಕಡಿತ ವಿಚಾರ: ದಮ್ಮು ತಾಕತ್ತು ಇದ್ದರೆ ವಿಶೇಷ ಅಧಿವೇಶನ ಮಾಡಿ ತಿದ್ದುಪಡಿ ಮಾಡಲಿ. ಪಾರ್ಲಿಮೆಂಟ್ ನಲ್ಲಿ ಸಂಸದರಿಗೆ ನೀಡಿದ ಸಂವಿಧಾನ ಪ್ರತಿಯಲ್ಲಿ ಜಾತ್ಯತೀತ ಪದ ತೆಗೆದು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಯವರಿಗೆ ದಮ್ಮು ತಾಕತ್ತು ಇದ್ದರೆ ವಿಶೇಷ ಅಧಿವೇಶನ ಕರೆದು ತಿದ್ದುಪಡಿ ಮಾಡಲಿ ಎಂದು ಸವಾಲೆಸೆದರು.

ಬಿಜೆಪಿ ಸಂವಿಧಾನ ವಿರೋಧಿ ಪಕ್ಷ. ಸಂವಿಧಾನದ ಶಬ್ಧಗಳನ್ನು ಕಿತ್ತು ಹಾಕುವ ಕೆಲಸ ‌ಮಾಡುವವರು ಸಂವಿಧಾನ ವಿರೋಧಿಗಳು. ಆ ಕೆಲಸವನ್ನು ಬಿಜೆಪಿ ಮಾಡಿದೆ. ಅವರಿಗೆ ದಮ್ಮು ಇದ್ದರೆ, ತಾಕತ್ತು ಇದ್ದರೆ ಧೈರ್ಯ ಇದ್ದರೆ ವಿಶೇಷ ಅಧಿವೇಶನ ಕರೆದು ತಿದ್ದುಪಡಿ ಮಾಡಲಿ, ಡಿಲಿಟ್ ಮಾಡಲಿ. ಈ ತರಹ ಕದ್ದು ಮುಚ್ಚಿ ಅದನ್ನು ಅಳಿಸಿಹಾಕುವ ದುಷ್ಟ ತಂತ್ರಗಾರಿಕೆ ಬೇಡ. ಸಂವಿಧಾನ ವಿರೋಧಿ ಕೆಲಸವನ್ನು ಮೋದಿ ಮತ್ತು ತಂಡದವರು ಮಾಡುತ್ತಿದ್ದಾರೆ. ಅವರಿಗೆ ದೇಶವನ್ನು, ಜಗತ್ತನ್ನು ಎದುರಿಸುವ ಧೈರ್ಯ ಇದ್ದರೆ ತಿದ್ದುಪಡಿ ಮಾಡಲಿ ಎಂದು ಆಗ್ರಹಿಸಿದರು.

ಎತ್ತಿನಹೊಳೆ ವಿಚಾರ ಹಳೆ ಸಬ್ಜೆಕ್ಟ್: ಎತ್ತಿನಹೊಳೆ ವಿಚಾರ ಹಳೆ ಸಬ್ಜೆಕ್ಟ್. ಅದರ ವಿಚಾರ ಮಾತಾಡುವುದಿಲ್ಲ‌. ಅದು ಔಟ್ ಡೇಟೆಡ್ ಸಬ್ಜೆಕ್ಟ್. ಅದನ್ನು ಬಿಜೆಪಿ ಜೆಡಿಎಸ್ ನಿಲ್ಲಿಸಿಲ್ಲ. ಒಂದು ಹನಿಯೂ ‌ನೀರು ಹೋಗದೆ ಕರಾವಳಿ ಬರ ಬಂದಿದೆ ಎನ್ನುವುದು ಸರಿಯಲ್ಲ ಎಂದರು.

ಕೇಂದ್ರ ಸರ್ಕಾರ ಮಹಿಳಾ ಮಸೂದೆ ಪಾಸ್ ಮಾಡಿರುವುದು ಕಪಟ ನಾಟಕವೇ ಹೊರತು ಇದರಲ್ಲಿ ಪ್ರಾಮಾಣಿಕತೆಯಿಲ್ಲ. ಅವರಿಗೆ ಮಹಿಳೆಯರ ಮೀಸಲಾತಿ ಬಗ್ಗೆ ಆಸಕ್ತಿಯಿಲ್ಲ‌. ಶೂದ್ರರಿಗೆ ಮತ್ತು ಮಹಿಳೆಯರಿಗೆ ಮತದಾನದ ಹಕ್ಕು ಕೊಡಬಾರದೆಂದು ಗೋಲ್ವಾಲ್ಕರ್ ಹೇಳಿದ್ದರು. ಮನುಸ್ಮೃತಿಯಲ್ಲಿ ಮಹಿಳೆಯರು ಪಾಪಿಷ್ಠರು ಎಂದಿದೆ ಎಂದು ಮೊಯ್ಲಿ ಹೇಳಿದರು.

ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ನ್ಯಾಯ ಕೊಡಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ: ಬಿ ವೈ ವಿಜಯೇಂದ್ರ

Last Updated : Sep 24, 2023, 3:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.