ETV Bharat / state

ಮೀನು ಹಿಡಿಯಲು ತೆರಳಿದಾತ ನೀರುಪಾಲು: ರಕ್ಷಣೆಗೆ ಧಾವಿಸದ ಗೆಳೆಯನಿಗೆ ಥಳಿತ

author img

By

Published : Dec 27, 2022, 9:22 PM IST

ಗೆಳೆಯನ ಜೊತೆ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬ ನೇತ್ರಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ. ಆದರೆ ಘಟನೆಯ ಸಂದರ್ಭದಲ್ಲಿ ಸ್ನೇಹಿತ ನೆರವಿಗೆ ಧಾವಿಸದೇ ನಿರ್ಲಕ್ಷ್ಯ ತೋರಿದ್ದ.

person drowened river while fishing
ಮೀನು ಹಿಡಿಯುವ ವೇಳೆ ವ್ಯಕ್ತಿ ನೀರುಪಾಲು

ಉಪ್ಪಿನಂಗಡಿ (ದಕ್ಷಿಣ ಕನ್ನಡ) : ಸ್ನೇಹಿತನ ಜತೆ ಮೀನು ಹಿಡಿಯಲೆಂದು ತೆರಳಿದ್ದ ವ್ಯಕ್ತಿ ನದಿಗೆ ಬಿದ್ದು ಮೃತಪಟ್ಟ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಮುಗೇರಡ್ಕ ಎಂಬಲ್ಲಿ ಡಿ 26 ರಂದು ನಡೆದಿದೆ. ವ್ಯಕ್ತಿ ನೀರು ಪಾಲಾದ ಸ್ಥಳದಿಂದ 10 ಮೀಟರ್ ದೂರದಲ್ಲಿ ಡಿ.27ರಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.

ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ದಂಡುಗ ನಿವಾಸಿ ಜನಾರ್ದನ (40ವರ್ಷ) ಎಂಬವರು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಜನಾರ್ದನ ತನ್ನ ಸ್ನೇಹಿತ ಪದ್ಮುಂಜ ಸಮೀಪದ ಬೋಲೋಡಿ ನಿವಾಸಿ ಮಹೇಶ್ ಎಂಬವರೊಂದಿಗೆ ಮುಗೇರಡ್ಕದ ಕಾಮಗಾರಿ ಹಂತದಲ್ಲಿರುವ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ಬಲೆ ಹಾಕಲಂದು ಡಿ.26 ರಂದು ಸಂಜೆ ತೆರಳಿದ್ದರು. ನದಿಗೆ ಬಲೆ ಇಳಿಸುವ ಸಂದರ್ಭದಲ್ಲಿ ಆಯತಪ್ಪಿ ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

ಅಣೆಕಟ್ಟು ನಿರ್ಮಾಣವಾಗುತ್ತಿದ್ದ ಸ್ಥಳವಾಗಿದ್ದರಿಂದ ಈ ಪ್ರದೇಶ ಕೆಸರು ತುಂಬಿ ಅಪಾಯಕಾರಿಯಾಗಿತ್ತು. ಹೀಗಾಗಿ ಮೊದಲು ನೀರಿಗೆ ಬಿದ್ದ ಜನಾರ್ದನ ಮುಳುಗಿ ನಾಪತ್ತೆಯಾಗಿದ್ದಾರೆ. ಘಟನೆಯ ಸಂದರ್ಭ ಜೊತೆಯಲ್ಲಿದ್ದ ಮಹೇಶ್ ಸ್ನೇಹಿತನನ್ನು ರಕ್ಷಿಸುವ ಯಾವ ಕಾರ್ಯಕ್ಕೂ ಮುಂದಾಗದೆ ತನ್ನ ಪಾಡಿಗೆ ವಾಪಸ್ ಸ್ಥಳೀಯ ಬಾರ್​ಗೆ ಬಂದು ಮದ್ಯ ಸೇವಿಸಿ ಅಮಲೇರಿದ ಬಳಿಕ ಬಾರಲ್ಲಿದ್ದವರಲ್ಲಿ ಜನಾರ್ದನ್ ನದಿಗೆ ಬಿದ್ದಿರುವ ವಿಷಯ ತಿಳಿಸಿದ್ದಾನೆ.

ಬಳಿಕ ಮುಳುಗಿದ ಸ್ಥಳ ತೋರಿಸಲು ಬಾರಿನಲ್ಲಿದ್ದ ಮಹೇಶನನ್ನು ಜನಾರ್ದನ ಅವರ ಸಂಬಂಧಿಕರು ಹಾಗೂ ಗೆಳೆಯರು ಘಟನಾ ಸ್ಥಳಕ್ಕೆ ಕರೆ ತಂದಿದ್ದು, ಅಲ್ಲೇ ಸಮೀಪದಲ್ಲೇ ಇದ್ದ ಭಜನಾ ಮಂದಿರದ ಸದಸ್ಯರು ಮತ್ತಿತರರ ಸ್ಥಳೀಯರ ಸಹಕಾರ ಪಡೆದು ರಕ್ಷಣೆಗೆ ಮುಂದಾಗದಿರುವುದು ಕುರಿತು ಸಂಶಯಿಸಿ ಹಲ್ಲೆ ನಡೆಸಿದ್ದರು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಉಪ್ಪಿನಂಗಡಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದು, ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದ್ದರು. ಆದರೂ ನಿನ್ನೆ ಮೃತದೇಹ ಪತ್ತೆ ಆಗಿರಲಿಲ್ಲ. ಇಂದು ಬೆಳಿಗ್ಗೆ ಮೃತದೇಹ ದೊರೆತಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲು... ಮುಂದುವರಿದ ಶೋಧ ಕಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.