ETV Bharat / state

Mangaluru Rape and murder Case: ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

author img

By

Published : Jun 29, 2023, 7:38 AM IST

ಮಂಗಳೂರಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.

rape and murder
ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ

ಮಂಗಳೂರು: ಮನೆಗೆ ನುಗ್ಗಿ ಒಂಟಿ ಮಹಿಳೆಯನ್ನು ಅತ್ಯಾಚಾರ ಮಾಡಿ, ಹತ್ಯೆ ನಡೆಸಿರುವ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಮಂಜೇಶ್ವರ ನಿವಾಸಿ ಮೊಹಮ್ಮದ್‌ ಅಶ್ರಫ್‌ (33) ಶಿಕ್ಷೆಗೊಳಗಾದ ಅಪರಾಧಿ.

ಮೊಹಮ್ಮದ್‌ ಅಶ್ರಫ್‌ ಕೂಲಿ ಕೆಲಸ ಮಾಡಿಕೊಂಡಿದ್ದು, ವಿವಾಹವಾಗಿ ಇಬ್ಬರು ಮಕ್ಕಳಿದ್ದಾರೆ. ಈತ ಬಾಳೆಪುಣಿ ಗ್ರಾಮದ ಬೆಳ್ಕೆರಿಯಲ್ಲಿರುವ ಸಂತ್ರಸ್ತ ಮಹಿಳೆಯ ಸಹೋದರನ ಮನೆಗೆ ತೋಟದ ಕೆಲಸಕ್ಕೆ ಹೋಗಿದ್ದ. ಆ ವೇಳೆ ಮಹಿಳೆ ಮನೆಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿದ್ದನು. ಒಂದು ದಿನ ಬಾವಿಗೆ ಹೆಬ್ಬಾವು ಬಿದ್ದಿರುವುದನ್ನು ತೆಗೆಯಲು ಹೋದಾಗ ಆಕೆಯನ್ನು ಪರಿಚಯ ಮಾಡಿಕೊಂಡಿದ್ದನು. ಬಳಿಕ ಮಹಿಳೆಯನ್ನು ಅತ್ಯಾಚಾರ ಮಾಡುವ ಉದ್ದೇಶದಿಂದಲೇ 2020ರ ಸೆ.24ರಂದು ಬೆಳಗ್ಗೆ 10ಗಂಟೆಗೆ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡಿದ್ದ. ಈ ವೇಳೆ ಬಾತ್‌ರೂಮ್‌ನಲ್ಲಿ ಕ್ಲೀನ್‌ ಮಾಡುತ್ತಿದ್ದ ಮಹಿಳೆಯನ್ನು ಹಿಂದಿನಿಂದ ಬಿಗಿಯಾಗಿ ಹಿಡಿದು ನೆಲಕ್ಕೆ ಬೀಳಿಸಿದ್ದ. ಇದರಿಂದ ಪ್ರಜ್ಞಾಹೀನವಾಗಿ ಬಿದ್ದ ಸಂತ್ರಸ್ತೆ ಮೇಲೆ ಅತ್ಯಾಚಾರವಸೆಗಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ.

ಆ ಬಳಿಕ ಮಹಿಳೆಯ ಕಿವಿಯೋಲೆ, ಮನೆಯಲ್ಲಿದ್ದ 18 ಸಾವಿರ ರೂ. ದೋಚಿದ್ದಲ್ಲದೇ ಮಹಿಳೆಯ ಮೈಮೇಲಿನ ಬಟ್ಟೆಗಳಿಗೆ ಬೆಂಕಿ ಇಟ್ಟು ಸುಟ್ಟು ಸಾಕ್ಷ್ಯ ನಾಶ ಮಾಡಿದ್ದ. ಬಳಿಕ ಅಲ್ಲಿಂದ ಪರಾರಿ ಆಗಿದ್ದ. ಪ್ರಕರಣ ದಾಖಲಿಸಿಕೊಂಡ ಕೊಣಾಜೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು 2021ರ ಜು.13ರಂದು ಬಂಧಿಸಿದ್ದರು.

ಮಂಗಳೂರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್‌ ಆಯುಕ್ತ ರಂಜಿತ್‌ ಕುಮಾರ್‌ ಬಂಡಾರು ವಿಶೇಷ ತನಿಖಾಧಿಕಾರಿಯಾಗಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್‌.ವಿ. ವಿಚಾರಣೆ ನಡೆಸಿ ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ 3,01,000 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ನ್ಯಾಯಾಧೀಶರು ಅಪರಾಧಿಗೆ ಐಪಿಸಿ ಕಲಂ 302ರಡಿ ಕಠಿಣ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 2 ವರ್ಷ ಸಜೆ, ಕಲಂ 448ರಡಿ 1 ವರ್ಷ ಕಠಿಣ ಸಜೆ, 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಸಜೆ, ಕಲಂ 376ರಡಿ 10 ವರ್ಷ ಸಜೆ, 1 ಲಕ್ಷ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ವರ್ಷ ಸಜೆ, ಕಲಂ 392ರಡಿ 10 ವರ್ಷ ಕಠಿಣ ಸಜೆ, 50,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಕಠಿಣ ಸಜೆ, ಕಲಂ 201ರಡಿ 7 ವರ್ಷ ಕಠಿಣ ಸಜೆ, 50,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.

ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ವಿಶೇಷ ತನಿಖಾಧಿಕಾರಿಯಾಗಿದ್ದು, ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕರಾದ ಜ್ಯೋತಿ ಪ್ರಮೋದ್ ನಾಯಕ್ ಮತ್ತು ಬಿ. ಶೇಖರ್ ಶೆಟ್ಟಿ ವಾದಿಸಿದ್ದರು.

ಇದನ್ನೂ ಓದಿ: Rape on minor girls: ಫೇಸ್​ಬುಕ್​ ಫ್ರೆಂಡ್​ಶಿಪ್​​.. ಮೂವರು ಬಾಲಕಿಯರ ಮೇಲೆ ಮೂವರು ಯುವಕರಿಂದ ಅತ್ಯಾಚಾರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.