ETV Bharat / state

ಗಣಪತಿ ಭಟ್ಟರು ಆವಿಷ್ಕರಿಸಿದ ಅಡಕೆ ಮರ ಏರುವ ಬೈಕ್​ ಇನ್ನಷ್ಟು ಅಡ್ವಾನ್ಸ್​

author img

By

Published : Aug 16, 2020, 4:29 PM IST

ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಪ್ರಗತಿಪರ ಕೃಷಿಕ ಗಣಪತಿ ಭಟ್ ಕಳೆದ ವರ್ಷ ಆವಿಷ್ಕರಿಸಿದ ಅಡಕೆ ಮರ ಹತ್ತುವ ಬೈಕ್ ಒಂದು ವರ್ಷದೊಳಗೆ ಸುಮಾರು 400 ಮಂದಿಯ ತೋಟಗಳಲ್ಲಿ ಕಾರ್ಯಾಚರಿಸುತ್ತಿದೆ. ಇದರಲ್ಲಿ ಕೆಲ ಮಾರ್ಪಾಡುಗಳನ್ನೂ ಮಾಡಲಾಗಿದ್ದು, ಮಳೆಗಾಲದಲ್ಲಿ ಮರ ಹತ್ತುವಾಗಲೂ ಇದು ಜಾರುವುದಿಲ್ಲ.

ಬಂಟ್ವಾಳ: ತಾಲೂಕಿನ ಸಜೀಪಮೂಡ ಗ್ರಾಮದ ಪ್ರಗತಿಪರ ಕೃಷಿಕ ಗಣಪತಿ ಭಟ್ ಕಳೆದ ವರ್ಷ ಆವಿಷ್ಕರಿಸಿದ ಅಡಕೆ ಮರ ಹತ್ತುವ ಬೈಕ್ ಒಂದು ವರ್ಷದೊಳಗೆ ಸುಮಾರು 400 ಮಂದಿಯ ತೋಟಗಳಲ್ಲಿ ಬಳಕೆಯಲ್ಲಿದೆ ಇದರಲ್ಲಿ ಕೆಲ ಮಾರ್ಪಾಡುಗಳನ್ನೂ ಮಾಡಲಾಗಿದ್ದು, ಮಳೆಗಾಲದಲ್ಲಿ ಮರ ಹತ್ತುವಾಗಲೂ ಇದು ಜಾರುವುದಿಲ್ಲ.

