ಶಾಲೆಗೆ ತೆರಳಿದ ಮಕ್ಕಳ ಮೇಲೆ ನಿಗಾವಹಿಸಲು ಮೊಬೈಲ್​ ಆ್ಯಪ್: ಮಂಗಳೂರು ಖಾಸಗಿ ಕಾಲೇಜಿನಲ್ಲಿ ಹೊಸ ಪ್ರಯೋಗ!

author img

By ETV Bharat Karnataka Team

Published : Sep 4, 2023, 3:48 PM IST

Updated : Sep 4, 2023, 7:16 PM IST

private-college-interduced-a-mobil-app-for-parents-to-monitor-children-in-mangaluru

ಮಕ್ಕಳು ಸುಳ್ಳು ಹೇಳಿ ಶಾಲೆ, ಕಾಲೇಜಿಗೆ ಗೈರಾಗುವುದನ್ನು ತಪ್ಪಿಸಲು ಮತ್ತು ಪೋಷಕರು ಮಕ್ಕಳ ಮೇಲೆ ನಿಗಾವಹಿಸಲು ಅನುಕೂಲವಾಗುವಂತೆ ಮಂಗಳೂರಿನ ಕಾಲೇಜೊಂದು ಮೊಬೈಲ್​ ಆ್ಯಪ್ ಪರಿಚಯಿಸಿದೆ.

ಶಾಲೆಗೆ ತೆರಳಿದ ಮಕ್ಕಳ ಮೇಲೆ ನಿಗಾವಹಿಸಲು ಮೊಬೈಲ್​ ಆ್ಯಪ್

ಮಂಗಳೂರು: ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಚಕ್ಕರ್ ಹೊಡೆಯುವುದು, ಹೆತ್ತವರಿಗೆ ಸುಳ್ಳು ಹೇಳಿ ಹೊರಗಡೆ ಸುತ್ತಾಡುವುದು ಮೊದಲಾದ ದೂರುಗಳು ದೂರುಗಳನ್ನು ಕೇಳಿದ್ದೇವೆ. ಇದಕ್ಕೆ ಕಡಿವಾಣ ಹಾಕಲು ಮತ್ತು ಶಾಲೆಗೆ ಹೋದ ಮಕ್ಕಳ ಮೇಲೆ ನಿಗಾ ಇಡಲು ಇಲ್ಲೊಂದು ಕಾಲೇಜಿನಲ್ಲಿ ಪೂರ್ತಿ ಡಿಜಿಟಲ್ ಪರಿಕಲ್ಪನೆಯೊಂದನ್ನು ಪರಿಚಯಿಸಲಾಗಿದೆ. ಮಕ್ಕಳ ಬಗ್ಗೆ ನಿಗಾ ಇಡಲೆಂದೇ ಕಾಲೇಜಿನಿಂದ ಹೊಸತೊಂದು ಆ್ಯಪ್ ತಯಾರಿಸಲಾಗಿದೆ.

ಮಂಗಳೂರು ಹೊರವಲಯದ ಮುಡಿಪು ಜ್ಞಾನದೀಪ ಶಾಲೆ ಮತ್ತು ಸೂರಜ್ ಪಿಯು ಕಾಲೇಜಿನಲ್ಲಿ ಇಂತಹದೊಂದು ಹೊಸ ಪ್ರಯೋಗ ಮಾಡಲಾಗಿದೆ. ಮಕ್ಕಳು ಶಾಲೆಗೆ ಬಂದಾಗ ಅವರ ಐಡಿ ಕಾರ್ಡ್ ಸ್ಕ್ಯಾನ್ ಮಾಡಬೇಕು. ಆ ಬಳಿಕ ಪ್ರತಿ ತರಗತಿ ನಡೆಯುವಾಗ ತರಗತಿ ಟೀಚರ್ ಫೋಟೋ ತೆಗೆದು ಅಪ್ಲೋಡ್ ಮಾಡುತ್ತಾರೆ. ಶಾಲೆಯಿಂದ ವಾಪಸ್​ ಹೋಗುವಾಗ ಮತ್ತೆ ಸ್ಕ್ಯಾನ್ ಮಾಡಬೇಕು. ಇದೆಲ್ಲವು ಪೋಷಕರ ಮೊಬೈಲ್​ನಲ್ಲಿರುವ ಆ್ಯಪ್​ನಲ್ಲಿ ನಮೂದಾಗುತ್ತದೆ. ಮಕ್ಕಳು ಶಾಲೆಗೆ ಹೋಗಿರುವ ಮತ್ತು ತರಗತಿಯಲ್ಲಿ ಇರುವ ವಿವರ ಈ ಆ್ಯಪ್​ನಲ್ಲಿ ಲಭ್ಯವಿರುತ್ತದೆ. ಇದು ಶಿಕ್ಷಣ ಸಂಸ್ಥೆಯೊಂದು ರಾಜ್ಯದಲ್ಲಿ ಮಾಡಿರುವ ಮೊದಲ ಪ್ರಯೋಗವಾಗಿದೆ.

