ETV Bharat / state

ಮಂಗಳೂರು: ಕೊರೊನಾ ಸೋಂಕಿಗೆ ವಲಸೆ ಕಾರ್ಮಿಕ ಸಾವು

author img

By ETV Bharat Karnataka Team

Published : Dec 22, 2023, 9:28 PM IST

ಉತ್ತರ ಭಾರತ ಮೂಲದ‌ 40 ವರ್ಷ‌ದ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

migrant-laborer-died-due-to-corona-infection-in-mangaluru
ಮಂಗಳೂರು: ಕೊರೊನಾ ಸೋಂಕಿಗೆ ವಲಸೆ ಕಾರ್ಮಿಕ ಸಾವು

ಮಂಗಳೂರು: ಕೊರೊನಾ ಸೋಂಕಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ. ಉತ್ತರ ಭಾರತದ 40 ವರ್ಷದ ಕೂಲಿ ಕಾರ್ಮಿಕ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಇತ್ತೀಚೆಗೆ ನಗರದ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಇಂದು ಮೃತಪಟ್ಟಿದ್ದಾರೆ. ಇತರೆ ಖಾಯಿಲೆಗಳಿಂದಲೂ ಬಳಲುತ್ತಿದ್ದ ಇವರಿಗೆ ಕೊರೊನಾ ತಗುಲಿತ್ತು.

ಜಿಲ್ಲೆಯಲ್ಲಿ 3ಕ್ಕೇರಿದ ಸೋಂಕಿತ ಸಂಖ್ಯೆ: ಜಿಲ್ಲೆಯಲ್ಲಿ ಮತ್ತೆ ಎರಡು ಕೊರೊನಾ ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಗುರುವಾರ ತಿಳಿಸಿದ್ದರು. ಬುಧವಾರ 1 ಪ್ರಕರಣ ದೃಢಪಟ್ಟಿತ್ತು. ಉಡುಪಿ ಜಿಲ್ಲೆಯ ವೃದ್ಧರೊಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಈ ಮೂಲಕ ದಕ್ಷಿಣ‌ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಸುಳ್ಯದ 83 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆಗೆ ದಾಖಲಾಗಿದ್ದ ವೇಳೆ ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಸೋಂಕು ದೃಢಪಟ್ಟಿತ್ತು. ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದರು.

ಚಿಕ್ಕಮಗಳೂರು ಜಿಲ್ಲೆಯಲ್ಲೂ ಬುಧವಾರ ನಾಲ್ಕು ಪ್ರಕರಣಗಳು ಪತ್ತೆಯಾಗಿತ್ತು. ಜಿಲ್ಲೆಯಲ್ಲಿ ಜೆಎನ್​.1 ಪ್ರಕರಣಗಳು ಪತ್ತೆಯಾಗಿರುವ ಬೆನ್ನಲ್ಲೇ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್​ ಪರೀಕ್ಷೆ ನಡೆಸಲಾಗುತ್ತಿದೆ. ಬುಧವಾರ ಕೊರೊನಾ ಟೆಸ್ಟ್ ಮಾಡಿಸಿದ್ದ 51 ಜನರ ಪೈಕಿ ನಾಲ್ವರಲ್ಲಿ ಕೋವಿಡ್​ ಕಂಡುಬಂದಿತ್ತು.

ಬೆಂಗಳೂರಿನಲ್ಲಿ ಹೆಚ್ಚು ಸೋಂಕಿತರು: ರಾಜ್ಯದಲ್ಲಿ 92 ಜನರಿಗೆ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಇದೆ ಎಂದು ಗೊತ್ತಾಗಿದೆ. ಬೆಂಗಳೂರು ನಗರದಲ್ಲೇ 80 ಇದೆ. ಮೈಸೂರು 5, ಬಳ್ಳಾರಿ 3, ರಾಮನಗರ, ಮಂಡ್ಯದಲ್ಲಿ ತಲಾ 1 ಪಾಸಿಟಿವ್ ಇದೆ. 72 ಜನರಿಗೆ ಮನೆಯಲ್ಲೇ ಕ್ವಾರಂಟೈನ್​ಗೆ ಸೂಚಿಸಿದ್ದು 20 ಜನರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಜನ ಐಸಿಯುನಲ್ಲಿದ್ದಾರೆ. ಪ್ರತಿದಿನ 5 ಸಾವಿರ ಟೆಸ್ಟ್​ಗೆ ತಾಂತ್ರಿಕ ಸಲಹಾ ಸಮಿತಿಯವರು ಹೇಳಿದ್ದಾರೆ. ರ‍್ಯಾಪಿಡ್ 1500 ಮತ್ತು ಆರ್​ಟಿಪಿಸಿಆರ್​ 3500 ಟೆಸ್ಟ್ ಸೇರಿ 5 ಸಾವಿರ ಟೆಸ್ಟ್ ಶನಿವಾರದಿಂದ ಆರಂಭಿಸಲಾಗುತ್ತದೆ ಎಂದು ಸಿಎಂ ನಿನ್ನೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಇದನ್ನೂ ಓದಿ: ಕೊರೊನಾ ಪ್ರಕರಣ ಏರಿಕೆ ಹಿನ್ನೆಲೆ: ಕೇರಳ ಗಡಿಯಲ್ಲಿ ಅಯ್ಯಪ್ಪ ಭಕ್ತರ ಮೇಲೆ ಹದ್ದಿನ ಕಣ್ಣು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.