ETV Bharat / state

ಪ್ರವೀಣ್ ನೆಟ್ಟಾರು ಕೊಲೆ ಕೇಸ್: ಆರೋಪಿಗಳ ಸುಳಿವು ನೀಡಿದವರಿಗೆ ₹14 ಲಕ್ಷ ಬಹುಮಾನ ಘೋಷಣೆ

author img

By

Published : Jan 6, 2023, 8:04 AM IST

praveen nettar
ಪ್ರವೀಣ್ ನೆಟ್ಟಾರು

ಸುಳ್ಯದ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಂಡಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಸುಳಿವು ನೀಡಿದವರಿಗೆ ಎನ್‌ಐಎ ನಗದು ಬಹುಮಾನ ಘೋಷಣೆ ಮಾಡಿದೆ.

ಸುಳ್ಯ (ದಕ್ಷಿಣ ಕನ್ನಡ) : ಬೆಳ್ಳಾರೆ ನಿವಾಸಿ, ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಅವರ ಹತ್ಯೆ ಪ್ರಕರಣದಲ್ಲಿ ತಪ್ಪಿಸಿಕೊಂಡಿರುವ ನಾಲ್ವರು ಆರೋಪಿಗಳಿಗೆ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಈ ಆರೋಪಿಗಳನ್ನು ಕೇರಳದಲ್ಲಿ ಪತ್ತೆ ಹಚ್ಚಲು ಸಹಾಯ ಮಾಡುವವರಿಗೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ಇದೀಗ ಒಟ್ಟು 14 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪ್ರಕಟಿಸಿದೆ. ಆರೋಪಿಗಳಾದ ಸುಳ್ಯದ ಬುದು ಹೌಸ್‌ನ ಎಸ್‌. ಮುಹಮ್ಮದ್‌ ಮುಸ್ತಫಾ ಯಾನೆ ಮುಸ್ತಫ ಪೈಚಾರ್‌ ಮತ್ತು ಮಡಿಕೇರಿಯ ಎಂ.ಎಚ್‌.ತೌಫಲ್‌ ಕುರಿತು ಸುಳಿವು ಕೊಟ್ಟವರಿಗೆ ನೀಡುವವರಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲುಮುಟ್ಟಲು ವೀಟಿಲ್‌ ಎಂ.ಆರ್‌.ಉಮ್ಮರ್‌ ಫಾರೂಕ್‌ ಯಾನೆ ಉಮ್ಮರ್‌, ಸಿದ್ದಿಕ್‌ ಯಾನೆ ಪೈಂಟರ್‌ ಸಿದ್ದಿಕ್‌ ಯಾನೆ ಗುಜರಿ ಸಿದ್ದಿಕ್‌ ಕುರಿತು ಮಾಹಿತಿ ನೀಡುವವರಿಗೆ ತಲಾ 2 ಲಕ್ಷ ರೂ. ನೀಡಲಾಗುವುದು ಎಂದು ಕೇರಳದ ಹಲವೆಡೆ ಅಂಟಿಸಲಾಗಿರುವ ನೆೋಟೀಸ್‌ನಲ್ಲಿ ಎನ್ಐಎ ತಿಳಿಸಿದೆ.

ಈ ನಾಲ್ವರು ಆರೋಪಿಗಳು ಕೇರಳದಲ್ಲಿ ತಲೆಮರೆಸಿಕೊಂಡಿರುವ ಶಂಕೆಯಿದ್ದು ನೆೋಟಿಸ್‌ ಪ್ರತಿಗಳನ್ನು ಕಲ್ಲಿಕೋಟೆ ಜಿಲ್ಲೆಯ ವಿವಿಧೆಡೆ ಮತ್ತು ಕಾಸರಗೋಡು ಜಿಲ್ಲೆಯ ಹಲವು ಕಡೆಗಳಲ್ಲಿ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಜುಲೈ 26ರಂದು ಪ್ರವೀಣ್‌ ನೆಟ್ಟಾರು ಅವರನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕೊಲೆಗೈದು ಪರಾರಿಯಾಗಿದ್ದರು. ನಂತರ ನಡೆದ ಬೆಳವಣಿಗೆಗಳಲ್ಲಿ ಕೊಲೆಗೆ ಸಹಕಾರ ನೀಡಿದ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು. ಈಗಾಗಲೇ ಕರ್ನಾಟಕದ ಹಲವೆಡೆ ನಾಲ್ವರು ಆರೋಪಿಗಳ ಮಾಹಿತಿ ನೀಡುವಂತೆಯೂ ನೋಟಿಸ್ ಹಾಕಲಾಗಿದೆ.

ಇದನ್ನೂ ಓದಿ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ: ಸೆಕ್ಷನ್‌ 144 ಜಾರಿ, ಕೆಲವೆಡೆ ಶಾಲೆಗಳಿಗೆ ರಜೆ

ಪ್ರಕರಣದ ಹಿನ್ನೆಲೆ ಹೀಗಿದೆ: ಬಿಜೆಪಿಯ ಯುವ ಮುಖಂಡರಾಗಿದ್ದ ಪ್ರವೀಣ್​ ನೆಟ್ಟಾರು ಎಂಬುವವರ ಮೇಲೆ ಕಳೆದ ವರ್ಷ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕೂಡಲೇ ಸಾಗಿಸಲಾಗಿತ್ತು. ಆದರೆ ಅವರು ಮಾರ್ಗಮಧ್ಯೆ ಸಾವಿಗೀಡಾಗಿದ್ದರು. ಹತ್ಯೆ ಖಂಡಿಸಿ ಪುತ್ತೂರು ತಾಲೂಕಿನಲ್ಲಿ ಸರ್ಕಾರಿ ಬಸ್​ಗಳ ಮೇಲೆ ಕಲ್ಲು ತೂರಾಟದಿಂದ ಹಿಡಿದು, ಹಿಂದೂ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದರು. ಶಾಸಕ ಸಂಜೀವ ಮಠಂದೂರು, ಎಸ್​.ಅಂಗಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳೀನ್​ ಕುಮಾರ್​ ಕಟೀಲ್​ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಲ್ಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ​ ಜಾರಿ ಮಾಡಲಾಗಿತ್ತು.

ಆರೋಪಿಗಳ ಹತ್ಯೆಗೆ ಸಂಬಂಧಿಸಿ ಪೊಲೀಸ್​ ಇಲಾಖೆ ವಿಶೇಷ ತಂಡಗಳನ್ನು ರಚಿಸಿತ್ತು. ಕೆಲ ಆರೋಪಿಗಳನ್ನು ಪತ್ತೆ ಹಚ್ಚಲಾಗಿತ್ತು. ಕೆಲವರ ಬಂಧನವೂ ಆಗಿದೆ. ಇನ್ನು ಕೆಲವು ದುಷ್ಕರ್ಮಿಗಳ ಗುರುತು ಸಿಕ್ಕರೂ ಅವರ ಪತ್ತೆಗಾಗಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಲೇ ಇದೆ. ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್​ಇಎ) ತನಿಖೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಎನ್ಐಎ ದಾಳಿ, ಮೂವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.