ಶಾಲಾ ಕಾಲೇಜಿನಲ್ಲಿ ಮಕ್ಕಳ ಎಡವಟ್ಟುಗಳನ್ನು ತಪ್ಪಿಸಲೆಂದೇ ಮಂಗಳೂರು ಹೊರವಲಯದ ಗ್ರಾಮೀಣ ಪ್ರದೇಶದ ಮುಡಿಪು ಬಳಿಯ ಶಾಲೆ ಮತ್ತು ಕಾಲೇಜಿನಲ್ಲಿ ಈ ಮೊಬೈಲ್ ಆ್ಯಪ್ ಜಾರಿಗೆ ತರಲಾಗಿದೆ. ಸಂಪೂರ್ಣ ಡಿಜಿಟಲ್ ಪರಿಕಲ್ಪನೆಯಡಿ ಈ ಆ್ಯಪ್ ಕಾರ್ಯ ನಿರ್ವಹಿಸುತ್ತಿದೆ. ಇದರಿಂದಾಗಿ ನೇರವಾಗಿ ಮೊಬೈಲಿನಲ್ಲಿಯೇ ಪೋಷಕರು ಮಕ್ಕಳ ಬಗ್ಗೆ ನಿಗಾ ಇಡಬಹುದಾಗಿದೆ. ಮುಡಿಪು ಜ್ಞಾನದೀಪ ಶಾಲೆ ಮತ್ತು ಸೂರಜ್ ಪಿಯು ಕಾಲೇಜಿನಲ್ಲಿ ಮುಂಬೈ ಮೂಲದ ವಿಎಂಎಸ್ ಟೆಕ್ನಾಲಜಿ ಕಂಪನಿ ಹೊಸ ಆ್ಯಪ್ ರೂಪಿಸಿದೆ. ಈ ಆ್ಯಪ್​ ಮೂಲಕ ಮಕ್ಕಳು ಶಾಲೆಗೆ ಹೋಗಿರುವುದು, ಪಾಠ ಕೇಳುತ್ತಿದ್ದಾರೆಯೇ ಎಂಬಿತ್ಯಾದಿ ವಿಚಾರವನ್ನು ಪೋಷಕರು ಎಲ್ಲಿಂದ ಬೇಕಾದರೂ ನೋಡಬಹುದಾಗಿದೆ.

ವಿದ್ಯಾರ್ಥಿಗಳ ಐಡಿಯಲ್ಲೇ ಚಿಪ್ ಇರಲಿದ್ದು, ಶಾಲಾ ಪ್ರವೇಶ ಮಾಡುವ ವಿದ್ಯಾರ್ಥಿಗಳು ಸ್ಕ್ಯಾನ್ ಮಷಿನ್​ನಲ್ಲಿ ಐಡಿ ಸ್ಕ್ಯಾನ್ ಮಾಡಬೇಕು. ಆಗ ಅಲ್ಲಿಯೇ ಇರುವ ಕ್ಯಾಮರಾ ಅವರ ಫೋಟೋ ತೆಗೆದು ಐಡಿ ಕಾರ್ಡ್​ನ ಫೋಟೋ ಮತ್ತು ಕ್ಯಾಮರಾ ಫೋಟೋ ತಾಳೆ ಹಾಕಿ ಅನುಮತಿಸುತ್ತದೆ. ತರಗತಿಯಲ್ಲಿ ಪ್ರತಿ ಟೀಚರ್ ತರಗತಿಗೆ ತೆರಳಿದ ಕೂಡಲೇ ಶಾಲಾ ವಿದ್ಯಾರ್ಥಿಗಳ ಫೋಟೋ ತೆಗೆದು ತಮ್ಮಲ್ಲಿರುವ ಆ್ಯಪ್​ಗೆ ಅಪ್ಲೋಡ್ ಮಾಡುತ್ತಾರೆ. ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ತೆರಳುವಾಗ ಮತ್ತೆ ಐಡಿ ಕಾರ್ಡ್ ಸ್ಕ್ಯಾನ್ ಮಾಡಬೇಕು. ಇದೆಲ್ಲವು ಹೆತ್ತವರ ಬಳಿ ಇರುವ ಆ್ಯಪ್​ನಲ್ಲಿ ಕಾಣುತ್ತದೆ. ಜೊತೆಗೆ ಇದೇ ಆ್ಯಪ್ ಮೂಲಕ ಶಾಲೆಯ ಫೀಸ್ ಕಟ್ಟುವ ವ್ಯವಸ್ಥೆ ಕೂಡ ಮಾಡಲಾಗಿದೆ. ಈ ಆ್ಯಪ್ ಮೂಲಕ ಕೆಲಸದ ಜಾಗದಿಂದಲೇ ತಮ್ಮ ಮಕ್ಕಳ ಬಗ್ಗೆ ನಿಗಾ ಇಡುವುದಕ್ಕೆ ಇದರಿಂದ ಸುಲಭವಾಗಲಿದೆ. ಜ್ಞಾನದೀಪ ಶಾಲೆಯಲ್ಲಿ 860 ಮಕ್ಕಳಿದ್ದು, ಎಲ್ಲ ಪೋಷಕರಿಗೂ ಮೊಬೈಲ್ ಆ್ಯಪ್​ ಮೂಲಕ ಮಾಹಿತಿ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.

