ETV Bharat / state

ಶಾಲೆಯಲ್ಲಿ ಸಮವಸ್ತ್ರ ಬೇಕೇ, ಬೇಡವೇ ಎಂಬುದನ್ನು ಸರ್ಕಾರ ತೀರ್ಮಾನಿಸಲಿ: ಶಾಸಕ ರಘುಪತಿ ಭಟ್​

author img

By

Published : Jan 3, 2022, 9:10 PM IST

ಉಡುಪಿ ಜಿಲ್ಲೆಯ ಕೆಲ ಕಾಲೇಜಿನ ಮಕ್ಕಳಿಂದ ಕೇಸರಿ ರುಮಾಲು ಧರಿಸಲು ಅವಕಾಶ ಕೊಡಬೇಕು ಎಂದು ಮನವಿ ಬಂದಿದೆ. ಇದರಿಂದಾಗಿ ಸಮವಸ್ತ್ರ ಕುರಿತು ಸರ್ಕಾರ, ಪಿಯು ಬೋರ್ಡ್ ತಕ್ಷಣವೇ ನಿರ್ಧಾರಕ್ಕೆ ಬರಬೇಕಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

controversy
ಉಡುಪಿಯಲ್ಲಿ ಹಿಜಬ್​ ವಿವಾದ

ಉಡುಪಿ: ಶಾಲಾ- ಕಾಲೇಜುಗಳಲ್ಲಿ ಏಕ ರೀತಿಯ ಸಮವಸ್ತ್ರ ಬೇಕೇ? ಬೇಡವೇ? ಎಂಬ ಬಗ್ಗೆ ತೀರ್ಮಾನಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸರ್ಕಾರ ಶೀಘ್ರವೇ ನಿರ್ಧಾರಕ್ಕೆ ಬರಬೇಕು ಎಂದು ಶಾಸಕ ರಘುಪತಿ ಭಟ್​ ಹೇಳಿದರು.

ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅನ್ಯಕೋಮಿನ ವಿದ್ಯಾರ್ಥಿನಿಯರು ಹಿಜಬ್ ​(ಸ್ಕಾರ್ಫ್​ ಮಾದರಿ ಬಟ್ಟೆ) ಧರಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಒಂದು ವಾರದಿಂದ ತರಗತಿಗೆ ತೆರಳದೇ ಪ್ರತಿಭಟನೆ ನಡೆಸುತ್ತಿರುವ ಕುರಿತು ಮಾತನಾಡಿದ ಅವರು, ಹಿಜಬ್ ವಿಚಾರದಲ್ಲಿ ಉದ್ದೇಶಪೂರ್ವಕ ಗೊಂದಲ ಸೃಷ್ಟಿಸಲಾಗುತ್ತಿದೆ. ಯಾರದ್ದೋ ಕುಮ್ಮಕ್ಕಿನಿಂದ ವಿದ್ಯಾರ್ಥಿನಿಯರು ಈ ರೀತಿ ಮಾಡುತ್ತಿದ್ದಾರೆ ಎಂದರು.


ಸರ್ಕಾರಿ ಪಿಯು ಕಾಲೇಜಿನಲ್ಲಿ 1985 ರಿಂದಲೂ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಹಿಜಬ್​ಗೆ ಒತ್ತಾಯ ಮಾಡುವವರು ಒಂದೂವರೆ ವರ್ಷ ಸಮವಸ್ತ್ರದಲ್ಲಿ ಬಂದಿದ್ದಾರೆ. ಯಾರದ್ದೋ ಕುಮ್ಮಕ್ಕಿನಿಂದ ಘಟನೆಯನ್ನು ರಾಜಕೀಯಗೊಳಿಸಲಾಗುತ್ತಿದೆ. ಯೂನಿಫಾರ್ಮ್ ಬೇಕಾ ಬೇಡ್ವಾ ಎಂಬುದನ್ನು ಸರ್ಕಾರ ತೀರ್ಮಾನಿಸಲಿ.

ಪದವಿ ಪೂರ್ವ ಕಾಲೇಜು ಮಂಡಳಿಗೆ ಪತ್ರವನ್ನು ಬರೆದಿದ್ದೇವೆ. ಸಮವಸ್ತ್ರ ಬೇಡ ಎಂದರೆ ಯಾರಿಗೂ ಕಡ್ಡಾಯ ಮಾಡಬೇಡಿ. ಕೇಸರಿ ರುಮಾಲು, ಜೀನ್ಸ್, ಸ್ಲೀವ್ ಲೆಸ್ ಬಟ್ಟೆ ಹಾಕಿಕೊಂಡು ಬರಬಹುದೇ?. ತಮಗಿಷ್ಟದ ಬಟ್ಟೆಯನ್ನು ಹಾಕಿಕೊಂಡು ಬರಲು ಅವಕಾಶ ಇದೆಯೇ? ಸರ್ಕಾರ ಉಡುಪಿಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯನ್ನು ಇಟ್ಟುಕೊಂಡು ಸರ್ಕಾರ ತೀರ್ಮಾನಿಸಬೇಕು ಎಂದು ಅವರು ತಿಳಿಸಿದ್ದಾರೆ.

ಸಮವಸ್ತ್ರ ಎಂದರೆ ಶಿಸ್ತು. ಸಮವಸ್ತ್ರ ಎಂದರೆ ಸಮಾನತೆ. ಶಿಕ್ಷಣದಲ್ಲಿ ಸಮಾನತೆ ಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಹಿಜಬ್ ಧರಿಸುವುದರಿಂದ ಧರ್ಮದ ಭೇದ ಬರುತ್ತದೆ. ರಾಜ್ಯದಲ್ಲಿ ಯೂನಿಫಾರಂ ಬೇಕಾ ಬೇಡ್ವಾ ಎಂದು ಸರ್ಕಾರ ತೀರ್ಮಾನಿಸಲಿ ಎಂದು ಹೇಳಿದ್ದಾರೆ.

ದೆೆಹಲಿ ಹೈಕೋರ್ಟ್​ ಸಮವಸ್ತ್ರದ ಬಗ್ಗೆ ಈಗಾಗಲೇ ಆದೇಶ ನೀಡಿದೆ. ಸಾರ್ವಜನಿಕ ಸ್ಥಳದಲ್ಲಿ ಎಲ್ಲರಿಗೂ ನಿಯಮ ಒಂದೇ ರೀತಿಯಾಗಿರಬೇಕು. ಕಾಲೇಜಿನಲ್ಲಿ ಮುಸ್ಲಿಂ ಸಮುದಾಯದ ಹಲವಾರು ವಿದ್ಯಾರ್ಥಿಗಳಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲವರು ವಿವಾದ ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಜಿಲ್ಲೆಯ ಕೆಲ ಕಾಲೇಜಿನ ಮಕ್ಕಳಿಂದ ಕೇಸರಿ ರುಮಾಲು ಧರಿಸಲು ಅವಕಾಶ ಕೊಡಬೇಕು ಎಂದು ಮನವಿ ಬಂದಿದೆ. ಇದರಿಂದಾಗಿ ಸಮವಸ್ತ್ರ ಕುರಿತು ಸರ್ಕಾರ, ಪಿಯು ಬೋರ್ಡ್ ತಕ್ಷಣವೇ ನಿರ್ಧಾರಕ್ಕೆ ಬರಬೇಕಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನ ಕಾಲೇಜಿನಲ್ಲಿ ಮತ್ತೆ ಸ್ಕಾರ್ಫ್​- ಕೇಸರಿ ಶಾಲು ವಿವಾದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.