ಈಗ ಇನ್ನಷ್ಟು ಅಡ್ವಾಂಸ್​ ಆಗಿದೆ ಪ್ರಗತಿಪರ ಕೃಷಿಕ ಗಣಪತಿ ಭಟ್ ಆವಿಷ್ಕರಿಸಿದ ಮರ ಏರುವ ಬೈಕ್​

ಕೃಷಿ ಕೂಲಿ ಕಾರ್ಮಿಕರ ಕೊರತೆಯನ್ನು ನೀಗಿಸಲೆಂದು ಸುಮಾರು ಐದಾರು ವರ್ಷಗಳ ಸತತ ಸಂಶೋಧನೆಯ ಬಳಿಕ ಬಂಟ್ವಾಳ ತಾಲೂಕಿನ ಸಜೀಪಮೂಡದ ಕೋಮಾಲಿ ಎಂಬಲ್ಲಿರುವ ಪ್ರಗತಿಪರ ಕೃಷಿಕ ಗಣಪತಿ ಭಟ್ ಆವಿಷ್ಕರಿಸಿದ ಅಡಕೆ ಮರ ಹತ್ತುವ ಬೈಕ್ ಎಷ್ಟು ಸುಲಭ ಮತ್ತ ಸುರಕ್ಷಿತವಾಗಿತ್ತೆಂದರೆ ಅದರಲ್ಲಿ ಭಟ್ ಅವರ ಮಗಳು ಸುಪ್ರಿಯಾ ಕೂಡ ಸಲೀಸಾಗಿ ಮರವೇರಿ ಅದರ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಕಳೆದ ವರ್ಷ ಭಾರಿ ಜನಪ್ರಿಯತೆ ಗಳಿಸಿದ್ದ ಈ ಯಂತ್ರವನ್ನು ಖುದ್ದು ಆನಂದ್ ಮಹೀಂದ್ರಾ ಕೂಡ ತಮ್ಮಲ್ಲೇ ಸುಧಾರಿತ ರೂಪದಲ್ಲಿ ಮಾರುಕಟ್ಟೆಗೆ ತರುವ ಕುರಿತು ಯೋಚಿಸಿದ್ದರು. ಆದರೆ., ಲಾಭಕ್ಕಿಂತ ರೈತರಿಗೆ ಉಪಕಾರಿಯಾಗಲೆಂದು ತಾವೇ ವಿನ್ಯಾಸಗೊಳಿಸಿದ ಬೈಕ್ ಅನ್ನು ರೈತರಿಗೆ ಕಡಿಮೆ ದರದಲ್ಲಿ ನೀಡಲು ಇಚ್ಛಿಸಿದ ಭಟ್ ಅವರ ಪ್ರಯತ್ನಕ್ಕೆ ಒಂದು ವರ್ಷದಲ್ಲಿ ಫಲ ದೊರಕಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಸುಮಾರು 400 ಮಂದಿಯ ಅಡಕೆ ತೋಟಗಳಲ್ಲಿ ಬೈಕ್ ಸದ್ದು ಈಗ ಕೇಳಿಸುತ್ತಿದೆ. ಮಹಿಳೆಯರೂ ನಿರ್ಭಯವಾಗಿ ಮರವೇರಬಹುದು ಎಂಬುದು ಇದರ ಸ್ಪೆಶಾಲಿಟಿಯಾದರೆ, ಕಾರ್ಮಿಕರ ಕೊರತೆ ನೀಗಿಸಲು ಇದು ಸಹಕಾರಿ ಎನ್ನುವುದು ಇನ್ನೊಂದು ಅಂಶ. ಇದೀಗ ಮೋಲ್ಡೆಡ್ ಟಯರ್ ಮತ್ತು ಬ್ರೇಕ್ ಸಿಸ್ಟಂನಲ್ಲಿ ಬದಲಾವಣೆ ಮಾಡುವ ಮೂಲಕ ಸುಧಾರಿತ ಬೈಕ್ ಮಾಡಿದ್ದು, ಮಳೆಗಾಲದಲ್ಲಿ ಜಾರುವ ಅಡಕೆ ಮರವನ್ನೇರಲೂ ಸಹಕಾರಿಯಾಗುತ್ತದೆ. ಮದ್ದು ಸಿಂಪಡಣೆಗೆ ಕಾರ್ಮಿಕರನ್ನು ಕಾಯಬೇಕಾಗಿಲ್ಲ ಎನ್ನುತ್ತಾರೆ ಭಟ್.

ಸೇಫ್ಟಿ ಬೆಲ್ಟ್ ಕಟ್ಟಿಕೊಂಡು ಸ್ವಿಚ್ ಒತ್ತಿದರೆ ಮುಗೀತು. 30 ಸೆಕೆಂಡ್​ಗಳಲ್ಲಿ ನೀವು ಅಡಕೆ ಮರದ ತುದಿಯಲ್ಲಿರುತ್ತೀರಿ. ಕೆಳಗಿಳಿಯಬೇಕಾದರೆ ಎಂಜಿನ್ ಆಫ್ ಮಾಡಿದರೂ ಸಾಕು. ಬೀಳುವ ಯಾವುದೇ ಅಪಾಯವಿಲ್ಲ. ಮರಕ್ಕೂ ತೊಂದರೆ ಇಲ್ಲ.ಇದು 28 ಕೆ.ಜಿ. ತೂಕವುಳ್ಳ ಪೆಟ್ರೋಲ್ ಚಾಲಿತ 2 ಸ್ಟ್ರೋಕ್ ಎಂಜಿನ್ ಇರುವ ಬೈಕ್ ಮಾದರಿಯ ಯಂತ್ರ. ಇದರಲ್ಲಿ ಹೈಡ್ರಾಲಿಕ್ ಡಿಸ್ಕ್ ಡ್ರಮ್ ಹೊಂದಿದ ಬ್ರೇಕ್ ಕೂಡ ಇದೆ. ಗೇರ್ ಬಾಕ್ಸ್ ಮತ್ತು ಡಬಲ್ ಚೈನ್ ಒಳಗೊಂಡಿರುವ ಯಂತ್ರದಲ್ಲಿ ಪುಟ್ಟ ಸೀಟ್, ಸೇಫ್ಟಿ ಬೆಲ್ಟ್ ವ್ಯವಸ್ಥೆ ಒಳಗೊಂಡಿದೆ. ಸುಮಾರು 70 ಕೆ.ಜಿ. ತೂಕವುಳ್ಳ ವ್ಯಕ್ತಿ ಇದರಲ್ಲಿ ಸಲೀಸಾಗಿ ಕುಳಿತುಕೊಳ್ಳಬಹುದು. ಎರಡೂ ಕೈಯನ್ನು ಹಿಡಿಯಲು ಹ್ಯಾಂಡಲ್, ಬೈಕ್​ ನ ಹ್ಯಾಂಡ್ ಬ್ರೇಕ್ ಮಾದರಿಯಲ್ಲಿರುವ ನಿಯಂತ್ರಣ ವ್ಯವಸ್ಥೆ ಇಲ್ಲಿದೆ.

