ಮಂಗಳೂರು: ಸಿಎಂ, ಡಿಸಿಎಂ ವಿರುದ್ಧ ಆಕ್ಷೇಪಾರ್ಹ ವಿಡಿಯೋ, ಆರೋಪಿ ಬಂಧನ

author img

By ETV Bharat Karnataka Desk

Published : Jan 17, 2024, 7:13 AM IST

anil kumar

ಪಡಿತರ ಚೀಟಿಯಲ್ಲಿ ಹೆಸರು ನೋಂದಾಯಿಸಲು ಸಾಧ್ಯವಾಗದ ಕಾರಣ ಕೋಪಗೊಂಡು ಸಿಎಂ ಮತ್ತು ಡಿಸಿಎಂ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ವಿಡಿಯೋ ಮಾಡಿ ಪೋಸ್ಟ್‌ ಮಾಡಿರುವ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು: ರೇಶನ್​​ ಕಾರ್ಡ್‌ನಲ್ಲಿ ಹೆಸರು ಸೇರಿಸಲು‌ ಸಾಧ್ಯವಾಗದೇ ಆಕ್ರೋಶಗೊಂಡು ವ್ಯಕ್ತಿಯೊಬ್ಬರು ಮುಖ್ಯಮಂತ್ರಿ‌ ಮತ್ತು ಉಪ ಮುಖ್ಯಮಂತ್ರಿ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿ ವಿಡಿಯೋ ಮಾಡಿ ಬಂಧನಕ್ಕೊಳಗಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಜ್ಜರಣಿ ಗ್ರಾಮದ ಅನಿಲ್ ಕುಮಾರ್​ (34) ಬಂಧಿತ ಆರೋಪಿ. ಇವರು ಕಳೆದ 12 ವರ್ಷಗಳಿಂದ ಸುರತ್ಕಲ್ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕ್ಯಾಬ್​ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.

ಆರೋಪಿ ತನ್ನ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸಲು ಮತ್ತು ಮಂಗಳೂರಿನಲ್ಲಿ ಸ್ಥಳೀಯವಾಗಿ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದರು. ಆದರೆ ಸರ್ವರ್ ಸಮಸ್ಯೆ ಮತ್ತು ಇತರ ಕಾರಣಗಳಿಂದ ಕಳೆದ 3 ತಿಂಗಳಿಂದ ಇದನ್ನು ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹತಾಶೆಗೊಂಡು ವಿಡಿಯೋ ಮಾಡಿ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಮೊದಲಿಗೆ ಕನ್ನಡದಲ್ಲಿ ನಿಂದಿಸಿ ಬಳಿಕ ತುಳುವಿನಲ್ಲಿಯೂ ಕೆಟ್ಟ ಪದಗಳಿಂದ ಬೈದಿರುವುದು ದೃಶ್ಯದಲ್ಲಿದೆ.

ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಎನ್ಎಸ್‌ಯುಐ ದ.ಕ.ಜಿಲ್ಲಾಧ್ಯಕ್ಷ ಸುಹಾನ್​ ಆಳ್ವ ಹಾಗೂ ತಂಡ ಮಂಗಳೂರು ಪೊಲೀಸ್​ ಕಮಿಷನರ್​ಗೆ ದೂರು ನೀಡಿದ್ದರು. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ನಿಮಗೆ ಗೊತ್ತಿಲ್ಲದೇ ನಿಮ್ಮ ಫಿಂಗರ್ ಪ್ರಿಂಟ್ 5 ಸಾವಿರಕ್ಕೆ ಮಾರಾಟ: ಬ್ಯಾಂಕ್​ ಖಾತೆಯಿಂದ ಹಣ ದೋಚುತ್ತಾರೆ ಎಚ್ಚರ!

ಇತ್ತೀಚಿನ ಪ್ರಕರಣಗಳು: ಕಳೆದ ನವೆಂಬರ್​ನಲ್ಲಿ ಬೆಳ್ತಂಗಡಿಯ ಬಿಜೆಪಿ ಕಾರ್ಯಕರ್ತರೊಬ್ಬರು ಸಿಎಂ ವಿರುದ್ಧ ಅವಹೇಳನಕಾರಿ ಆಡಿಯೋ ಹರಿಬಿಟ್ಟಿದ್ದರು. ಬಳಿಕ ಅವರ ಮೇಲೆ ಎಫ್​ಐಆರ್​ ದಾಖಲಾಗಿತ್ತು. ಇದಕ್ಕೂ ಹಿಂದೆ ಸಿಎಂ, ಡಿಸಿಎಂ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಇವರ ವಿರುದ್ಧ ಬೆಂಗಳೂರಿನ ವೈಟ್‌ಫೀಲ್ಡ್ ಸೆನ್ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.