ಈ ಬಗ್ಗೆ ಮುಡಿಪು ಜ್ಞಾನದೀಪ ಶಾಲೆ ಮತ್ತು ಸೂರಜ್ ಪಿಯು ಕಾಲೇಜಿನ ಮುಖ್ಯಸ್ಥ ಮಂಜುನಾಥ ರೇವಣ್ಕರ್ ಮಾತನಾಡಿ, ಕರ್ನಾಟಕದಲ್ಲಿ ಪ್ರಥಮ ಬಾರಿ ಆ್ಯಪ್ ಮುಖಾಂತರ ಮಕ್ಕಳ ಕಾಳಜಿಯ ಬಗ್ಗೆ ಗಮನಹರಿಸಿದ್ದೇವೆ. ಎಮ್​ವಿಎಸ್ ಆ್ಯಪ್​ನಲ್ಲಿ ಮಕ್ಕಳ ಸುರಕ್ಷತೆಯ ಮಾಹಿತಿ ಪೋಷಕರು ಮತ್ತು ಸಂಸ್ಥೆಯ ಗಮನಕ್ಕೆ ಬರುವಂತೆ ಕಾರ್ಯ ನಿರ್ವಹಿಸುತ್ತದೆ. ಮಕ್ಕಳ ಪೂರ್ಣ ಸೆಕ್ಯುರಿಟಿ ಇದರಿಂದ ಸಾಧ್ಯವಾಗುತ್ತದೆ. ಈ ಆ್ಯಪ್ ನಿಂದ ಶಾಲೆಯ ಶಿಕ್ಷಕರ ಮತ್ತು ಮಕ್ಕಳ ಚಟುವಟಿಕೆಯನ್ನು ಶಾಲೆಯ ಮ್ಯಾನೆಜ್‌ಮೆಂಟ್​ ನೋಡಲು ಸಾಧ್ಯವಾಗುತ್ತದೆ. ಇದರಿಂದ ಮಕ್ಕಳು ದುಶ್ಚಟಗಳಿಗೆ ದಾಸರಾಗುವುದನ್ನು ತಡೆಯಬಹುದಾಗಿದೆ ಎಂದು ಹೇಳಿದರು.

ವಿದ್ಯಾರ್ಥಿ ಮುಹಮ್ಮದ್ ಅನ್ವಾಸ್ ಮಾತನಾಡಿ, ಈ ಆ್ಯಪ್​ನಿಂದ ಶಿಕ್ಷಕರಿಗೆ, ಮ್ಯಾನೆಜ್‌ಮೆಂಟ್‌ ಮತ್ತು ಪೋಷಕರಿಗೆ ಅನುಕೂಲವಾಗಿದೆ. ಪೋಷಕರು ಮಕ್ಕಳ ಬಗ್ಗೆ ನಿಗಾ ಇಡಬಹುದಾಗಿದೆ ಎಂದರು. ವಿದ್ಯಾರ್ಥಿನಿ ಅಪೂರ್ವ ಲಕ್ಷ್ಮಿ ಮಾತನಾಡಿ, ವಿಎಮ್​ಎಸ್ ಆ್ಯಪ್ ನಿಂದ ವಿದ್ಯಾರ್ಥಿಗಳ ಬಗ್ಗೆ ಪೋಷಕರಿಗೆ ತಿಳಿಯಲಿದೆ. ನಮ್ಮ ತಂದೆ-ತಾಯಿ ನಾವು ಕಾಲೇಜಿಗೆ ಬಂದು ಹೋಗುವುದನ್ನು ಗಮನಿಸುತ್ತಿರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಗದರಿದ ಆರೋಪ: ಶಿವಮೊಗ್ಗದಲ್ಲಿ ಶಿಕ್ಷಕಿ ವರ್ಗಾವಣೆ

Last Updated :Sep 4, 2023, 7:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.