ಬಳಸುವ ವಿಧಾನ:

ಟೂ ಸ್ಟ್ರೋಕ್ ಎಂಜಿನ್(ಹಳೆ ಚೇತಕ್ ಸ್ಕೂಟರ್ನಲ್ಲಿರುವಂತೆ) ಆಗಿರುವ ಕಾರಣ, ಪೆಟ್ರೋಲ್ ಮತ್ತು ಆಯಿಲ್ ಸೂಚಿತ ಪ್ರಮಾಣದಲ್ಲಿ ಹಾಕಿ ಯಂತ್ರವನ್ನು ಸುಸ್ಥಿತಿಯಲ್ಲಿಡಬೇಕು. ಬಳಿಕ ತಾವೇರುವ ಅಡಕೆ ಮರದ ಬುಡದಲ್ಲಿ ಅದನ್ನು ಸ್ಥಾಪಿಸಬೇಕು. ಇದರ ವಿನ್ಯಾಸ ಹೇಗಿದೆ ಎಂದರೆ ಯಂತ್ರವನ್ನು ಬಿಡಿಸಿ, ಅಡಕೆ ಮರಕ್ಕೆ ತಾಗಿಸಿದರೆ, ಅದನ್ನು ಕಚ್ಚಿಕೊಂಡು ಕುಳಿತುಕೊಳ್ಳುತ್ತದೆ. ಅದಾದ ಬಳಿಕ ನಮ್ಮ ಜಾಗರೂಕತೆಗೆ ಸೇಫ್ಟಿ ಬೆಲ್ಟ್ ಕಟ್ಟಿಕೊಂಡು ಯಂತ್ರದಲ್ಲಿರುವ ಆಸನದಲ್ಲಿ ಕುಳಿತು ಸ್ವಿಚ್ ಅದುಮಿದರೆ ಮೇಲಕ್ಕೇರುತ್ತಾ ಹೋಗುತ್ತದೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಣಪತಿ ಭಟ್ ಮಗಳು ಪದವಿ ವ್ಯಾಸಂಗ ಮಾಡುತ್ತಿರುವ ಸುಪ್ರಿಯಾ ಮರವೇರುವ ಯಂತ್ರದಲ್ಲಿ ಕುಳಿತು ಸ್ವಿಚ್ ಅದುಮಿ ಮೇಲಕ್ಕೇರುವ ದೃಶ್ಯ ವೈರಲ್ ಆಗುತ್ತಿದೆ. ಕೃಷಿ ನಡೆಸುವವರಿಗೆ ಸ್ವತಃ ದುಡಿಯುವ ಮನಸ್ಸಿದ್ದರೆ ಯಾರ ಸಹಾಯವೂ ಇಲ್ಲದೆ ತಾವೇ ಮರವೇರಬಹುದು. ಮಹಿಳೆಯರು, ಮಕ್ಕಳಿಗೂ ಇದು ಸೇಫ್ ಎನ್ನುವುದು ಪ್ರಾಯೋಗಿಕವಾಗಿ ಸಾಬೀತಾಗಿದೆ ಎಂದು ಭಟ್ ಹೇಳುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.